ಉ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ವಾರ್ಷಿಕ ಪ್ರಶಸ್ತಿಗೆ ಇಬ್ಬರು ಆಯ್ಕೆ

Update: 2019-06-19 12:43 GMT

ಭಟ್ಕಳ: ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ವಾರ್ಷಿಕ ಪ್ರಶಸ್ತಿಗೆ ಈ ಬಾರಿ ಹಿರಿಯ ಪತ್ರಕರ್ತ ಸಂಘದ ರಾಜ್ಯ ಸಮಿತಿ ಸದಸ್ಯ ಜಿ. ಸುಬ್ರಾಯ ಭಟ್ಟ ಬಕ್ಕಳ ಹಾಗೂ ಯಲ್ಲಾಪುರ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನರಸಿಂಹ ಸಾತೊಡ್ಡಿ ಆಯ್ಕೆಯಾಗಿದ್ದಾರೆ ಎಂದು ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್ಟ ಭಟ್ಕಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

ಪ್ರತಿ ವರ್ಷವೂ ಕೊಡಮಾಡುವ ಪ್ರತಿಷ್ಟಿತ ಶಾಮ್‍ರಾವ್ ಪ್ರಶಸ್ತಿಗೆ ಹಿರಿಯ ಪತ್ರಕರ್ತ, ಬರಹಗಾರ ಜಿ. ಸುಬ್ರಾಯ ಭಟ್ಟ ಬಕ್ಕಳ ಅವರನ್ನು ಇತ್ತೀಚೆಗೆ ಶಿರಸಿಯ ಪತ್ರಿಕಾ ಭವನದಲ್ಲಿ ನಡೆದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಒಮ್ಮತದಿಂದ ಆಯ್ಕೆ ಮಾಡಲಾಗಿದೆ. 

ದಿವಂಗತ ಜಿ.ಎಸ್.ಹೆಗಡೆ ಅಜ್ಜಿಬಳ ಅವರ ಸ್ಮರಣಾರ್ಥ ನೀಡುವ ಅಜ್ಜಿಬಳ ಪ್ರಶಸ್ತಿಗೆ ಯಲ್ಲಾಪುರದ ಪತ್ರಕರ್ತ ನರಸಿಂಹ ಸಾತೊಡ್ಡಿ ಅವರನ್ನು ಪ್ರಶಸ್ತಿ ಆಯ್ಕೆ ಸಮಿತಿ ಅಂತಿಮಗೊಳಿಸಿದ್ದು ಎರಡೂ ಪ್ರಶಸ್ತಿಗಳನ್ನು ದಿನಾಂಕ ಜುಲೈ 6ರಂದು ಶನಿವಾರ ಮುರ್ಡೇಶ್ವರದಲ್ಲಿ ನಡೆಯಲಿರುವ ಜಿಲ್ಲಾ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನ ಮಾಡಲಾಗುವುದು ಎಂದೂ ತಿಳಿಸಲಾಗಿದೆ. 

ಪರಿಚಯ

ಜಿ. ಸುಬ್ರಾಯ ಭಟ್ ಬಕ್ಕಳ: 

ಕಳೆದ ಮೂರು ದಶಕಗಳಿಂದ ಉತ್ತರ ಕನ್ನಡ ಜಿಲ್ಲೆಯ ಪತ್ರಿಕೋದ್ಯಮದಲ್ಲಿ ಪತ್ರಕರ್ತರಾಗಿ, ಸಾಹಿತಿಯಾಗಿ, ಸಂಘಟಕರಾಗಿ ಕಾರ್ಯನಿರ್ವಹಿಸಿದ ಜಿ. ಸುಬ್ರಾಯ ಭಟ್ ಬಕ್ಕಳ ಮೂಲತಃ ಶಿರಸಿ ತಾಲೂಕಿನ ಬಕ್ಕಳದವರು. ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯ ಹಾಗೂ ಪತ್ರಿಕೋಮದಲ್ಲಿ ತಮ್ಮ ಬರವಣಿಗೆಯ ಗೀಳನ್ನು ಬೆಳೆಸಿಕೊಂಡವರು. 1999ರಲ್ಲಿ "ಉದ್ಯಮದರ್ಶಿ" ರಾಜ್ಯವ್ಯಾಪಿ ಪ್ರಸಾರಹೊಂದಿದ ವಿನೂತನ ಮಾಸಪತ್ರಿಕೆಯನ್ನು ತಮ್ಮದೇ ಮಾಲಿಕತ್ವದಲ್ಲಿ ಹೊರತಂದು ಪತ್ರಿಕೆಯ ಸಂಪಾದಕರಾಗಿ, ಪ್ರಕಾಶಕರಾಗಿ 13 ವರ್ಷಗಳ ಕಾಲ ಮುನ್ನಡೆಸಿದರು.

ಉಳುಮೆ ಸಾಹಿತ್ಯ ಮಾಸಪತ್ರಿಕೆ ಮತ್ತು ಜನಮಾಧ್ಯಮ ದಿನಪತ್ರಿಕೆಯ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಕಳೆದ ಏಳು ವರ್ಷಗಳಿಂದ ಶಿರಸಿಯ ಸುಮುಖ ಟಿವಿಯ ಸ್ಥಾಪಕ ಹಾಗೂ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್‍ನ ಅಧ್ಯಕ್ಷರಾಗಿ, ಬಕುಲ ಸಾಹಿತ್ಯ ಪ್ರತಿಷ್ಠಾನದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಾಹಿತ್ಯಿಕವಾಗಿ ಈವರೆಗೆ 5 ಕೃತಿಗಳನ್ನು ಹೊರತಂದಿದ್ದು ಕನ್ನಡ ಸಾಹಿತ್ಯದಲ್ಲಿ ಪ್ರಥಮವಾಗಿ ಸ್ವತಂತ್ರ ಗಝಲ್ ಸಂಕಲನ ಹೊರತಂದ ಹೆಗ್ಗಳಿಕೆ ಇವರದ್ದಾಗಿದೆ. 

ಉತ್ತರ ಕನ್ನಡ ಜಿಲ್ಲೆಯ ಪತ್ರಿಕಾ ಮಂಡಳಿಯ ಪ್ರಧಾನ ಕಾರ್ಯದರ್ಶಿಯಾಗಿ, ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ 11 ವರ್ಷಗಳ ಕಾಲ ಯಶಸ್ವೀಯಾಗಿ ಮುನ್ನೆಡೆಸಿದ್ದಾರೆ. ಇವರ ಅಧ್ಯಕ್ಷತೆಯ ಅವಧಿಯಲ್ಲಿ ಸಂಘಕ್ಕೆ ಸ್ವಂತ ನಿವೇಶನ, ಕಟ್ಟಡ, ಜಿಲ್ಲಾ ಸಮ್ಮೇಳನ ಮುಂತಾದ ದಾಖಲಾರ್ಹ ಕಾರ್ಯ ನಡೆಸಿದ್ದಾರೆ. ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿಣಿ ಸದಸ್ಯರಾಗಿ ಎರಡು ಅವಧಿ ಕಾರ್ಯನಿರ್ವಹಿಸಿದಲ್ಲದೇ ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾಗಿ ಜಿಲ್ಲೆಯಿಂದ ನೇಮಕಗೊಂಡ ಪ್ರಥಮರು. 

ಈಗಾಗಲೇ ಕುವೆಂಪು ಸಾಹಿತ್ಯ ಪ್ರಶಸ್ತಿ, ಪತ್ರಿಕೋದ್ಯಮ ಸಾಧನೆಗೆ ಡಿವಿಜಿ ಪುರಸ್ಕಾರ ಲಭಿಸಿದೆ ಸೇರಿದಂತೆ ಅನೇಕ ಪ್ರಶಸ್ತಿಗಳು ಲಭಿಸಿದೆ.  ರಾಜ್ಯ ಜಿಲ್ಲೆಯ ಹಲವು ಸಂಘಟನೆಗಳು ಸನ್ಮಾನಿಸಿವೆ. ಪ್ರಸ್ತುತ ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರತರ್ಕತ ಸಂಘ ನೀಡುವ ಕೆ. ಶ್ಯಾಮರಾವ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ನರಸಿಂಹ ವಿಶ್ವೇಶ್ವರ ಭಟ್ಟ: 

ಯಲ್ಲಾಪುರದ ಬಳಗಾರ ಗ್ರಾಮದಲ್ಲಿ ಜನಿಸಿದ ನರಸಿಂಹ ಸಾತೊಡ್ಡಿ ಇವರು ಎಂ.ಎ. ಬಿ.ಇಡಿ. ಪದವೀಧರರು. 1990ರಿಂದ ಹೊಸದಿಗಂತ ಪತ್ರಿಕೆಯ ಮೂಲಕ ಪತ್ರಿಕೋಧ್ಯಮಕ್ಕ ಕಾಲಿಟ್ಟಿ ಇವರು ನಂತರ ಧ್ಯೇಯನಿಷ್ಟ ಪತ್ರಕರ್ತ, ಚುನಾವಣೆ, ಉಷಾಕಿರಣ, ವಿಯವಾಹಿನಿ, ಕನ್ನಡ ಪ್ರಭದ ವರದಿಗಾರರಾಗಿ ಕಾರ್ಯ ನಿರ್ವಹಿಸಿದ್ದು ಪ್ರಸ್ತುತ ಉದಯವಾಣಿ ಪತ್ರಿಕೆಯ ಯಲ್ಲಾಪುರ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 

ತಮ್ಮ ವಿಶೇಷ ವರದಿಗಳ, ತನಿಖಾ ವರದಿಗಳು, ರಾಜಕೀಯ ಸ್ಥಿತ್ಯಂತರದ ಸುದ್ದಿಗಳ ಮೂಲಕ ವಿಶೇಷವಾದ ಛಾಪು ಮೂಡಿಸಿದ ಇವರು ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡು ಜನರೊಂದಿಗೆ ಬೆರೆತು ಕಾರ್ಯ ಮಾಡುವವರು. ಅನೇಕ ಸಂಘ ಸಂಸ್ಥೆಗಳಲ್ಲಿ ಕಾರ್ಯ ಮಾಡಿದ್ದ ಇವರು ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿಯಾಗಿ ಎರಡು ಅವಧಿಗೆ ಕರ್ತವ್ಯ ನಿರ್ವಹಿಸಿದ್ದು ಹಾಲಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಉ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಧ್ಯಕ್ಷರಾಗಿ, ಕನ್ನಡ ಸಾಹಿತ್ಯ ಪರಿಷತ್, ರೆಡ್ ಕ್ರಾಸ್, ಭಾರತೀಯ ಕಿಸಾನ್ ಸಂಘದ ತಾಲೂಕಾ ಅಧ್ಯಕ್ಷರಾಗಿ, ಕಿಸಾನ್ ಸಂಘದ ಮಾಧ್ಯಮ ಪ್ರಮುಖರಾಗಿ ಸೇವೆ ಸಲ್ಲಿಸಿದ್ದ ಇವರು ವೃಕ್ಷ ಲಕ್ಷ ಆಂದೋಲನದ ಸಕ್ರಿಯ ಸದಸ್ಯರೂ ಆಗಿದ್ದಾರೆ.

ತಮ್ಮ ಕಾಲೇಜು ದಿನಗಳಿಂದಲೇ ನ್ಯಾಯಕ್ಕಾಗಿ ಹೋರಾಟದ ಮನೋಭಾವನೆ ಬೆಳೆಸಿಕೊಂಡಿದ್ದ ಇವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‍ನ ವಿವಿಧ ಹಂತದ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. ಪ್ರಶಸ್ತಿಯನ್ನೇ ಬಯಸದ ಇವರಿಗೆ ವಿವಿಧ ಸಂಘ ಸಂಸ್ಥೆಗಳು ಗೌರವಿಸಿ, ಸನ್ಮಾನಿಸಿವೆ. ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ವಾರ್ಷಿಕವಾಗಿ ಕೊಡಮಾಡುವ ಜಿ.ಎಸ್.ಹೆಗಡೆ ಅಜ್ಜಿಬಳ ಪ್ರಶಸ್ತಿಯ ಆಯ್ಕೆ ಸಮಿತಿ ಇವರನ್ನು ಆಯ್ಕೆ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News