'ಸರ್ಕಾರದ ಯೋಜನೆ, ಸಹಾಯಧನ ನೇರ ನಗದು ವರ್ಗಾವಣೆಗೆ ಆಧಾರ್ ಲಿಂಕ್ ಕಡ್ಡಾಯ'

Update: 2019-06-19 12:45 GMT

ಪುತ್ತೂರು: ಸರಕಾರದ ಯಾವುದೇ ಸಹಾಯಧನ ಯೋಜನೆಯ ಹಣವು ರೈತರಿಗೆ ನೇರ ನಗದು ವರ್ಗಾವಣೆ ಮೂಲಕ ಸಿಗಬೇಕಾದರೆ ಫಲಾನುಭವಿಗಳ ಖಾತೆಯನ್ನು ಆಧಾರ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಲಿಂಕ್ ಮಾಡಲು ಬಾಕಿ ಇರುವವರು ತಕ್ಷಣ ಮಾಡಿಸಿಕೊಳ್ಳುವಂತೆ ಪುತ್ತೂರು ತಹಸೀಲ್ದಾರ್ ಕಚೇರಿ ಪ್ರಕಟಣೆ ತಿಳಿಸಿದೆ.

ಕಳೆದ ವರ್ಷ ಕಾಣಿಸಿಕೊಂಡ ಅಡಕೆ ಕೊಳೆರೋಗಕ್ಕೆ ಸಂಬಂಧಿಸಿ ಪುತ್ತೂರು ತಾಲೂಕಿನಲ್ಲಿ 15 ಸಾವಿರಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿದ್ದವು. ಅದರಲ್ಲಿ ಈಗಾಗಲೇ 50 ಶೇಕಡಾದಷ್ಟು ಜನರಿಗೆ ಪರಿಹಾರದ ಮೊತ್ತ ಪಾವತಿ ಮಾಡಲಾಗಿದೆ. ಇನ್ನರ್ಧ ಜನರಿಗೆ ನೇರ ನಗದು ವರ್ಗಾವಣೆಯಾಗಲು ಬಾಕಿ ಇದೆ. ಸರಕಾರದಿಂದ ಹಣವು ಕಂತು ಪ್ರಕಾರ ಪಾವತಿಯಾಗುತ್ತಿದ್ದು, ಇನ್ನೂ ಎರಡು ಕಂತುಗಳಲ್ಲಿ ಪಾವತಿಯಾಗಲಿಕ್ಕಿದೆ. ಅದು ಪೂರ್ಣಗೊಂಡಾಗ ಎಲ್ಲರಿಗೂ ಸಿಗಲಿದೆ. ಆದರೆ ಬ್ಯಾಂಕ್ ಖಾತೆಯನ್ನು ಆಧಾರ್‍ಗೆ ಲಿಂಕ್ ಮಾಡದೇ ಇದ್ದರೆ ಅಂಥವರಿಗೆ ಹಣ ಸಿಗುವುದಿಲ್ಲ. ಬದಲಾಗಿ ಆ ಹಣ ಸಸ್ಪೆನ್ಸ್ ಅಕೌಂಟ್‍ಗೆ ಹೋಗುವ ಸಾಧ್ಯತೆ ಇದೆ. ಆಧಾರ್ ಲಿಂಕ್ ಆದ ಮೇಲಷ್ಟೇ ಹಣ ಸಿಗಲಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಫಲಾನುಭವಿ ರೈತರು ಆಧಾರ್ ಲಿಂಕ್ ಮಾಡಿಸಿಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಕೆಲವು ರೈತರು ತಮಗೆ ಪರಿಹಾರ ಮೊತ್ತ ಸಿಕ್ಕಿಲ್ಲ ಎಂದು ದೂರುತ್ತಿರುವ ಹಿನ್ನೆಲೆಯಲ್ಲಿ ಈ ಸೂಚನೆ ನೀಡಲಾತ್ತಿದೆ.

ಇದಲ್ಲದೆ ಇತ್ತೀಚೆಗೆ ಘೋಷಿಸಲಾದ ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಮೊತ್ತ ಕೂಡ ರೈತರ ಖಾತೆಗೆ ನೇರವಾಗಿ ವರ್ಗಾವಣೆಯಾಗುತ್ತಿದೆ. ಈ ಯೋಜನೆಯ ಹಣ ಸಿಗದವರು ಆಧಾರ್ ಲಿಂಕ್ ಮಾಡಿಸಿಕೊಳ್ಳದೇ ಇದ್ದಲ್ಲಿ ತಕ್ಷಣ ತಮ್ಮ ಖಾತೆಯನ್ನು ಆಧಾರ್ ಲಿಂಕ್ ಮಾಡುವಂತೆ ತಹಶೀಲ್ದಾರ್ ಡಾ. ಪ್ರದೀಪ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News