ಹೊರ ರಾಜ್ಯ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಶೇ.5 ಸೀಟು ಮೀಸಲಾತಿ: ಶೈಕ್ಷಣಿಕ ಮಂಡಳಿ ಸಭೆ

Update: 2019-06-19 15:34 GMT

ಮಂಗಳೂರು, ಜೂ.19: ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ದೇಶದ ಯಾವೂದೇ ಭಾಗದಲ್ಲಿ 1ನೆ ತರಗತಿಯಿಂದ 10ನೆ ತರಗತಿಯ ವರಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದವರಿಗೆ ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಉನ್ನತ ಶಿಕ್ಷಣ ಅಧ್ಯಯನ ಮಾಡುವ ಸಂದರ್ಭದಲ್ಲಿ ಶೇ 5 ಸೀಟು ಮೀಸಲಿಡುವ ಪ್ರಸ್ತಾಪಕ್ಕೆ ಶೈಕ್ಷಣಿಕ ಮಂಡಳಿಯ ಸಭೆಯಲ್ಲಿ ಇಂದು ಅನುಮೋದನೆ ನೀಡಿತು.

ಮಂಗಳಗಂಗೋತ್ರಿ ವಿಶ್ವ ವಿದ್ಯಾನಿಲಯದ ಆಡಳಿತ ಸೌಧದಲ್ಲಿರುವ ಸೆನೆಟ್ ಸಭಾಂಗಣದಲ್ಲಿಂದು ನೂತನ ಕುಲಪತಿ ಪಿ.ಸುಬ್ರಹ್ಮಣ್ಯ ಎಡಪಡಿತ್ತಾಯ ರವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಶೈಕ್ಷಣಿಕ ಮಂಡಳಿಯ ಸಭೆ ನಡೆಯಿತು.

ಗಡಿನಾಡು ಮತ್ತು ಹೊರ ರಾಜ್ಯದಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದಂತಾಗುತ್ತದೆ .ಕನ್ನಡ ಅಭಿವೃದ್ಧಿ ಪ್ರಾಧಿಕಾರ ಈ ಬಗ್ಗೆ ಸುತ್ತೋಲೆಯೊಂದನ್ನು ವಿಶ್ವ ವಿದ್ಯಾನಿಲಯಕ್ಕೆ ಕಳುಹಿಸಿದ ಹಿನ್ನೆಲೆಯಲ್ಲಿ ಶೇ 5ರಷ್ಟು ಮೀಸಲಾತಿಯ ನೀಡಲು ಸಭೆ ಅನುಮೋದನೆ ನೀಡಿತು.

5.10 ಕೋಟಿ ರೂಗಳ ಕೊರತೆ ಬಜೆಟ್ ಮಂಡನೆ:- ಕಳೆದ ಲೋಕ ಸಭಾ ಚುನಾವಣಾ ಹಿನ್ನೆಲೆಯಲ್ಲಿ ಮಾರ್ಚ್ ತಿಂಗಳಲ್ಲಿ ನಡೆಯಬೇಕಾಗಿದ್ದ ವಿಶ್ವ ವಿದ್ಯಾನಿಲಯದ ಬಜೆಟ್ ಮಂಡನೆ ಸಭೆ ಇಂದು ನಡೆಯಿತು.ವಿಶ್ವ ವಿದ್ಯಾನಿಲಯದ ಹಣಕಾಸು ಅಧಿಕಾರಿ ದಯಾನಂದ ನಾಯಕ್ ಬಜೆಟ್ ಮಂಡಿಸಿ ವಿವರ ನೀಡಿದರು.

2019ರ ಸಾಲಿನಲ್ಲಿ ಒಟ್ಟು 350 .80 ಕೋಟಿ ರೂ ಸ್ವೀಕೃತಿ(ಆದಾಯ) ಹಾಗೂ 350 ಕೋಟಿ ರೂ ವೆಚ್ಚ ದ ವಿವರಗಳನ್ನೊಗೊಂಡ ವಿಶ್ವ ವಿದ್ಯಾನಿಲಯದ ಬಜೆಟ್‌ನಲ್ಲಿ 5.10 ಕೋಟಿ ರೂ ಕೊರತೆಯಾಗಲಿದೆ.2018-19ರಲ್ಲಿ ರೂ.5.95 ಕೋಟಿ ರೂ ಕೊರತೆ ಬಜೆಟ್ ಮಂಡಿಸಲಾಗಿತ್ತು .ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ಬಿಡುಗಡೆಯಾಗಬಹುದಾದ ಅನುದಾನಗಳ ನಿರೀಕ್ಷೆಯೊಂದಿಗೆ ಈ ವರದಿ ತಯಾರಿಸಲಾಗಿದೆ. ಸ್ಥಳೀಯ ದಾನಿಗಳ ದೇಣಿಗೆ ಮತ್ತು ಹಳೆ ವಿದ್ಯಾರ್ಥಿಗಳ ದೇಣಿಗೆಯೊಂದಿಗೆ ಆಯವ್ಯಯದಲ್ಲಿ ಕಂಡು ಬಂದ ಕೊರತೆಯನ್ನು ಸರಿದೂಗಿಸಬಹುದು ಎಂದು ಹಣಕಾಸು ಅಧಿಕಾರಿ ತಿಳಿಸಿದ್ದಾರೆ.

ಹೊಸ ಪ್ರಸ್ತಾವನೆಗಳು:- ಈ ಬಾರಿಯ ಬಜೆಟ್‌ನಲ್ಲಿ ಸುಮಾರು 20ಲಕ್ಷ ರೂ ವೆಚ್ಚದಲ್ಲಿ 400 ಮೀಟರ್ ವರ್ತುಲದ ಹೊರಾಂಗಣ ಟ್ರಾಕ್ ನಿರ್ಮಾಣ.40 ಲಕ್ಷ ರೂ ವೆಚ್ಚದಲ್ಲಿ ಮಳೆ ನೀರು ಕೊಯ್ಲು ಯೋಜನೆ,ಒಂದು ಕೋಟಿ ರೂ ವೆಚ್ಚದಲ್ಲಿ ಪರೀಕ್ಷಾ ಭವನ ನಿರ್ಮಾಣ,40 ಕೋಟಿ ರೂ ವೆಚ್ಚದಲ್ಲಿ ಬೆಳಪುವಿನಲ್ಲಿ ಸುಧಾರಿತ ಸಂಶೋಧನಾ ಕೇಂದ್ರ ನಿರ್ಮಾಣ, 25 ಕೋಟಿ ರೂ ವೆಚ್ಚದಲ್ಲಿ ಅಂತಾರಾಷ್ಟ್ರೀಯ ಕಟ್ಟಡ ನಿರ್ಮಾಣ, 35 ಲಕ್ಷ ರೂ ವೆಚ್ಚದಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣ,ಒಂದು ಕೋಟಿ ರೂ ವೆಚ್ಚದಲ್ಲಿ ಆಡಳಿತ ಸೌಧದಲ್ಲಿ ರೆಕಾರ್ಡ್ ರೂಂ ನಿರ್ಮಾಣ, ಒಂದು ಕೋಟಿ ರೂ ವೆಚ್ಚದಲ್ಲಿ ತ್ಯಾಜ್ಯ ನೀರಿನ ಮರು ಶುದ್ಧೀಕರಣ ಘಟಕ,50ಲಕ್ಷ ರೂ ವೆಚ್ಚದಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯದ ಆವರಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಕೇಂದ್ರ ಆರಂಭಿಸುವುದು.

ಆರು ಕೋಟಿ ರೂ ವೆಚ್ಚದಲ್ಲಿ ಪ.ಜಾತಿ, ಪ.ಪಂಗಡದ ವಿದ್ಯಾರ್ಥಿಗಳಿಗೆ ಮಂಗಳೂರು ವಿ.ವಿ ಆವರಣದಲ್ಲಿ ವಿದ್ಯಾರ್ಥಿ ನಿಲಯ ನಿರ್ಮಾಣ,50ಲಕ್ಷ ರೂ ವೆಚ್ಚದಲ್ಲಿ ಲಿಪ್ಟ್ ಸೌಲಭ್ಯ ನಿರ್ಮಾಣ 50ಲಕ್ಷ ರೂ ವೆಚ್ಚದಲ್ಲಿ ಐದು ವರ್ಷಗಳ ಕಾನೂನು ಅಧ್ಯಯನ ಕ್ಕಾಗಿ ಕಟ್ಟಡ ನಿರ್ಮಾಣ ಯೋಜನೆ ಈ ಬಾರಿಯ ಬಜೆಟ್ ಪ್ರಸ್ತಾವನೆಯಲ್ಲಿ ಒಳಗೊಂಡಿದೆ.

ಹೊಸ ಕಟ್ಟಡ ಮತ್ತು ಇತರ ಮೂಲಭೂತ ಸೌಲಭ್ಯಗಳ ಈಡೇರಿಕೆಗಾಗಿ ಸರಕಾರಕ್ಕೆ ಈಗಾಗಲೇ 109.57 ಕೋಟಿ ರೂ ಕೋರಿಕೆ ಸಲ್ಲಿಸಲಾಗಿದೆ. ಸರಕಾರದ ಯೋಜನೆ ಶೀರ್ಷಿಕೆಯಲ್ಲಿ ವಿಶೇಷ ಅನುದಾನ ಬಿಡುಗಡೆ ಮಾಡುವ ನಿರೀಕ್ಷೆಯಲ್ಲಿ 2019-20ನೆ ಸಾಲಿನಲ್ಲಿ ಅಯವ್ಯಯ ರೂ.ರೂ 121.83 ಕೋಟಿ ರೂ ಖರ್ಚುಗಳ ಪ್ರಸ್ತಾವನೆಯನ್ನು ಮಾಡಿದೆ. ಈ ಪ್ರಸ್ತಾವನೆಗೆ ಸಂಬಂಧಿಸಿದಂತೆ ಕೇವಲ 94ಲಕ್ಷ ಮಾತ್ರ ಬಿಡುಗಡೆ ಮಾಡಲಾಗಿದೆ ಎಂದು ಹಣಕಾಸು ಅಧಿಕಾರಿ ಸಭೆಯ ಗಮನ ಸೆಳೆದರು.

ಸಭೆಯಲ್ಲಿ ಕುಲಪತಿ ಪಿ.ಎಸ್.ಎಡಪಡಿತ್ತಾಯರವರ ಅಧ್ಯಕ್ಷತೆಯಲ್ಲಿ 12ಮಂದಿ ಸದಸ್ಯರನ್ನೊಳಗೊಂಡ ನೂತನ ಶೈಕ್ಷಣಿಕ ಮಂಡಳಿಯನ್ನು ರಚಿಸಲು ತೀರ್ಮಾನಿಸಲಾಯಿತು. ಸಭೆಯಲ್ಲಿ ತುಳು ಭಾಷಾ ಉಪನ್ಯಾಸಕರ ಬೋಧನಾ ಅರ್ಹತೆಯನ್ನು ಅನುಮೋದಿಸಲಾಯಿತು.

ಯುಜಿಸಿಯ ಪರಿಷ್ಕೃತ 7ನೆ ವೇತನ ಆಯೋಗದ ವೇತನ ಶ್ರೇಣಿಗೆ ಸಂಬಂಧಿಸಿದಂತೆ ವಿವಿಧ ಸೌಲಭ್ಯಗಳನ್ನು ವಿಸ್ತರಿಸಲು ರಚಿಸಿದ ಕರಡು ಪರಿನಿಯಮ ಅನುಶಾಸನವನ್ನು ಶೈಕ್ಷಣಿಕ ಮಂಡಳಿ ಇಂದು ಅನುಮೋದಿಸಿತು. ಕುಲಸಚಿವ ಎ.ಎಂ.ಖಾನ್ (ಆಡಳಿತ ), ರವೀಂದ್ರ ಆಚಾರಿ (ಪರೀಕ್ಷಾಂಗ )ಹಣಕಾಸು ಅಧಿಕಾರಿ ದಯಾನಂದ ನಾಯಕ್ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News