ಲಿಂಗ ರೂಢಮಾದರಿಯನ್ನು ಕೈಬಿಟ್ಟ ಮಹಾರಾಷ್ಟ್ರದ ಶಾಲಾ ಪಠ್ಯಪುಸ್ತಕಗಳು

Update: 2019-06-19 14:05 GMT

ಪುಣೆ,ಜೂ.19: ತಾಯಿ ಅಡುಗೆಮನೆಯಲ್ಲಿ ತರಕಾರಿಗಳನ್ನು ಹೆಚ್ಚುತ್ತಿರುವ ಮತ್ತು ತಂದೆ ಹಾಯಾಗಿ ಕುರ್ಚಿಯಲ್ಲಿ ಕುಳಿತುಕೊಂಡು ವೃತ್ತಪತ್ರಿಕೆಯನ್ನು ಓದುತ್ತಿರುವ ಚಿತ್ರಗಳಿದ್ದ ಪಠ್ಯಪುಸ್ತಕಗಳನ್ನು ಓದಿಕೊಂಡೇ ಅವೆಷ್ಟೋ ತಲೆಮಾರುಗಳು ಬೆಳೆದಿವೆ. ಆದರೆ ಮಹಾರಾಷ್ಟ್ರದಲ್ಲಿ ಇದೀಗ ಸಂಪೂರ್ಣವಾಗಿ ಬದಲಾಗಲಿದೆ.

ರಾಜ್ಯದ ಪಠ್ಯಕ್ರಮ ಮಂಡಳಿ ಬಾಲಭಾರತಿಯು ಬದಲಾಗುತ್ತಿರುವ ಸಾಮಾಜಿಕ ಸ್ವರೂಪಕ್ಕನುಗುಣವಾಗಿ ಲಿಂಗ ಸಮಾನತೆಯನ್ನು ಎತ್ತಿಹಿಡಿಯಲು ಮತ್ತು ಮಹಿಳೆಯನ್ನು ಹೆಚ್ಚು ಪ್ರಗತಿಪರ ಹಿನ್ನೆಲೆಯಲ್ಲಿ ಬಿಂಬಿಸಲು ತನ್ನ ಹಲವಾರು ಪಠ್ಯಪುಸ್ತಕಗಳು ಮತ್ತು ಅವುಗಳಲ್ಲಿಯ ಇಂತಹ ಚಿತ್ರಗಳಲ್ಲಿ ಬದಲಾವಣೆಗಳನ್ನು ತಂದಿದೆ ಎಂದು ಮಂಡಳಿಯ ಅಧಿಕಾರಿಯೋರ್ವರು ತಿಳಿಸಿದರು. ಬಾಲಭಾರತಿಯು ಪಠ್ಯ ಪುಸ್ತಕಗಳಲ್ಲಿಯ ಲಿಂಗ ರೂಢಮಾದರಿಯನ್ನು ನಿವಾರಿಸಲು ಉದ್ದೇಶಿಸಿದೆ ಮತ್ತು ಎರಡನೇ ತರಗತಿಯ ಪರಿಷ್ಕೃತ ಪಠ್ಯಪುಸ್ತಕದಲ್ಲಿ ಪುರುಷರು ಮತ್ತು ಮಹಿಳೆಯರು ಮನೆಗೆಲಸಗಳನ್ನು ಹಂಚಿಕೊಂಡು ಮಾಡುತ್ತಿರುವ ಚಿತ್ರಗಳು ಮತ್ತು ವಿಷಯಗಳನ್ನು ಸೇರಿಸಿದೆ ಎಂದು ಅವರು ಹೇಳಿದರು.

ಚಿತ್ರವೊಂದರಲ್ಲಿ ಪುರುಷ ಮತ್ತು ಮಹಿಳೆ ಅಕ್ಕಪಕ್ಕದಲ್ಲಿ ಕುಳಿತುಕೊಂಡು ತರಕಾರಿಗಳನ್ನು ಸ್ವಚ್ಛಗೊಳಿಸುತ್ತಿದ್ದರೆ,ಇತರ ಚಿತ್ರಗಳಲ್ಲಿ ಮಹಿಳೆಯನ್ನು ವೈದ್ಯೆ,ಟ್ರಾಫಿಕ್ ಪೊಲೀಸ್ ಇತ್ಯಾದಿ ರೂಪಗಳಲ್ಲಿ ಬಿಂಬಿಸಲಾಗಿದೆ. ಒಂದು ಚಿತ್ರದಲ್ಲಿ ಪುರುಷನನ್ನು ಬಾಣಸಿಗನ ರೂಪದಲ್ಲಿ ತೋರಿಸಲಾಗಿದ್ದು,ಚಿತ್ರವನ್ನು ನೋಡಿ ಕೆಲವು ವಾಕ್ಯಗಳನ್ನು ಬರೆಯುವಂತೆ ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ. ಇನ್ನೊಂದು ಚಿತ್ರದಲ್ಲಿ ಪುರುಷ ಬಟ್ಟೆಗಳಿಗೆ ಇಸ್ತ್ರಿ ಹಾಕುತ್ತಿರುವುದನ್ನು ತೋರಿಸಲಾಗಿದೆ.

 ಪಠ್ಯಪುಸ್ತಕದ ಆರಂಭದಲ್ಲಿ ಹಲವಾರು ಸೂಚನೆಗಳ ಮೂಲಕ ಮಹಿಳಾ ಪೈಲಟ್,ಪುರುಷ ಬಾಣಸಿಗ ಮತ್ತು ಮಹಿಳಾ ಪೊಲೀಸ್‌ನಂತಹ ಚಿತ್ರಗಳು ಮತ್ತು ವಿಷಯಗಳನ್ನು ಗಮನಿಸುವಂತೆ ಹಾಗೂ ಅವುಗಳ ಬಗ್ಗೆ ಮತ್ತು ಈ ಸಾಮಾಜಿಕ ಬದಲಾವಣೆಗಳ ಕುರಿತು ಮಾತನಾಡುವಂತೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ.

ಪುರುಷರು ಮತ್ತು ಮಹಿಳೆಯರು ಸಮಾನರು ಮತ್ತು ಇಬ್ಬರೂ ಯಾವುದೇ ಕೆಲಸವನ್ನು ಮಾಡಬಲ್ಲರು ಎಂಬ ಚಿಂತನೆಯನ್ನು ವಿದ್ಯಾರ್ಥಿಗಳಲ್ಲಿ ಮೈಗೂಡಿಸುವುದು ಈ ಬದಲಾವಣೆಗಳ ಹಿಂದಿನ ಉದ್ದೇಶವಾಗಿದೆ ಎಂದು ಬಾಲಭಾರತಿಯ ನಿರ್ದೇಶಕ ಸುನಿಲ ಮಗರ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ಲಿಂಗ ಸಮಾನತೆಗೆ ಒತ್ತು ನೀಡುವ ಪಠ್ಯಪುಸ್ತಕಗಳಲ್ಲಿಯ ಈ ಬದಲಾವಣೆಗಳನ್ನು ಶಿಕ್ಷಕ ವೃಂದವು ಸ್ವಾಗತಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News