ಉಳ್ಳಾಲ ತಾಲೂಕು ರಚನೆ: ಬಂಟ್ವಾಳ ತಾಲೂಕಿನ ವಿವಿಧ ಗ್ರಾಮಗಳ ಸೇರ್ಪಡೆಗೆ ಆಕ್ಷೇಪಣೆ ಸಲ್ಲಿಕೆ

Update: 2019-06-19 12:30 GMT

ಬಂಟ್ವಾಳ, ಜೂ. 19: ನೂತನವಾಗಿ ಅಸ್ತಿತ್ವಕ್ಕೆ ಬರಲಿರುವ ಉಳ್ಳಾಲ ತಾಲೂಕಿಗೆ ಬಂಟ್ವಾಳ ತಾಲೂಕಿನ ಸಜೀಪನಡು ಗ್ರಾಮಪಂಚಾಯತ್ ವ್ಯಾಪ್ತಿ ಸೇರ್ಪಡೆಗೆ ಈ ಮೊದಲೇ ಆಕ್ಷೇಪ ದಾಖಲಿಸಿರುವ ಗ್ರಾಪಂನ ಆಡಳಿತ ಸಮಿತಿ ಇದರ ಬೆನ್ನಿಗೆ ಪುದು, ಮೇರಮಜಲು, ಕೊಡ್ಮನ್, ತುಂಬೆ ಗ್ರಾಮಗಳನ್ನು ಸೇರ್ಪಡೆಗೂ ವಿರೋಧ ವ್ಯಕ್ತವಾಗಿದೆ. 

ಪುದು ಜಿಪಂ ಸದಸ್ಯ ರವೀಂದ್ರ ಕಂಬಳಿ ಅವರನ್ನೊಳಗೊಂಡ ನಿಯೋಗ ಮಂಗಳವಾರ ಜಿಲ್ಲೆಗಾಗಮಿಸಿದ ರಾಜ್ಯ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಅವರನ್ನು ಭೇಟಿಯಾಗಿ ನೂತನ ಉಳ್ಳಾಲ ತಾಲೂಕು ರಚನೆಯ ವೇಳೆ ಮೇಲೆ ಉಲ್ಲೇಖಿಸಿರುವ ಗ್ರಾಮಗಳ ಸೇರ್ಪಡೆಗೆ ಆಕ್ಷೇಪಣೆಯನ್ನು ಸಲ್ಲಿಸಿದ್ದಾರೆ. ಈ ಸಂದರ್ಭ ಹಾಜರಿದ್ದ ಸ್ಥಳೀಯ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರಿಗೂ ಆಕ್ಷೇಪ ಪತ್ರದ ಪ್ರತಿಯನ್ನು ಸಲ್ಲಿಸಿದ್ದಾರೆ.

ನಿಯೋಗದಲ್ಲಿ ಮೇರಮಜಲು ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ನಾಯ್ಕ್, ಉಪಾಧ್ಯಕ್ಷೆ ಜಯಶ್ರೀ, ಪುದು ಪಂಚಾಯತ್ ಸದಸ್ಯ ಮನೋಜ್ ಆಚಾರ್ಯ ನಾಣ್ಯ, ಎಪಿಎಂಸಿ ಸದಸ್ಯ ವಿಠ್ಠಲ್ ಸಾಲ್ಯಾನ್, ದಿನೇಶ್ ಶೆಟ್ಟಿ ಕೊಟ್ಟಿಂಜ, ದಿನೇಶ್ ಶೆಟ್ಟಿ ಕೊಟ್ಟಿಂಜ, ಪ್ರವೀಣ್ ಶೆಟ್ಟಿ, ಅಶ್ರಫ್ ಫರಂಗಿಪೇಟೆ, ಸುರೇಶ ಶೆಟ್ಟಿ ಬರ್ಕೆ, ಸುಬ್ರಮಣ್ಯ ರಾವ್, ಅಶ್ರಫ್ ಮಾರಿಪಳ್ಳ ಮತ್ತಿತರರು ಉಪಸ್ಥಿತರಿದ್ದರು.

ಮನವಿಯಲ್ಲೇನಿದೆ ? 

ಪುದು, ಮೇರಮಜಲು, ಕೊಡ್ಮಾಣ್, ತುಂಬೆ ಗ್ರಾಮಗಳ ಸಹಿತ ಅಸುಪಾಸಿನ ಪ್ರದೇಶಗಳು ಹಲವು ವರ್ಷಗಳಿಂದ ಬಂಟ್ವಾಳ ತಾಲೂಕಿನ ಕೇಂದ್ರ ಸ್ಥಾನವಾದ ಬಿ.ಸಿ.ರೋಡಿನ ಅವಿಭಾಜ್ಯ ಅಂಗವಾಗಿದೆ. ಉಲ್ಲೇಖಿತ ಗ್ರಾಮಗಳ ಗ್ರಾಮಸ್ಥರ ಕಂದಾಯ ವ್ಯವಹಾರ ಸಹಿತ ಇತರೆ ಸರಕಾರಿ ಕಚೇರಿಗಳಲ್ಲಿ ನಡೆಯುವ ಕೆಲಸ ಕಾರ್ಯಗಳು ಸಮೀಪದ ಬಿ.ಸಿ.ರೋಡಿನಲ್ಲಿ ನಡೆದುಕೊಂಡು ಬರುತ್ತಿದೆ. ಒಂದು ವೇಳೆ ಹೊಸ ತಾಲೂಕು ರಚನೆಗಾಗಿ ಈ ಗ್ರಾಮಗಳನ್ನು ಸೇರಿಸಿಕೊಂಡರೆ ಇಲ್ಲಿನ ನಾಗರಿಕರು ತಮ್ಮ ಕಚೇರಿ ಕೆಲಸ ಕಾರ್ಯಕ್ಕೆ ನೇತ್ರಾವತಿ ನದಿಯನ್ನು ದಾಟಿ ಸುಮಾರು 35 ಕಿ.ಮೀ.ಗಿಂತಲೂ ಅಧಿಕವಾಗಿ ಪ್ರಯಾಣಿಸುವ ಅನಿವಾರ್ಯತೆ ಎದುರಾಗುತ್ತದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಹಾಗೆಯೇ ಬೌಗೋಳಿಕವಾಗಿಯೂ ಈ ಗ್ರಾಮಗಳು ಬಂಟ್ವಾಳ ತಾಲೂಕಿಗೆ ಕೇಂದ್ರಿಕೃತವಾಗಿದ್ದು, ಇಲ್ಲಿನ ನಾಗರಿಕರಿಗೂ ಅನುಕೂಲಕರವಾಗಿದೆ. ಹೊಸ ತಾಲೂಕು ರಚನೆಗೆ ಜನಸಂಖ್ಯೆಯ ಅವಶ್ಯಕತೆಯಿದೆ ಎಂಬ ಕಾರಣಕ್ಕಾಗಿ ಬಂಟ್ವಾಳ ತಾಲೂಕಿನಿಂದ ಪುದು, ಮೇರಮಜಲು, ಕೊಡ್ಮಾಣ್, ತುಂಬೆ ಗ್ರಾಮಗಳನ್ನು ಬೇರ್ಪಡಿಸಿ ಹೊಸ ತಾಲೂಕಿಗೆ ಸೇರಿಸಿದರೆ ಇಲ್ಲಿನ ನಾಗರಿಕರು ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಹಾಗಾಗಿ ಹೊಸ ಉಳ್ಳಾಲ ತಾಲೂಕು ರಚನೆಯ ವೇಳೆ ಪುದು, ಮೇರಮಜಲು, ಕೊಡ್ಮಾಣ್, ತುಂಬೆ ಗ್ರಾಮಗಳ ಸೇರ್ಪಡೆಗೆ ಸ್ಪಷ್ಟವಾದ ವಿರೋಧವಿದ್ದು, ಈ ಗ್ರಾಮಗಳನ್ನು ಹೊಸ ತಾಲೂಕು ರಚನೆಯಿಂದ ಕೈ ಬಿಡುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.

ಸಜೀಪನಡು ಗ್ರಾಮಸ್ಥರು ಪಂಚಾಯತ್ ಅಧ್ಯಕ್ಷ ನಾಸೀರ್ ಅವರ ನೇತೃತ್ವದಲ್ಲಿ ಸಭೆ ಸೇರಿ ಸಜೀಪನಡು ಗ್ರಾಮ ಪಂಚಾಯತ್ ವ್ಯಾಪ್ತಿ ಸೇರ್ಪಡೆಗೆ ಈ ಮೊದಲೇ ವಿರೋಧವನ್ನು ದಾಖಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News