×
Ad

94 ಸಿ ಅರ್ಜಿಗೆ ಲಂಚದ ಬೇಡಿಕೆ: ಬೆಳ್ತಂಗಡಿ ಶಾಸಕರ ಆರೋಪ ತಳ್ಳಿ ಹಾಕಿದ ತಹಶೀಲ್ದಾರ್

Update: 2019-06-18 22:49 IST

ಬೆಳ್ತಂಗಡಿಯಲ್ಲಿ 94 ಸಿ ಅರ್ಜಿಗೆ ಸಂಬಂಧಿಸಿಂತೆ ಗ್ರಾಮಕರಣಿಕರಿಂದ ತಹಶೀಲ್ದಾರ್‌ವರೆಗೆ ಲಂಚದ ಬೇಡಿಕೆ ಇದೆ. ಇದೊಂದು ಬಹುದೊಡ್ಡ ದಂಧೆಯಾಗಿ ಪರಿಗಣಿಸಿದೆ. ಬಡವರಿಂದ ಸಾವಿರಾರು ರೂಪಾಯಿ ಲಂಚ ಪಡೆಯಲಾಗಿದೆ ಎಂದು ಶಾಸಕ ಹರೀಶ್ ಪೂಂಜಾ ಆರೋಪ ಮಾಡಿದರು.

ಇದನ್ನು ಗಂಭೀರವಾಗಿ ಪರಿಗಣಿಸಿದ ಸಚಿವ ದೇಶಪಾಂಡೆ ಬೆಳ್ತಂಗಡಿ ತಹಶೀಲ್ದಾರ್‌ರಿಂದ ಸ್ಪಷ್ಟಣೆ ಕೇಳಿದರು. ‘ಈ ಆರೋಪ ಸಂಪೂರ್ಣವಾಗಿ ಸುಳ್ಳಿನಿಂದ ಕೂಡಿದೆ. ನಾವು ಯಾರಿಂದಲೂ ಲಂಚ ಕೇಳಿಲ್ಲ. ಒಂದು ವೇಳೆ ಲಂಚದ ಆರೋಪ ಸಾಬೀತು ಮಾಡಿದರೆ ತಾನು ಸರಕಾರಿ ಸೇವೆಯಿಂದ ನಿವೃತ್ತಿ ಪಡೆಯುವೆ’ ಎಂದು ತಹಶೀಲ್ದಾರ್ ಗಣಪತಿ ಶಾಸ್ತ್ರಿ ನುಡಿದರು. ಇದರಿಂದ ಬಿಜೆಪಿ ಜಿಲ್ಲಾಧ್ಯಕ್ಷರೂ ಆಗಿರುವ ಶಾಸಕ ಸಂಜೀವ ಮಠಂದೂರು ಏರು ಧ್ವನಿಯಲ್ಲಿ ‘ಹಾಗಿದ್ದರೆ, ಒಬ್ಬ ಜವಾಬ್ದಾರಿಯುತ ಶಾಸಕರು ಸುಳ್ಳು ಹೇಳುತ್ತಿದ್ದಾರಾ?’ ಎಂದು ಕೇಳಿದರು. ಆವಾಗ ಮಧ್ಯೆ ಪ್ರವೇಶಿಸಿದ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಬೆಳ್ತಂಗಡಿ ತಹಶೀಲ್ದಾರ್‌ರ ಕಾರ್ಯವೈಖರಿಯ ಬಗ್ಗೆ ತೃಪ್ತಿ ಇದೆ. ಅವರ ಮೇಲೆ ಈವರೆಗೆ ಯಾವುದೇ ಆರೋಪ ಬಂದಿಲ್ಲ. ನಿರ್ದಿಷ್ಟ ಪ್ರಕರಣವಿದ್ದರೆ ದೂರು ನೀಡಬಹುದು. ತನಿಖೆ ನಡೆಸಲು ಬದ್ಧ ಎಂದರು.

ಮೂರ್ನಾಲ್ಕು ದಿನದೊಳಗೆ ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರು, ತಹಶೀಲ್ದಾರರು ಬೆಳ್ತಂಗಡಿಗೆ ತೆರಳಬೇಕು. ನಿರ್ದಿಷ್ಟ ಆರೋಪವಿದ್ದರೆ ಸಂಬಂಧಪಟ್ಟವರ ವಿರುದ್ಧ ತಕ್ಷಣ ಕ್ರಮ ಜರುಗಿಸಬೇಕು ಎಂದು ಸಚಿವ ದೇಶಪಾಂಡೆ ತಾಕೀತು ಮಾಡಿದರಲ್ಲದೆ, ಅರ್ಹರಿಗೆ ಹಕ್ಕುಪತ್ರ ನೀಡಲು ಸೂಕ್ತ ಕ್ರಮ ಜರುಗಿಸಬೇಕು ಎಂದರು.

ಎಲ್ಲಾ ತಹಶೀಲ್ದಾರರು ಬಾಕಿ ಅರ್ಜಿಗಳಿಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಬೇಕು. ಆವಾಗ ವಾಸ್ತವಾಂಶ ತಿಳಿಯಲಿದೆ. ಅಲ್ಲದೆ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಸಾಧ್ಯವಿದೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News