ಜೂ.21: ವಿವಿದೆಡೆಗಳಲ್ಲಿ ಅಂ.ರಾ.ಯೋಗ ದಿನಾಚರಣೆ

Update: 2019-06-19 13:26 GMT

ಉಡುಪಿ, ಜೂ.19:ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂ.21ರ ಶುಕ್ರವಾರ ಮರೆನಾ ಒಳಾಂಗಣ ಕ್ರೀಡಾ ಸಂಕೀರ್ಣದಲ್ಲಿ ಆಯೋಜಿಸಿದೆ.

ಮಾಹೆಯ ಪ್ರೊ ವೈಸ್ ಚಾನ್ಸಲರ್ ಡಾ.ಪಿಎಲ್‌ಎನ್‌ಜಿ ರಾವ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ರಿಜಿಸ್ಟ್ರಾರ್ ಡಾ.ನಾರಾಯಣ ಸಭಾಹಿತ್, ಕೆಎಂಸಿಯ ಸಿಒಒ ಸಿ.ಜಿ.ಮುತ್ತಣ್ಣ ಹಾಗೂ ಕೆಎಂಸಿಯ ಉಪ ವೈದ್ಯಕೀಯ ಅಧೀಕ್ಷಕ ಡಾ.ಪದ್ಮರಾಜ ಹೆಗ್ಡೆ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.

ವಿವಿಯ ಯೋಗ ವಿಭಾಗದ ಮುಖ್ಯಸ್ಥೆ ಡಾ.ಅನ್ನಪೂರ್ಣ ಕೆ. ಅವರು ಬೆಳಗ್ಗೆ 8:00ರಿಂದ 8:40ರವರೆಗೆ ಯೋಗದ ವಿವಿಧ ಆಸನಗಳ ಕುರಿತು ಮಾಹೆಯ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳಿಗೆ ಯೋಗದ ಪ್ರಾತ್ಯಕ್ಷಿಕೆಯನ್ನು ನೀಡುವರು. ಬಳಿಕ 8:45ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಬಿಜೆಪಿ: ಪ್ರಧಾನಿ ನರೇಂದ್ರ ಮೋದಿ ಅವರು ಮಹತ್ವಾಕಾಂಕ್ಷಿ ವಿಶ್ವ ಯೋಗ ದಿನಾಚರಣೆಯನ್ನು ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಹೊಟೇಲ್ ಕಿದಿಯೂರಿನ ಶೇಷಶಯನ ಹಾಲ್‌ನಲ್ಲಿ ಬೆಳಗ್ಗೆ 7:30ರಿಂದ 10:00ಗಂಟೆಯ ವರೆಗೆ ಆಯೋಜಿಸಲಾಗಿದೆ ಎಂದು ಬಿಜೆಪಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಯಿಲಾಡಿ ಸುರೇಶ್ ನಾಯಕ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪಕ್ಷದ ಎಲ್ಲಾ ಪದಾಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಕಾರ್ಯಕರ್ತರು ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ರಾಜಾಂಗಣ: ಉಡುಪಿ ಜಿಲ್ಲಾ ಪತಂಜಲಿ ಯೋಗ ಸಮಿತಿ, ಸ್ವಾಮಿ ವಿವೇಕಾನಂದ ಯೋಗ ವಿಜ್ಞಾನ ಕೇಂದ್ರ ಉಡುಪಿ, ಎಸ್‌ಪಿವೈಎಸ್‌ಎಸ್ ಕರ್ನಾಟಕ ಸಮಿತಿ, ಸಿದ್ಧಿ ಸಮಾಧಿ ಯೋಗ ಉಡುಪಿ, ಶ್ರೀವಿವೇಕಾನಂದ ಜಿಲ್ಲಾ ಯೋಗ ಸ್ವಾಸ್ಥ ಕೇಂದ್ರ ಉಡುಪಿ, ಶ್ರೀಕೃಷ್ಣ ಯೋಗ ಕೇಂದ್ರ ಬ್ರಹ್ಮಗಿರಿ ಹಾಗೂ ಆರೋಗ್ಯ ಭಾರತಿ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಯೋಗ ದಿನಾಚರಣೆ ಜೂ.21ರಂದು ಬೆಳಗ್ಗೆ 5:30ರಿಂದ 7:00ಗಂಟೆಯವರೆಗೆ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ.

ಯೋಗ ದಿನಾಚರಣೆಯನ್ನು ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಲಿದ್ದಾರೆ. ಕಿರಿಯ ಯತಿಗಳಾದ ಶ್ರೀವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಉಪಸ್ಥಿತರಿರುವರು. ಉಡುಪಿ ಜಿಲ್ಲಾ ಭಾರತ್ ಸ್ವಾಭಿಮಾನ್ ಟ್ರಸ್ಟ್‌ನ ಜಿಲ್ಲಾ ಪ್ರಭಾರಿ ಕರಂಬಳ್ಳಿ ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News