ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿ ನೇತೃತ್ವದಲ್ಲಿ ಸುನ್ನಿ ಉಲೆಮಾಗಳ ಸಮಾಲೊಚನಾ ಸಭೆ

Update: 2019-06-19 13:20 GMT

ಮಂಗಳೂರು, ಜೂ.19: ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿ ನೇತೃತ್ವದಲ್ಲಿ ಖಾಝಿಗಳ ಹಾಗೂ ಸುನ್ನಿ ಉಲೆಮಾ ಮತ್ತು ನಾಯಕರ ಸಮಾಲೊಚನಾ ಸಭೆಯು ಮಂಗಳವಾರ ವಕ್ಫ್ ಕಚೇರಿಯಲ್ಲಿ ಜರುಗಿತು.

ಸಭೆಯ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಹಾಜಿ ಯು.ಕೆ.ಮೋನು ಕಣಚೂರು ಜಿಲ್ಲೆಯಲ್ಲಿ ಪದೇ ಪದೇ ಉದ್ಭವವಾಗುವ ಉಭಯ ಗುಂಪುಗಳ ಸಿಲೆಬಸ್ ಮತ್ತಿತರ ಧಾರ್ಮಿಕ ವಿಷಯದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಉಲೆಮಾಗಳ ಸಲಹಾ ಮಂಡಳಿಯ ಮೂಲಕ ಸಮಾಜದ ಐಕ್ಯತೆ, ಸೌರ್ಹಾದತೆ ಹಾಗೂ ಅಭಿವೃದ್ಧಿಗಾಗಿ ಪಣ ತೊಡುವ ಅಗತ್ಯವಿದೆ ಎಂದರು.

ಆಯಾಯ ಮೊಹಲ್ಲಾದವರು ಆಯಾಯ ಖಾಝಿಗಳ ಸಲಹೆ ಸೂಚನೆ ಪಡೆದು ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಏನಾದರು ಭಿನ್ನಾಭಿಪ್ರಾಯ ಉದ್ಬವ ಆದರೆ ಉಲಮಾಗಳ ಸಲಹಾ ಮಂಡಳಿಯು ಆ ಜಮಾಅತಿನ ಸಮಸ್ಯೆಯನ್ನು ಬಗೆಹರಿಸಲಿದೆ. ಈ ಸಮಿತಿಯು ಮೂರು ತಿಂಗಳಿಗೊಮ್ಮೆ ಸಭೆ ಸೇರಿ ಸಮುದಾಯುದ ಹಿತಕ್ಕಾಗಿ ಚರ್ಚೆ ನಡೆಸಿ ಮುನ್ನಡೆಯಬೇಕು. ಮದುವೆಯು ಪಾರದರ್ಶಕತೆಯಿಂದ ನಡೆಯುವ ಸಲುವಾಗಿ ಜಿಲ್ಲಾದ್ಯಂತ ಮಸೀದಿಗಳಲ್ಲಿ ಏಕರೂಪದ ನಿಖಾಹ್‌ನಾಮ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ಅದಕ್ಕಾಗಿ ಜಿಲ್ಲಾ ವಕ್ಫ್ ಕಚೇರಿಯಿಂದಲೇ ಎಲ್ಲಾ ಮಸೀದಿಗಳಿಗೆ ನಿಗದಿತ ನಮೂನೆಯ ನಿಖಾಹ್‌ನಾಮವನ್ನು ಕಳುಸಿಕೊಡಲಾಗುವುದು ಎಂದು ಕಣಚೂರು ಮೋನು ಹೇಳಿದರು.

ದ.ಕ.ಜಿಲ್ಲಾ ಖಾಝಿ ಅಲ್-ಹಾಲ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಅನಿವಾರ್ಯ ಕಾರಣದಿಮದ ಸಭೆಗೆ ಹಾಜರಾಗದ ಕಾರಣ ಮುಂದಿನ ಸಭೆಗೆ ಅವರನ್ನು ಆಹ್ವಾನಿಸಿ ಉಲಮಾ ಮಂಡಳಿಯ ಅಗತ್ಯದ ಬಗ್ಗೆ ಮನವರಿಕೆ ಮಾಡಿಕೊಡಲಾಗುವುದು ಎಂದರು.

ಉಡುಪಿ ಖಾಝಿ ಅಲ್‌ಹಾಜ್ ಬೇಕಲ ಇಬ್ರಾಹೀಂ ಮುಸ್ಲಿಯಾರ್ ದುಆಗೈದರು. ಬಳಿಕ ಮಾತನಾಡಿದ ಅವರು ಜಮಾಅತಿನಲ್ಲಿ ಐಕ್ಯತೆಯನ್ನು ಕಾಪಾಡಿಕೊಂಡು ಬರುವುದು ಅತೀ ಮುಖ್ಯವಾಗಿದೆ ಎಂದರು.

ಸಭೆಯಲ್ಲಿ ಖಾಝಿ ಅಲ್‌ಹಾಜ್ ಸಯ್ಯದ್ ಫಝಲ್ ಕೋಯಮ್ಮ ತಂಙಳ್, ಅಲ್‌ಹಾಜ್ ಬಿ.ಕೆ. ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ, ಎಸ್.ಪಿ.ಹಂಝ ಸಖಾಫಿ, ಎಂಎಸ್‌ಎಂ ಅಬ್ದುಲ್ ರಶೀದ್ ಝೈನಿ, ಹಾಜಿ ಎನ್.ಕೆ.ಎಂ. ಶಾಫಿ ಸಅದಿ, ಕೆ.ಕೆ. ಮಹಿಯುದ್ಧೀನ್ ಕಾಮಿಲ್ ಸಖಾಫಿ, ಕೆ.ಎಲ್. ಉಮರ್ ದಾರಿಮಿ ಪಟ್ಟೋರಿ, ಶರೀಫ್ ಫೈಝಿ ಕಡಬ, ಹುಸೇನ್ ದಾರಿಮಿ ರೆಂಜಲಾಡಿ ಪುತ್ತೂರು, ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ, ಕೆ.ಎಂ. ಸಿದ್ಧೀಖ್ ಮೋಂಟುಗೋಳಿ, ಮಮ್ತಾಜ್ ಅಲಿ, ಯಾಕೂಬ್ ಯೂಸುಫ್, ಹಮೀದ್ ಮಡಿಕೇರಿ, ಶಾಹುಲ್ ಹಮೀದ್ ಮೆಟ್ರೊ ಗುರುಪುರ, ಎಂ.ಪಿ. ಮೊಯಿದಿನಬ್ಬ ಮಂಗಳೂರು, ಕಾನೂನು ಸಲಹೆಗಾರ ನೂರುದ್ಧೀನ್ ಸಲ್ಮಾರ್, ಇಸ್ಮಾಯೀಲ್ ನೆಲ್ಯಾಡಿ ಉಪಸ್ಥಿತರಿದ್ದರು. ಜಿಲ್ಲಾ ವಕ್ಫ್ ಅಧಿಕಾರಿ ಎಂ. ಅಬೂಬಕರ್ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News