ವಿವಿಗಳ ಆವರಣದಲ್ಲಿ ದೇಶವಿರೋಧಿ ಚಟುವಟಿಕೆ ನಿಷೇಧ: ಉ.ಪ್ರದೇಶ ಸರಕಾರದ ಆಧ್ಯಾದೇಶ

Update: 2019-06-19 16:59 GMT

ಲಕ್ನೊ, ಜೂ.19: ರಾಜ್ಯದಾದ್ಯಂತದ ಖಾಸಗಿ ವಿವಿಗಳ ಆವರಣದಲ್ಲಿ ಯಾವುದೇ ರೀತಿಯ ದೇಶವಿರೋಧಿ ಚಟುವಟಿಕೆ ನಿಷೇಧಿಸುವ ಕರಡು ಕಾನೂನಿಗೆ ಉತ್ತರ ಪ್ರದೇಶ ಸರಕಾರ ಅನುಮೋದನೆ ನೀಡಿದೆ. ಸಚಿವ ಸಂಪುಟ ಬೃಹತ್ ನಿರ್ಧಾರ ಕೈಗೊಂಡಿದೆ. ರಾಷ್ಟ್ರವಿರೋಧಿ ಕೃತ್ಯಗಳನ್ನು ಸಹಿಸುವುದಿಲ್ಲ ಎಂದು ಉತ್ತರಪ್ರದೇಶದ ಉಪಮುಖ್ಯಮಂತ್ರಿ ಕೇಶವಪ್ರಸಾದ್ ಮೌರ್ಯ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಮಂಗಳವಾರ ಸಚಿವ ಸಂಪುಟ ಅನುಮೋದಿಸಿದ ‘ ಉತ್ತರಪ್ರದೇಶ ಖಾಸಗಿ ವಿವಿ ಆಧ್ಯಾದೇಶವು , ರಾಜ್ಯದ 27 ಖಾಸಗಿ ವಿವಿಗಳನ್ನು ಈ ಕಾನೂನಿನ ವ್ಯಾಪ್ತಿಯಡಿ ತರುತ್ತದೆ. ಆದರೆ ಯಾವುದೆಲ್ಲಾ ದೇಶ ವಿರೋಧಿ ಕೃತ್ಯವಾಗುತ್ತದೆ ಎಂಬ ಬಗ್ಗೆ ಸರಕಾರ ಮಾಹಿತಿ ನೀಡಿಲ್ಲ. ಕಾನೂನು ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ. ಜುಲೈಯಿಂದ ಆರಂಭವಾಗುವ ವಿಧಾನಸಭೆ ಅಧಿವೇಶನದಲ್ಲಿ ಈ ಆಧ್ಯಾದೇಶವನ್ನು ಮಂಡಿಸಲಾಗುವುದು. ವಿವಿಯ ವಿದ್ಯಾರ್ಥಿಗಳಲ್ಲಿ ದೇಶಭಕ್ತಿಯನ್ನು ಪ್ರಚೋದಿಸಲು ಈ ನಿಯಮ ನೆರವಾಗುತ್ತದೆ. ಅಲ್ಲದೆ ವಿವಿಗಳು ಜಾತ್ಯಾತೀತ, ಪ್ರಜಾಪ್ರಭುತ್ವದ ಕಲ್ಪನೆ, ಸಹಿಷ್ಣುತೆ ಹಾಗೂ ಸಾರ್ವತ್ರಿಕ ಸಹೋದರತ್ವದ ಭಾವನೆ ಬೆಳೆಸಬೇಕು ಎಂದು ಕರಡು ಕಾನೂನಿನಲ್ಲಿ ತಿಳಿಸಲಾಗಿದೆ. ಖಾಸಗಿ ವಿವಿಗಳ ಮೇಲೆ ಇನ್ನಷ್ಟು ನಿಯಂತ್ರಣ ಸಾಧಿಸುವ ಉದ್ದೇಶದಿಂದ ಸರಕಾರ ಈ ಆಧ್ಯಾದೇಶವನ್ನು ರೂಪಿಸಿದೆ ಎಂಬ ಟೀಕೆಯೂ ವ್ಯಕ್ತವಾಗಿದೆ. ಅಲ್ಲದೆ ರಾಜ್ಯದಲ್ಲಿ ಅಭಿವ್ಯಕ್ತಿ ಸ್ವಾತಂತ್ರವನ್ನು ಮೊಟಕುಗೊಳಿಸುವ ಬಗ್ಗೆಯೂ ಆತಂಕ ವ್ಯಕ್ತವಾಗಿದೆ. ಇದುವರೆಗೆ ಉತ್ತರಪ್ರದೇಶದಲ್ಲಿ ಖಾಸಗಿ ವಿವಿಗಳು ತಮ್ಮದೇ ಆದ ನಿಯಮ ಮತ್ತು ಕಾಯ್ದೆಯನ್ನು ರೂಪಿಸುತ್ತಿದ್ದವು. ಹಲವು ಖಾಸಗಿ ವಿವಿಗಳಿಗೆ ಸರಕಾರ ಅನುದಾನ ನೀಡುತ್ತಿದ್ದು, ಆಧ್ಯಾದೇಶ ಜಾರಿಯಾದರೆ ಖಾಸಗಿ ವಿವಿಗಳು ರಾಜ್ಯದ ಉನ್ನತ ಶಿಕ್ಷಣ ಸಮಿತಿಯ ಉಸ್ತುವಾರಿಯಡಿ ಬರುತ್ತವೆ.

ನಿಗದಿತ ಅವಧಿಯೊಳಗೆ ಅಗತ್ಯದ ಮಾಹಿತಿ ಸಲ್ಲಿಸಲು ವಿಫಲವಾದ ಖಾಸಗಿ ವಿವಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಮಿತಿ ಸರಕಾರಕ್ಕೆ ವರದಿ ಸಲ್ಲಿಸಬಹುದಾಗಿದೆ. ಅಲ್ಲದೆ ಖಾಸಗಿ ವಿವಿಗಳು ಸಮಾಜದ ಬಡ ಸಮುದಾಯದ ನಿರ್ಧಿಷ್ಟ ಪ್ರಮಾಣದ ವಿದ್ಯಾರ್ಥಿಗಳಿಗೆ ಶೇ.50ರಷ್ಟು ಶುಲ್ಕ ರಿಯಾಯಿತಿಯೊಂದಿಗೆ ಪ್ರವೇಶ ಒದಗಿಸಬೇಕು ಎಂದು ಆಧ್ಯಾದೇಶದಲ್ಲಿ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News