ಜೂ.22ಕ್ಕೆ ಯಕ್ಷಗಾನ ಪ್ರಸಂಗಗಳ ಲೋಕಾರ್ಪಣೆ

Update: 2019-06-19 13:27 GMT

ಉಡುಪಿ, ಜೂ.19: ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು, ಯಕ್ಷಗಾನ ಕೇಂದ್ರ ಇಂದ್ರಾಳಿ ಉಡುಪಿ ಇವರ ಸಹಭಾಗಿತ್ವದಲ್ಲಿ ‘ಯಕ್ಷಗಾನ ಪ್ರಸಂಗಗಳ ಲೋಕಾರ್ಪಣೆ’ ಕಾರ್ಯಕ್ರಮವನ್ನು ಜೂ.22ರ ಶನಿವಾರ ಸಂಜೆ 4:00ಗಂಟೆಗೆ ಇಂದ್ರಾಳಿಯಲ್ಲಿರುವ ಯಕ್ಷಗಾನ ಕೇಂದ್ರದಲ್ಲಿ ಹಮ್ಮಿಕೊಂಡಿದೆ.

ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಪ್ರೊ. ಎಂ.ಎ. ಹೆಗಡೆ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಉಡುಪಿ ಯಕ್ಷಗಾನ ಕೇಂದ್ರದ ಸಂಯೋಜಕ ಪ್ರೊ.ವರದೇಶ ಹಿರೇಗಂಗೆ ಕೃತಿಗಳ ಲೋಕಾರ್ಪಣೆ ಮಾಡಲಿದ್ದಾರೆ.

ಕಾರ್ಯಕ್ರಮದಲ್ಲಿ ಅಂಬಾತನಯ ಮುದ್ರಾಡಿ ರಚಿಸಿರುವ ‘ಪಂಚಭೂತ ಪ್ರಪಂಚ’ ಕೃತಿ ಪರಿಚಯವನ್ನು ಯಕ್ಷಗಾನ ಕವಿ, ವಿಮರ್ಶಕ ಕೆ.ಎಂ.ರಾಘವ ನಂಬಿಯಾರ್ ಮಾಡಲಿದ್ದಾರೆ. ಕಂದಾವರ ರಘುರಾಮ ಶೆಟ್ಟಿ ರಚಿಸಿರುವ ‘ಪ್ರಸಂಗ ಪಂಚಮಿ’ ಕೃತಿ ಪರಿಚಯವನ್ನು ಹಂಗಾರಕಟ್ಟೆ ಯಕ್ಷಗಾನ ಕೇಂದ್ರದ ಪ್ರಾಚಾರ್ಯ ಗುಂಡ್ಮಿ ಸದಾನಂದ ಐತಾಳ ಮಾಡಲಿದ್ದಾರೆ.

ಅತಿಥಿಗಳಾಗಿ ಡಾ. ಬಾಸ್ಕರಾನಂದ ಕುಮಾರ್, ರಾಜಶೇಖರ ಹೆಬ್ಬಾರ್, ಪಿ.ಕಿಶನ್ ಹೆಗ್ಡೆ ಪಾಲ್ಗೊಳ್ಳಲಿದ್ದಾರೆ. ಯಕ್ಷಗಾನ ಕೇಂದ್ರದ ಪ್ರಾಚಾರ್ಯ ಬನ್ನಂಜೆ ಸಂಜೀವ ಸುವರ್ಣ ಹಾಗೂ ಕರ್ನಾಟಕ ಯಕ್ಷಗಾನ ಅಕಾಡೆಮಿ ರಿಜಿಸ್ಟ್ರಾರ್ ಎಚ್. ಶಿವರುದ್ರಪ್ಪಉಪಸ್ಥಿತರಿರುವರು ಎಂದು ಯಕ್ಷಗಾನ ಕೇಂದ್ರದ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News