ಕೃಷಿಯಲ್ಲಿ ಅನಗತ್ಯ ಕ್ರಮಗಳನ್ನು ನಿಲ್ಲಿಸಿ: ಪಾದೂರು ತಂತ್ರಿ

Update: 2019-06-19 13:28 GMT

ಕಾಪು, ಜೂ.19: ಕೃಷಿಕರು ನಾವು ಅನುಸರಿಸಿದ ಕ್ರಮಗಳೆಲ್ಲವೂ ಸರಿ ಎಂದು ತಿಳಿಯದೇ, ಪ್ರಗತಿಪರ ರೈತರು, ಕೃಷಿ ವಿಜ್ಞಾನಿಗಳ ಸಲಹೆ-ಕೃಷಿ ವಿಧಾನಗಳನ್ನು ಕೇಳಿ-ನೋಡಿ ಮುಂದುವರಿದರೆ ಕೃಷಿಯಲ್ಲಿ ನಷ್ಟದ ಮಾತು ಇರುವುದಿಲ್ಲ ಎಂದು ಎಂದು ಪಾದೂರಿನ ಪ್ರಗತಿಪರ ಕೃಷಿಕ ಸುಬ್ರಹ್ಮಣ್ಯ ತಂತ್ರಿ ಹೇಳಿದ್ದಾರೆ.

ಉಡುಪಿ ಜಿಲ್ಲಾ ಕೃಷಿಕ ಸಂಘದ ಆಶ್ರಯದಲ್ಲಿ ಪಾದೂರು ಕುರಾಲು ರೈಸ್ ಮಿಲ್ ಬಳಿ ಸರೋಜ ತಂತ್ರಿ ಅವರ ಮನೆ ವಠಾರದಲ್ಲಿ ನಡೆದ ತೆಂಗು ಕೃಷಿ ಮಾಹಿತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಜಿಲ್ಲಾ ಕೃಷಿಕ ಸಂಘದ ಸಲಹೆಯಂತೆ ಕಳೆದ 20 ವರ್ಷಗಳಿಂದ ತೆಂಗಿನ ಮರಗಳಿಗೆ ಕಟ್ಟೆ ಕಟ್ಟದೆ ಪ್ರಯೋಗದ ಕೃಷಿ ಮಾಡಿ ತನಗೆ ಸಾವಿರಾರು ರೂ. ಕೂಲಿ ಹಣ ಉಳಿತಾಯವಾಗಿದೆಯಲ್ಲದೆ ತೆಂಗು ಸಮೃದ್ಧವಾಗಿ ಬೆಳೆದು ಫಸಲಿನಲ್ಲೂ ಲಾಭ ಪಡೆದಿದ್ದೇನೆ. ತೆಂಗಿನ ತೋಟದ ತ್ಯಾಜ್ಯವನ್ನು ಬಿಸಾಡದೆ ತೆಂಗಿನ ಮರದ ಬುಡಕ್ಕೆ ಹರಡಿದರೆ ಬೇಸಿಗೆಯಲ್ಲಿ ನೀರಿನ ಪ್ರಮಾಣ ಕಡಿಮೆ ಇದ್ದಾಗಕೂಡ ತೋಟ ಹಾಳಾಗುವುದಿಲ್ಲ ಎಂದು ಸುಬ್ರಹ್ಮಣ್ಯ ತಂತ್ರಿ ನುಡಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಹಾಗೂ ವೇಣುಗೋಪಾಲ ಎಂ. ಪಡುಕಳತ್ತೂರು ತೆಂಗು ಕೃಷಿಯ ಸಮಗ್ರ ಮಾಹಿತಿ ನೀಡಿದರು. ವಿಠಲ ತಂತ್ರಿ, ರಘುಪತಿ ತಂತ್ರಿ, ಶಂಕರ ಶೆಟ್ಟಿಗಾರ್, ಸರೋಜ ತಂತ್ರಿ ಮೊದಲಾದವರು ಉಪಸ್ಥಿತರಿದ್ದರು.

ಮಜೂರು ಗ್ರಾಮ ಪಂಚಾಯತ್ ಅಧ್ಯಕ್ಷ ಸಂದೀಪ್ ರಾವ್ ಉದ್ಘಾಟಿಸಿದ ಕಾರ್ಯಕ್ರಮದಲ್ಲಿ ಗ್ರಾಪಂ ಉಪಾಧ್ಯಕ್ಷೆ ಸಹನಾ ತಂತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹರಿಕೃಷ್ಣ ಐತಾಳ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News