ತನ್ನ ಶಾಸಕತ್ವದ ಅವಧಿಯಲ್ಲಿ 8 ಕಾಮಗಾರಿಗಳು ಮಂಜೂರುಗೊಂಡಿದೆ: ರಮಾನಾಥ ರೈ

Update: 2019-06-19 12:35 GMT

ಬಂಟ್ವಾಳ, ಜೂ. 19: ಸಿಆರ್ ಎಫ್ ಯೋಜನೆಯಡಿ ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ ತನ್ನ ಶಾಸಕತ್ವದ ಅವಧಿಯಲ್ಲಿ 8 ಕಾಮಗಾರಿಗಳು ಮಂಜೂರುಗೊಂಡಿದ್ದು, ಮೊದಲ ಹಂತದ 6 ಕಾಮಗಾರಿಗಳು ಪ್ರಗತಿಯಲ್ಲಿದೆ. ಉಳಿದಂತೆ 2ನೇ ಹಂದತ ಮಂಜೂರಾತಿ ಆದ 2 ಕಾಮಗಾರಿಗಳು ಶೀಘ್ರದಲ್ಲಿ ಅನುಷ್ಠಾನವಾಗಲಿದೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ತಿಳಿಸಿದ್ದಾರೆ.

ಅವರು ಬುಧವಾರ ಬಿ.ಸಿ.ರೋಡ್‍ನಲ್ಲಿರುವ ಪಕ್ಷದ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಂಟ್ವಾಳದ ತುಂಬ್ಯ ಜಂಕ್ಷನ್ ನಿಂದ ಸೊರ್ನಾಡುವಿನವರೆಗೆ ಸಿಆರ್‍ಎಫ್‍ನಡಿ ರಸ್ತೆ ಅಭಿವೃದ್ಧಿಗೆಂದು 4 ಕೋಟಿ ರೂ. ಮಂಜೂರುಗೊಂಡಿದ್ದು, ಕಾಮಗಾರಿ ನಡೆಯುತ್ತಿದೆ. ಮೂಡುಬಿದಿರೆ - ಬಂಟ್ವಾಳ ರಸ್ತೆ ಅಭಿವೃದ್ಧಿಗೆಂದು 13 ಕೋಟಿ ರೂ.ಗಳನ್ನು ಈಗಾಗಲೇ ರಾಜ್ಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ನಡೆಸಲಿದೆ ಎಂದರು.

ಚುನಾವಣಾ ಸಂದರ್ಭ ಮಂಜೂರುಗೊಂಡ ಕಾಮಗಾರಿಗಳು ಸರಿಯಾಗಿ ಅನುಷ್ಠಾನಗೊಂಡು ಜನರ ಕೈಗೆ ತಲುಪುವಂತೆ ಮಾಡುವುದು ತನ್ನ ಜವಾಬ್ದಾರಿ ಎಂದ ಅವರು, ಲೋಕೋಪಯೋಗಿ ಇಲಾಖೆ ಸಚಿವ ಎಚ್.ಡಿ.ರೇವಣ್ಣ ಅವರಿಗೆ ಪತ್ರ ಬರೆದಿದ್ದು, ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾಗಿ ತಿಳಿಸಿದರು.

ಅದರಂತೆ 6 ಕೋಟಿ ರೂ.ಗಳ ಕಾಮಗಾರಿ ರಸ್ತೆ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಆಗಲಿದ್ದು, ಬಂಟ್ವಾಳ ತಾಲೂಕಿನ ನೆಲ್ಲಿಗುಡ್ಡೆ-ಕೆದ್ದಳಿಕೆ-ಎನ್.ಸಿ. ರೋಡ್ ಗ್ರಾಮೀಣ ರಸ್ತೆ ಅಭಿವೃದ್ಧಿಗೆ 1 ಕೋಟಿ ರೂ., ಮಾಣಿ ಗ್ರಾಮದ ದಡಿಕೆಮಾರ್ ರಸ್ತೆ ಅಭಿವೃದ್ಧಿಗೆ 1 ಕೋಟಿ ರೂ., ಅಣ್ಣಳಿಕೆ ಕರಿಮಲೆ ರಸ್ತೆ ತಡೆಗೋಡೆ ಹಾಗೂ ರಸ್ತೆ ಅಭಿವೃದ್ಧಿಗೆ 1.4 ಕೋಟಿ ರೂ., ಮಧ್ವ - ಬರ್ಕಟಿ - ಪೆರುವಾರು ಮತ್ತು ಕಾಜೊಟ್ಟು ಕೊಪ್ಪಳದೊಟ್ಟು ಗ್ರಾಮೀಣ ರಸ್ತೆ ಅಭಿವೃದ್ಧಿಗೆ 70 ಲಕ್ಷ ರೂ., ಸರಪಾಡಿ ಗ್ರಾಮದ ಸರಪಾಡಿ ಬ¯ಯೂರು ಬಜ ಗ್ರಾಮೀಣ ರಸ್ತೆ ಅಭಿವೃದ್ಧಿಗೆ 40 ಲಕ್ಷ ರೂ. ಬಿಡುಗಡೆ ಆಗಿದ್ದು ತನ್ನ ಪ್ರಯತ್ನದಿಂದ ಎಂದರು.

ನನ್ನ ಅವಧಿಯಲ್ಲಿ ಮಂಜೂರುಗೊಂಡ ಬೆಂಜನಪದವಿನ ತಾಲೂಕು ಕ್ರೀಡಾಂಗಣ ಮತ್ತು ಬಂಟ್ವಾಳದ ಸಮಗ್ರ ಒಳಚರಂಡಿ ಯೋಜನೆ ಅನುಷ್ಠಾನಕ್ಕೆ ಸತತ ಪ್ರಯತ್ನದಲ್ಲಿರುವುದಾಗಿ ಹೇಳಿದ ಅವರು, ಸಜಿಪನಡು ಗ್ರಾಮದ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಪೈರೋಲಿಸಿಸಿ ಯಂತ್ರ ಅಳವಡಿಸುವ ಕುರಿತು ಮಂಜೂರಾತಿ ದೊರಕಿದೆ. ಈ ಕುರಿತು ಪುರಸಭೆ ಅಧಿಕಾರಿಗಳೊಂದಿಗೆ ಮಾತನಾಡಿ ಯಂತ್ರವನ್ನು ಸ್ಥಾಪಿಸುವ ಕುರಿತು ಪ್ರಯತ್ನಿಸಲಾಗುವುದು ಎಂದರು. ಪುರಸಭೆ ಚುನಾಯಿತ ಆಡಳಿತ ಇಲ್ಲದೇ ಇರುವ ಕಾರಣ ಇದು ವಿಳಂಬವಾಗಿದ್ದು, ನಿರ್ಮಲ ಬಂಟ್ವಾಳದ ತನ್ನ ಕನಸನ್ನು ನನಸುಗೊಳಿಸುವ ಪ್ರಯತ್ನ ನಡೆಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಬಿ.ಪದ್ಮಶೇಖರ ಜೈನ್, ಚಂದ್ರಪ್ರಕಾಶ್ ಶೆಟ್ಟಿ, ಮಂಜುಳಾ ಮಾವೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ, ಬೇಬಿ ಕುಂದರ್, ತಾಪಂ ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಆಲಿ, ಪ್ರಮುಖರಾದ ಸದಾಶಿವ ಬಂಗೇರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News