ಕಾಪುವಿನಲ್ಲಿ ವಿವಿದೋದ್ದೇಶ ಚಂಡಮಾರುತ ಆಶ್ರಯ ತಾಣ ಉದ್ಘಾಟನೆ

Update: 2019-06-18 16:41 GMT

ಕಾಪು : ರಾಜ್ಯದ ಕರಾವಳಿಯ 3 ಜಿಲ್ಲೆಗಳಲ್ಲಿ ರಾಷ್ಟ್ರೀಯ ಚಂಡಮಾರುತ ಅಪಾಯ ಉಪಶಮನ ಯೋಜನೆಯಡಿ ಕಾಪು ಪಡು ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವಬ್ಯಾಂಕ್ ನೆರವಿನೊಂದಿಗೆ ವಿವಿದೋದ್ದೇಶ ಚಂಡಮಾರುತ ಆಶ್ರಯ ತಾಣವನ್ನು ಕಂದಾಯ ಸಚಿವ ಆರ್.ವಿ ದೇಶಪಾಂಡೆ ಮಂಗಳವಾರ ಉದ್ಘಾಟಿಸಿದರು.

ಬಳಿಕ  ಮಾತನಾಡಿದ ಅವರು, ಉಡುಪಿ ಜಿಲ್ಲೆಯಲ್ಲಿ 5.05 ಕೋ. ರೂ. ವೆಚ್ಚದಲ್ಲಿ 2 ಚಂಡ ಮಾರುತ ಆಶ್ರಯ ಕಟ್ಟಡ ನಿರ್ಮಾಣವಗಲಿದೆ. ಇದರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪಾಲು ಇದೆ. ತುರ್ತು ಸಂದರ್ಭದಲ್ಲಿ ಈ ಆಶ್ರಯ ತಾಣಗಳನ್ನು ಸಾರ್ವಜನಿಕರ ರಕ್ಷಣೆಗೆ ಬಳಸಿಕೊಳ್ಳಲಾಗುವುದು, ಉಳಿದ ದಿನಗಳಲ್ಲಿ ಶಾಲಾ ತರಗತಿ ಕೋಣೆಗಳನ್ನಾಗಿ ಉಪಯೋಗಿಸಿಕೊಳ್ಳಲಾಗುವುದು ಎಂದು ಹೇಳಿದರು.

ಇದರೊಂದಿಗೆ ಚಂಡಮಾರುತದ ಮತ್ತು ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಸಾರ್ವಜನಿಕರ ಸ್ಥಳಾಂತರವನ್ನು ಸುಗಮಗೊಳಿಸಲು ಕರಾವಳಿಯ ತೀರ ಪ್ರದೇಶದಲ್ಲಿ ಸುಮಾರು 45 ಕಿ.ಮೀ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ.  

ಜಿಲ್ಲೆಯಲ್ಲಿ 22.97 ಕೋ. ರೂ. ವೆಚ್ಚದಲ್ಲಿ 7 ಪ್ಯಾಕೇಜ್‍ನಡಿ 15 ಕಡಲ ತೀರ ರಸ್ತೆಗಳ ಅಭಿವೃದ್ಧಿ ಕಾರ್ಯ, ಮತ್ತು ಹೆಚ್ಚುವರಿಯಾಗಿ ಮಣೂರು ಗೋದನಗುಂಡಿ ಹೊಳೆಗೆ ಸೇತುವೆ ಮತ್ತು ಕೂಡುರಸ್ತೆ ನಿರ್ಮಾಣ 13.50 ಕೋ. ರೂ. ಮತ್ತು ಕೋಡಿ ಕನ್ಯಾಣ ಕೆಳಗೇರಿ - ಸಾಲಿಗ್ರಾಮ ಸೇತುವೆ ಮತ್ತು ಕೂಡು ರಸ್ತೆ ನಿರ್ಮಾಣಕ್ಕೆ 16 ಕೋ. ರೂ. ಅನುದಾನಮೀಸಲಿಡಲಾಗಿದೆ ಎಂದರು.

ಸಿಆರ್‍ಝಡ್ ತಿದ್ದುಪಡಿ: ಸಿಆರ್‍ಝಡ್ ಕಾಯ್ದೆಯನ್ನು ಸರಳೀಕರಣಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಕರಡು ನೀತಿಯನ್ನು ತಿದ್ದುಪಡಿ ಮಾಡಿದೆ. ಸಿಆರ್‍ಝಡ್ ವ್ಯಾಪ್ತಿಯನ್ನು  ಕೇಂದ್ರ ಸರ್ಕಾರವು 200 ಮೀ.ನಿಂದ 50 ಮೀ.ಗೆ ಇಳಿಸಿದೆ. ಇದರಿಂದ ಕರಾವಳಿ ತೀರ ಪ್ರದೇಶದಲ್ಲಿ ಸಾರ್ವಜನಿಕರಿಗೆ ಆಗುತ್ತಿದ್ದ ಅನಾನುಕೂಲ ಕಡಿಮೆಯಾಗಲಿದೆ.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ಈ ಬಾರಿ ಮಳೆ ವಿರಳವಾಗಿದ್ದು, ಕುಡಿಯುವ ನೀರಿನ ಬರ ಎದುರಾಗಿದೆ. ಈ ಸಮಸ್ಯೆ ಪರಿಹಾರಕ್ಕಾಗಿ ಟಾಕ್ಸ್ ಪೋರ್ಸ್ ಮಾದರಿಯಲ್ಲಿ ಕುಡಿಯುವ ನೀರು ಪೂರೈಸುವಂತೆ ಸಚಿವರು ಜಿಲ್ಲಾಡಳಿತಕ್ಕೆ ಸೂಚನೆ ನೀಡಿರುವುದು ಸ್ವಾಗತಾರ್ಹವಾಗಿದೆ ಎಂದರು. 

ಜಿಲ್ಲಾ ಪಂಚಾಯಿತಿ ಸದಸ್ಯರಾದ ಶಿಲ್ಪಾ ಜಿ. ಸುವರ್ಣ, ಗೀತಾಂಜಲಿ ಎಂ. ಸುವರ್ಣ, ವಿಲ್ಸನ್ ರೋಡ್ರಿಗಸ್, ಶಶಿಕಾಂತ್ ಪಡುಬಿದ್ರಿ, ಉಡುಪಿ ತಹಶೀಲ್ದಾರ್ ಪ್ರದೀಪ್ ಕುರುಡೇಕರ್, ಪಲಿಮಾರು ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿತೇಂದ್ರ ಪುರ್ಟಾಡೊ, ತಾಲ್ಲೂಕು ಪಂಚಾಯಿತಿ ಸದಸ್ಯ ಶೇಖಬ್ಬ, ಪುರಸಭೆ ಮಾಜಿ ಉಪಾಧ್ಯಕ್ಷ ಕೆ. ಎಚ್. ಉಸ್ಮಾನ್, ಸಹಾಯಕ ಕಮೀಷನರ್ ಡಾ. ಮಧುಕೇಶ್ವರ್, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಗೋಕುಲ್‍ದಾಸ್, ಸಹಾಯಕ ಕಾರ್ಯಪಾಲಕ ಅಭಿಯಂತರ ಜಗದೀಶ್ ಭಟ್, ಅಸಿಸ್ಟೆಂಟ್ ಇಂಜಿನಿಯರ್ ಮಿಥುನ್ ಶೆಟ್ಟಿ ಉಪಸ್ಥಿತರಿದ್ದರು.

ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಸ್ವಾಗತಿಸಿದರು. ಕಾಪು ತಹಶೀಲ್ದಾರ್ ಸಂತೋಷ್ ಕುಮಾರ್ ವಂದಿಸಿದರು. ಎಲ್ಲೂರು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಚಂದ್ರಶೇಖರ್ ಸಾಲ್ಯಾನ್ ಮಣಿಪುರ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News