ಉಳ್ಳಾಲ: ಮೆಸ್ಕಾಂ ಜನಸಂಪರ್ಕ ಸಭೆ

Update: 2019-06-18 17:05 GMT

ಮಂಗಳೂರು, ಜೂ.18: ಉಳ್ಳಾಲ ವ್ಯಾಪ್ತಿಯ ವಿವಿಧೆಡೆಯ ವಿದ್ಯುತ್ ಸಮಸ್ಯೆಗಳ ಕುರಿತು ಮೆಸ್ಕಾಂ ಜನಸಂಪರ್ಕ ಸಭೆಯು ಉಳ್ಳಾಲ ಮೆಸ್ಕಾಂ ಕಚೇರಿಯಲ್ಲಿ ಮಂಗಳವಾರ ನಡೆಯಿತು.

ಮೆಸ್ಕಾಂ ದೂರವಾಣಿಗೆ ವಿದ್ಯುತ್ ಸಂಬಂಧಿತ ಸಮಸ್ಯೆಗಳ ಬಗ್ಗೆ ದೂರಲು ಕರೆ ಮಾಡಿದರೆ ಸಂಜೆ ನಂತರ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ದೂರವಾಣಿ ವ್ಯವಸ್ಥೆಯನ್ನು ಕ್ರಮಬದ್ಧವಾಗಿ ಇರಿಸಬೇಕು. ಅನಿಯಮಿತವಾಗಿ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ ಎಂದು ನಾಗರಿಕರ ಪರವಾಗಿ ಉಳ್ಳಾಲ ಕೌನ್ಸಿಲರ್ ಮುಹಮ್ಮದ್ ಮುಕ್ಕಚರಿ ಒತ್ತಾಯಿಸಿದರು.

ಮಳೆಗಾಲದ ಸಮಯವಾದ್ದರಿಂದ ವಿದ್ಯುತ್ ಕಡಿತ ಪ್ರಸಂಗಗಳು ಹೆಚ್ಚುತ್ತಿವೆ. ವಿದ್ಯುತ್ ಕಡಿತದ ತಕ್ಷಣವೇ ವಿದ್ಯುತ್ ಸರಬರಾಜನ್ನು ಕಲ್ಪಿಸಬೇಕು. ರಾತ್ರಿ ವೇಳೆ ಉಳ್ಳಾಲ ಮೆಸ್ಕಾಂ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ಮೆಸ್ಕಾಂನ ಒಂದು ಜೀಪ್ ಬದಲಾಗಿ, ಎರಡು ಜೀಪ್‌ಗಳನ್ನು ಕೊಡಬೇಕು. ಜತೆಗೆ, ಹೆಚ್ಚುವರಿ ಸಿಬ್ಬಂದಿ ನೇಮಿಸಬೇಕು. ಈ ಮೂಲಕ ಮೆಸ್ಕಾಂನ ಸೇವೆಯನ್ನು ವಿಸ್ತರಿಸಬೇಕು. ಹಬ್ಬ-ಹರಿದಿನಗಳ ಸಂದರ್ಭ ನಿರಂತರ ವಿದ್ಯುತ್ ಸರಬರಾಜು ಮಾಡಬೇಕು ಎಂದು ಅವರು ಮನವಿ ಮಾಡಿದರು.

ಜನಸಂಪರ್ಕ ಸಭೆಯಲ್ಲಿ ಕೇಳಿ ಬಂದ ದೂರುಗಳಿಗೆ ಮೆಸ್ಕಾಂ ಅಧಿಕಾರಿಗಳು ಸಮರ್ಪಕವಾಗಿ ಸ್ಪಂದಿಸಿದರು. 

ಸಭೆಯಲ್ಲಿ ಮೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ಕೃಷ್ಣರಾಜ್, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ದಯಾನಂದ, ಕಿರಿಯ ಅಭಿಯಂತರ ರಾಜೇಶ್, ಸ್ಥಳೀಯ ಡೆನ್ನಿಸ್ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News