ಬಜೆ ಡ್ಯಾಂ ಒಳ ಹರಿವು ಹೆಚ್ಚಳ: 2.70ಮೀ. ನೀರಿನ ಸಂಗ್ರಹ

Update: 2019-06-18 16:28 GMT

 ಉಡುಪಿ, ಜೂ.18: ಉಡುಪಿ ನಗರಸಭೆಗೆ ನೀರು ಪೂರೈಕೆ ಮಾಡುವ ಬಜೆ ಡ್ಯಾಂನಲ್ಲಿ ಒಳಹರಿವು ಹೆಚ್ಚಾಗಿದ್ದು, ಇಂದು ನೀರಿನ ಸಂಗ್ರಹ 2.70 ಮೀಟರ್‌ಗೆ ಏರಿಕೆಯಾಗಿದೆ.

ಮೇ 5ರಂದು ಬಜೆಗೆ ಹರಿದು ಬರುವ ನೀರು ಸ್ಥಗಿತಗೊಂಡ ಪರಿಣಾಮ ನಗರದಲ್ಲಿ ನೀರಿನ ಸಮಸ್ಯೆ ತಲೆದೋರಿತ್ತು. ಕಳೆದ ಒಂದು ತಿಂಗಳುಗಳಿಂದ ನಗರಸಭೆಯನ್ನು ಆರು ವಿಭಾಗಗಳನ್ನಾಗಿ ವಿಂಗಡಿಸಿ ಆರು ದಿನಗಳಿಗೊಮ್ಮೆ ನೀರನ್ನು ಸರಬರಾಜು ಮಾಡಲಾಗುತ್ತಿತ್ತು.

ಕಳೆದ ಕೆಲವು ದಿನಗಳಿಂದ ಮಳೆಯಾಗುತ್ತಿರುವ ಪರಿಣಾಮ ಸ್ವರ್ಣ ನದಿ ಯಲ್ಲಿ ನೀರು ಹರಿದು ಬರುತ್ತಿದ್ದು, ಮೂರು ದಿನಗಳ ಹಿಂದೆ ಕಾರ್ಕಳದ ಮುಂಡ್ಲಿ ಅಣೆಕಟ್ಟಿಗೆ ಹಾಕಲಾಗಿದ್ದ ಗೇಟನ್ನು ತೆರವುಗೊಳಿಸಲಾಗಿತ್ತು. ಇದರ ಪರಿಣಾಮ ನೀರು ಹರಿದು ಬಂದಿದ್ದು, ಬಜೆಯಲ್ಲಿ ನೀರಿನ ಸಂಗ್ರಹದಲ್ಲಿ ಏರಿಕೆ ಕಂಡುಬಂದಿದೆ. ಆದರೂ ಸದ್ಯ ರೇಶನಿಂಗ್ ಮೂಲಕವೇ ಆರು ದಿನಗಳಿಗೊಮ್ಮೆ ನೀರು ಪೂರೈಕೆ ಮಾಡುವ ವ್ಯವಸ್ಥೆಯನ್ನು ಮುಂದುವರೆಸಲಾಗಿದೆ.

ಡ್ಯಾಂಗೆ ಶಾಸಕರ ಭೇಟಿ: ಉಡುಪಿ ಶಾಸಕ ಕೆ.ರಘುಪತಿ ಭಟ್ ಇಂದು ಬಜೆ ಡ್ಯಾಂಗೆ ಭೇಟಿ ನೀಡಿ ನೀರಿನ ಮಟ್ಟವನ್ನು ಪರಿಶೀಲಿಸಿದರು. ಒಳಹರಿವು ಹೆಚ್ಚಾಗಿರುವುದರಿಂದ ನಾಳೆ ಸಂಜೆಯ ನಂತರ ನಗರಸಭಾ ವ್ಯಾಪ್ತಿಯಲ್ಲಿ ದಿನದ 24ಗಂಟೆಗಳ ನೀರು ಪೂರೈಸುವ ವ್ಯವಸ್ಥೆಯನ್ನು ಮುಂದುವರೆಸಲಾಗುತ್ತದೆ ಎಂದು ರಘುಪತಿ ಭಟ್ ತಿಳಿಸಿದ್ದಾರೆ.

ಆದರೆ ಅಧಿಕಾರಿಗಳು ನಾಳೆಯಿಂದ ರೇಶನಿಂಗ್ ರದ್ದು ಪಡಿಸಿ 24 ಗಂಟೆ ಗಳ ನೀರು ಪೂರೈಕೆ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಈ ಬಾರಿ ಮುಂಗಾರು ದುರ್ಬಲವಾಗಿರುವುದರಿಂದ ಈಗಲೇ 24 ಗಂಟೆಗಳ ನೀರು ಪೂರೈಕೆ ಮಾಡಲು ಆಗಲ್ಲ. ಕೆಲ ದಿನಗಳ ಕಾಲ ರೇಶನಿಂಗ್ ಮುಂದುರೆಸ ಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾರ್ಕಳದಲ್ಲಿ ಗೇಟು ತೆರವುಗೊಳಿಸಿರುವುದರಿಂದ ಸ್ವರ್ಣ ನದಿಯ ನೀರು ಬಜೆ ಡ್ಯಾಂ ಕಡೆ ಹರಿದು ಬರುತ್ತಿದೆ. ಆದರೆ ಪೂರ್ಣಪ್ರಮಾಣದಲ್ಲಿ ನೀರು ಹರಿದು ಬಂದಿಲ್ಲ. ನಾಳೆ ಒಳಹರಿವು ಹೆಚ್ಚಾಗುವ ಸಾಧ್ಯತೆ ಇದೆ. ಅದರಂತೆ 24 ಗಂಟೆ ಅಲ್ಲದಿದ್ದರೂ ದಿನ ಬಿಟ್ಟು ದಿನ ನೀರು ಪೂರೈಕೆ ಮಾಡಲು ಕ್ರಮ ವಹಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News