ರಾಜ್ಯದ ಸಮ್ಮಿಶ್ರ ಸರಕಾರ ದಲಿತ ಪಾಲಿಗೆ ಕಂಟಕ: ಮಾವಳ್ಳಿ ಶಂಕರ್

Update: 2019-06-19 15:00 GMT

ಉಡುಪಿ, ಜೂ.19: ರಾಜ್ಯದಲ್ಲಿರುವ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ದಲಿತರ ಪಾಲಿಗೆ ಕಂಟಕವಾಗಿದ್ದು, ಕಾಂಗ್ರೆಸ್ ಪಕ್ಷಕ್ಕೆ ಸಾಮಾಜಿಕ ನ್ಯಾಯದಲ್ಲಿ ನಿಜವಾಗಿಯೂ ನಂಬಿಕೆ ಇರುವುದೇ ಹೌದಾದರೆ , ಸರಕಾರಕ್ಕೆ ನೀಡಿರುವ ಬೆಂಬಲವನ್ನು ಹಿಂದೆಗೆದುಕೊಂಡು ಸರಕಾರದಿಂದ ತಕ್ಷಣ ಹೊರಬರಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಆಗ್ರಹಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾವಳ್ಳಿ ಶಂಕರ್, ರಾಜ್ಯ ಸರಕಾರ ದಲಿತರ ಕುರಿತಂತೆ ಮಾಡುವ ಘೋಷಣೆಗೂ, ವಾಸ್ತವಾಂಶಗಳಿಗೂತಾಳಮೇಳವೇ ಇಲ್ಲವಾಗಿದೆ. ದಲಿತರ ಕಾನೂನನ್ನು ಜಾರಿಗೊಳಿಸಲು ಯಾವುದೇ ಮುತುವರ್ಜಿ ತೋರಿಸದ ಸರಕಾರ, ಒಂದು ವರ್ಗಕ್ಕೆ ಸೀಮಿತವಾದಂತೆ ವರ್ತಿಸುತ್ತಿದೆ ಎಂದು ಆರೋಪಿಸಿದರು.

ರಾಜ್ಯದ ಪರಿಶಿಷ್ಟ ಜಾತಿ, ಪಂಗಡದ ಆಯೋಗ ಕಳೆದೊಂದು ವರ್ಷದಿಂದ ಅಧ್ಯಕ್ಷರಿಲ್ಲದೇ ಅನಾಥವಾಗಿದೆ. ಉಳಿದೆಲ್ಲಾ ಆಯೋಗ, ನಿಗಮಗಳಿಗೆ ಅಧ್ಯಕ್ಷರನ್ನು ತ್ವರಿತವಾಗಿ ನೇಮಿಸುವ ಸರಕಾರ, ಎಸ್‌ಸಿಎಸ್‌ಟಿ ಆಯೋಗಕ್ಕೆ ಅರ್ಹ ಅಧ್ಯಕ್ಷರ ನೇಮಕಕ್ಕೆ ನಿರ್ಲಕ್ಷ ತೋರಿಸುತ್ತಿದೆ. ಈ ಬಗ್ಗೆ ಸಮಿತಿ ಸಚಿವ ಪ್ರಿಯಾಂಕ ಖರ್ಗೆಯವರನ್ನು ಭೇಟಿಯಾಗಿ ಮನವಿ ಸಲ್ಲಿಸಿ ಒತ್ತಾಯಿಸಿದರೂ, ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ. ನುರಿತ ಕಾನೂನು ತಜ್ಞರೊಬ್ಬರನ್ನು ಈ ಸ್ಥಾನಕ್ಕೆ ಕೂಡಲೇ ನೇಮಿಸಬೇಕೆಂದು ನಾವು ಒತ್ತಾಯಿಸುತ್ತೇವೆ ಎಂದವರು ಹೇಳಿದರು.

ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಮುತುವರ್ಜಿಯಿಂದ ದಲಿತರ ವಿಶೇಷ ಘಟಕ ಯೋಜನೆ 2014ರಲ್ಲಿ ಜಾರಿಗೆ ಬಂದಿದ್ದು, ತಮಗೆ ಸಿಕ್ಕಿರುವ ಮಾಹಿತಿಗಳಂತೆ ಈವರೆಗೆ ಬಜೆಟ್‌ನಲ್ಲಿ ಒಟ್ಟು 1.42ಲಕ್ಷ ಕೋಟಿ ರೂ. ಮಂಜೂರಾಗಿದೆ. ಆದರೆ ರಾಜ್ಯದ ದಲಿತರ ಬಡತನ ಮಾತ್ರ ಕಡಿಮೆ ಯಾಗಿಲ್ಲ. ಹಾಗಿದ್ದರೆ ಈ ಹಣ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದ ಶಂಕರ್, ಬೇರೆ ಬೇರೆ ಇಲಾಖೆಗಳಿಗೆ ಹಂಚಿಕೆಯಾಗುವ ಹಣ, ಬೇರೆ ವಿವಿಧ ಉದ್ದೇಶ ಗಳಿಗೆ ಖರ್ಚಾಗುತ್ತಿದೆ ಎಂದು ದೂರಿದರು.

ದಲಿತರಿಗಾಗಿ ಮೀಸಲಿಟ್ಟು ವಿಶೇಷ ಘಟಕ ಯೋಜನೆಯನ್ನು ರಾಷ್ಟ್ರ ಮಟ್ಟದಲ್ಲಿ ಅಳವಡಿಸಿಕೊಂಡು ಜಾರಿಗೊಳಿಸಲು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಬೇಕಾಗಿದೆ ಎಂದ ಅವರು, ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಠ ಪಂಗಡಗಳಿಗೆ ನೀಡಲಾಗುವ ಅನುದಾನವನ್ನು ಸಮರ್ಪಕವಾಗಿ ಬಳಸದೇ, ದಲಿತರ ಕೋಟ್ಯಾಂತರ ರೂ.ಗಳನ್ನು ದುರುಪಯೋಗ ಪಡಿಸಿಕೊ ಳ್ಳಲಾಗುತ್ತಿದೆ ಎಂದರು.

ದಲಿತ ದೌರ್ಜನ್ಯ ವಿರೋಧಿ ಕಾಯ್ದೆಯನ್ನು ಇನ್ನಷ್ಟು ಬಿಗಿಗೊಳಿಸಬೇಕು ಒಂದು ಒತ್ತಾಯಿಸಿದ ಶಂಕರ್, ದಲಿತ ದೌರ್ಜನ್ಯ ಪ್ರಕರಣದಲ್ಲಿ ಕೇವಲ ಶೇ.3ರಷ್ಟು ಪ್ರಕರಣಗಳಲ್ಲಿ ಮಾತ್ರ ಚಾರ್ಜ್‌ಶೀಟ್ ಹಾಕಿ ಉಳಿದ ಶೇ.97 ಪ್ರಕರಣಗಳಲ್ಲಿ ಬಿ ರಿಪೋರ್ಟ್ ಹಾಕಿ ದಲಿತರಿಗೆ ಅನ್ಯಾಯಮಾಡಲಾಗುತ್ತಿದೆ ಎಂದರು.

ರಾಜ್ಯದಲ್ಲಿ ಪರಿಶಿಷ್ಟ ಜಾತಿಯವರ ಆದಾಯಮಿತಿಯನ್ನು ಹೆಚ್ಚಿಸಬೇಕು. ರಾಜ್ಯ ಅಂಬೇಡ್ಕರ್ ನಿಗಮದಲ್ಲಿ ದಲಿತರ ಸ್ವಉದ್ಯೋಗಕ್ಕೆ ನೀಡುವ ಅನುದಾನವನ್ನು ಹೆಚ್ಚಿಸಬೇಕು. ಕೇಂದ್ರ ಸರಕಾರ ದಲಿತರ ಅಭಿವೃದ್ಧಿಗೆ ಸಂವಿಧಾನಾತ್ಮವಾಗಿ ಸೂಕ್ತ ಅನುದಾನವನ್ನು ಮೀಸಲಿಡಬೇಕು ಹಾಗೂ ದಲಿತರಿಗೆ ಸೂಕ್ತ ಪ್ರಾತಿನಿಧ್ಯ ನೀಡಬೇಕು ಎಂದು ಆಗ್ರಹಿಸಿದರು.

ಡಿ.ಸಿ.ಮನ್ನಾ ಭೂಮಿ: ಕರಾವಳಿಯ ಎರಡು ಜಿಲ್ಲೆಗಳಲ್ಲಿ ದಲಿತರಿಗಾಗಿ ಮೀಸಲಿಟ್ಟ ಡಿ.ಸಿ.ಮನ್ನಾ ಭೂಮಿಯನ್ನು ದಲಿತರಿಗೆ ಹಂಚಿಕೆ ಮಾಡುವಂತೆ ಒತ್ತಾಯಿಸಿ ಕಳೆದ ಎರಡು ದಶಕಗಳಿಗೆ ಹೋರಾಟ ನಡೆಯುತಿದ್ದರೂ ಸರಕಾರ ಈ ಬಗ್ಗೆ ಸ್ಪಷ್ಟವಾದ ನಿಲುವು ತೆಗೆದುಕೊಳ್ಳಲು ವಿಫಲವಾಗಿದೆ. ದಲಿತರಿಗೆ ಮೀಸಲಿಟ್ಟ 800 ಎಕರೆ ಭೂಮಿಯನ್ನು ಗೇರು ಅಭಿವೃದ್ಧಿ ನಿಗಮಕ್ಕೆ ನೀಡಿದ್ದು, ಅದಕ್ಕೆ ಬದಲಿ ಭೂಮಿಯನ್ನು ನೀಡಬೇಕು ಎಂದು ರಾಜ್ಯ ಸಂಘಟನಾ ಸಂಚಾಲಕ ಚಂದು ಎಲ್.ಒತ್ತಾಯಿಸಿದರು.

ದಲಿತರಿಗೆ ಭಡ್ತಿಯಲ್ಲಿ ಮೀಸಲಾತಿ ಬಗ್ಗೆ ಸುಪ್ರೀಂ ಕೋರ್ಟ್ ಹಾಗೂ ರಾಷ್ಟ್ರಪತಿಗಳು ಅಂಕಿತ ಹಾಕಿದ್ದರೂ ರಾಜ್ಯ ಸರಕಾರ ಅದನ್ನು ಪರಿಣಾಮಕಾರಿ ಯಾಗಿ ಜಾರಿಗೊಳಿಸಲು ವಿಫಲವಾಗಿದೆ. ಇದರಲ್ಲಿ ದಲಿತರನ್ನು ವಂಚಿಸಲಾಗುತ್ತಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮೈಸೂರು ವಿಭಾಗ ಸಂಘಟನಾ ಸಂಚಾಲಕ ಬಿ.ಕೆ. ವಸಂತ್, ಜಿಲ್ಲಾ ಸಮಿತಿಯ ಸದಸ್ಯ ಸುಂದರ್ ಗುಜ್ಜರಬೆಟ್ಟು, ಮಂಗಳೂರು ಜಿಲ್ಲಾ ಸಂಘಟನಾ ಸಂಚಾಲಕ ಗಂಗಾಧರ ಆದ್ಯಪಾಡಿ, ದಸಂಸ ಪಡುಬಿದ್ರಿ ಪ್ರಧಾನ ಸಂಚಾಲಕ ಲೋಕೇಶ್ ಪಡುಬಿದ್ರಿ ಹಾಗೂ ಜಿಲ್ಲಾ ಸಂಘಟನಾ ಸಂಚಾಲಕ ಶಂಕರ್‌ದಾಸ್ ಉಪಸ್ಥಿತರಿದ್ದರು.

ಗುಂಡ್ಲುಪೇಟೆ ಬೆತ್ತಲೆ ಪ್ರಕರಣ: ಬಾಧಿತರ ಪರ ಸಮಾಜ ನಿಲ್ಲಲಿ

ಗುಂಡ್ಲುಪೇಟೆಯಲ್ಲಿ ಇತ್ತೀಚೆಗೆ ನಡೆದ ದಲಿತ ಯುವಕ ಪ್ರತಾಪ್ ಅವರ ಬೆತ್ತಲೆ ಮೆರವಣಿಗೆ ಪ್ರಕರಣ ನಾಗರಿಕ ಸಮಾಜ ತಲೆತಗ್ಗಿಸುವ ಅಮಾನವೀಯ ಪ್ರಕರಣ ಎಂದ ಮಾವಳ್ಳಿ ಶಂಕರ್, ಇದನ್ನು ದಸಂಸ ಉಗ್ರವಾಗಿ ಖಂಡಿಸುತ್ತದೆ ಎಂದರು.

ಪ್ರತಾಪ್ ಮೇಲೆ ನಡೆದ ದೌರ್ಜನ್ಯವನ್ನು ಸಮಾಜ ಜಾತಿ ಆಧಾರದಲ್ಲಿ ನೋಡಬಾರದು. ಸಮಾಜ ಒಕ್ಕೊರಳಿನಿಂದ ಇದನ್ನು ಖಂಡಿಸಬೇಕಾಗಿದೆ ಹಾಗೂ ಬಾಧಿತರ ಪರವಾಗಿ ನಿಲ್ಲಬೇಕಾಗಿದೆ. ಆದರೆ ದಿನಗಳೆದಂತೆ ಈ ಪ್ರಕರಣ ಬಿಸಿಯನ್ನು ಕಳೆದುಕೊಳ್ಳುತಿದ್ದು, ಹಳ್ಳ ಹಿಡಿಯುವ ಲಕ್ಷಣ ಗೋಚರಿಸುತ್ತಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News