ಮುಝಫ್ಫರ್ ಪುರ ಮಕ್ಕಳ ಸಾವು: ಚಿಕಿತ್ಸೆ ನೀಡುತ್ತಿದ್ದ ವೈದ್ಯರ ಮೇಲೆ ಹರಿಹಾಯ್ದ ಆಜ್‌ತಕ್ ಪತ್ರಕರ್ತೆ !

Update: 2019-06-19 04:36 GMT

ಪಾಟ್ನಾ: ಮುಝಫ್ಫರ್ ಪುರ ಆಸ್ಪತ್ರೆಯಲ್ಲಿ ಮೆದುಳುಜ್ವರದಿಂದ ಬಳಲುತ್ತಿದ್ದ ಮಕ್ಕಳಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರನ್ನು ಅವಮಾನಿಸಿ, ಕಿರುಕುಳ ನೀಡಿದ ಆಜ್‌ತಕ್ ಪತ್ರಕರ್ತೆಯನ್ನು ವೈದ್ಯರು ಹಾಗೂ ಸಾಮಾಜಿಕ ಜಾಲತಾಣ ಬಳಕೆದಾರರು ತರಾಟೆಗೆ ತೆಗೆದುಕೊಂಡಿದ್ದಾರೆ.

ಆಜ್‌ತಕ್ ಹಿಂದಿ ಸುದ್ದಿವಾಹಿನಿಯ ಕಾರ್ಯನಿರ್ವಾಹಕ ಸಂಪಾದಕಿ ಅಂಜನಾ ಓಂ ಕಶ್ಯಪ್ ಅವರು ಮುಝಫ್ಫರ್ ಪುರ ಆಸ್ಪತ್ರೆಯ ತೀವ್ರ ನಿಗಾ ಘಟಕದಿಂದ ನೇರಪ್ರಸಾರದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ವೈದ್ಯರ ಯಾವ ತಪ್ಪು ಕೂಡಾ ಇಲ್ಲದಿದ್ದರೂ, ವೈದ್ಯರನ್ನು ತರಾಟೆಗೆ ತೆಗೆದುಕೊಂಡ ವೀಡಿಯೊ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಐಸಿಯುಗೆ ತಂದ ರೋಗಿಗಳ ಚಿಕಿತ್ಸೆಯಲ್ಲಿ ನಿರತರಾಗಿದ್ದ ವೈದ್ಯರ ಮೇಲೆ ಕಶ್ಯಪ್ ಹರಿ ಹಾಯ್ದಿದ್ದಾರೆ. ಆಸ್ಪತ್ರೆಯಲ್ಲಿ ಲಭ್ಯವಿರುವ ಬೆಡ್‌ಗಿಂತ ಹೆಚ್ಚು ಸಂಖ್ಯೆಯ ಮಕ್ಕಳು ಇರುವುದು ವೀಡಿಯೊದಲ್ಲಿ ಕಾಣಿಸುತ್ತಿದೆ. ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಕ್ಯಾಮೆರಾ ಎದುರು ಮಾತನಾಡುವಂತೆ ಒತ್ತಾಯಪಡಿಸಲಾಗುತ್ತಿದೆ. ಅದಾದ ಬಳಿಕ ವೈದ್ಯರು ಮತ್ತೆ ರೋಗಿಗಳ ಆರೈಕೆಗೆ ಮುಂದಾದಾಗ, ಆಜ್‌ತಕ್ ನಿರೂಪಕಿ ಅವರನ್ನು ಎಚ್ಚರಿಸುವ ಮೂಲಕ ತಡೆದಿದ್ದಾರೆ.

"ಒಂದು ಸೆಕೆಂಡ್.. ಮಕ್ಕಳು ಇಲ್ಲಿ ಬರುತ್ತಿದ್ದಾರೆ. ಅವರಿಗೆ ಸೂಚನೆ ನೀಡುವವರು ಯಾರೂ ಇಲ್ಲ. ನಿಮ್ಮಲ್ಲಿ ಜಾಗ ಇಲ್ಲದಿದ್ದರೆ, ಅವರನ್ನು ಬೇರೆ ವಾಡ್‌ಗೆ ಶಿಫ್ಟ್ ಮಾಡಬಹುದು" ಎಂದು ಕಶ್ಯಪ್ ಕೂಗಿ ಹೇಳುತ್ತಿದ್ದಾರೆ. ವೈದ್ಯರು ರೋಗಿಗಳ ಆರೈಕೆಗೆ ಮುಂದಾದಾಗ, ಕೋಪಗೊಂಡ ಕಶ್ಯಪ್ ಮತ್ತೆ ಅವರನ್ನು ತಡೆದು, "ಡಾಕ್ಟರ್ ಸಾಹೇಬ್, ಎಲ್ಲಿ ಹೋಗುತ್ತಿದ್ದೀರಿ? ನಾನು ನನ್ನ ಮೈಕ್ ಆನ್ ಮಾಡಿಲ್ಲವೇ? ಬಹುಶಃ ನೀವು ಒಂದು ಗಂಟೆಯಿಂದ ರೋಗಿಗಳನ್ನು ನೋಡಿದಂತಿಲ್ಲ" ಎಂದು ಹೇಳುತ್ತಿರುವುದು ಕಾಣಿಸುತ್ತಿದೆ.

ಕೋಪಗೊಂಡ ವೈದ್ಯ ಕೂಡಾ ಏರುಧ್ವನಿಯಲ್ಲೇ, "ನೀವು ಏನು ಹೇಳುತ್ತಿದ್ದೀರಿ, ನಾನು ರೌಂಡ್ಸ್ ಮಾಡುತ್ತಿದ್ದೇನೆ. ನಾನು ಇಲ್ಲಿ ಕೂತಿದ್ದೇನೆಯೇ? ನರ್ಸ್ ಕೂಡಾ ರೋಗಿಗಳ ಆರೈಕೆಯಲ್ಲಿದ್ದಾರೆ. ಕಾಣಿಸುತ್ತಿಲ್ಲವೇ" ಎಂದು ಪ್ರಶ್ನಿಸಿದ್ದಾರೆ.

ಆಗ ಕಶ್ಯಪ್ ಮತ್ತಷ್ಟು ಕೋಪಗೊಂಡು ವೈದ್ಯರ ಜತೆ ವಾಗ್ವಾದ ನಡೆಸಿದ್ದಾರೆ. ಆದರೆ ಅವರ ಆಕ್ಷೇಪವನ್ನು ವೈದ್ಯರು ತಳ್ಳಿಹಾಕಿ ವೈದ್ಯರು ತಮ್ಮ ಕೆಲಸದತ್ತ ಗಮನ ಹರಿಸಿದ್ದಾರೆ. ಈ ಕುರಿತ ವೀಡಿಯೊವನ್ನು ಆಜ್‌ತಕ್ ತಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ಹರಿದುಬಿಟ್ಟಿದೆ.

ಇದಕ್ಕೆ ತೀಕ್ಷ್ಣವಾಗಿ ಜಾಲತಾಣಿಗರು ಪ್ರತಿಕ್ರಿಯಿಸಿದ್ದಾರೆ. "ಮಕ್ಕಳ ಬಗ್ಗೆ ಅಷ್ಟೊಂದು ಕಾಳಜಿ ಇದ್ದರೆ, ಈ ಸಾವಿನ ಸರಣಿ ಆರಂಭವಾಗಿ 17 ದಿನ ಕಳೆದು ಏಕೆ ಬರಬೇಕಿತ್ತು" ಎಂದು ಪ್ರಶ್ನಿಸಿದ್ದಾರೆ. ಪತ್ರಕರ್ತರಾದ ಅಭಿಸಾರ್ ಶರ್ಮಾ ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಪ್ರತಿಕ್ರಿಯಿಸಿ, "ಈ ಬಗೆಯ ಪತ್ರಿಕೋದ್ಯಮ ನೋಡಿ ದಿಗ್ಭ್ರಮೆಯಾಗಿದೆ. ಐಸಿಯು ಒಳಗೆ ನಾಚಿಕೆಗೇಡು ಚಿತ್ರಣ" ಎಂದು ಹೇಳಿದ್ದಾರೆ.

ಕಾಂಚನ್ ಪಂತ್ ಎಂಬ ಲೇಖಕರು, "ಅಂಜನಾ ಓಂ ಕಶ್ಯಪ್; ನಿಮ್ಮ ಬಗ್ಗೆ ನಿಮಗೆ ನಾಚಿಕೆಯಾಗಬೇಕು. ಟಿಆರ್‌ಪಿ ಬೇಕಿದ್ದರೆ ಕ್ರಿಕೆಟ್ ಪಂದ್ಯ ಪ್ರಸಾರ ಮಾಡಿ ಅಥವಾ ಚಿತ್ರತಾರೆಗಳ ಸಂಬಂಧದ ಬಗ್ಗೆ ಸತ್ಯ ಅಥವಾ ಸುಳ್ಳು ವರದಿ ಮಾಡಿ. ಆದರೆ ಇಂಥ ನಾಟಕ ನಿಲ್ಲಿಸಿ" ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News