ಅ.12-15: ‘ಕರ್ನಾಪೆಕ್ಸ್ 2019’ ಮಂಗಳೂರಿನಲ್ಲಿ ರಾಜ್ಯ ಮಟ್ಟದ ಪ್ರಥಮ ಪ್ರದರ್ಶನ

Update: 2019-06-20 13:11 GMT

ಮಂಗಳೂರು, ಜೂ. 20: ರಾಜ್ಯ ಮಟ್ಟದ ಅಂಚೆ ಚೀಟಿಗಳ ಪ್ರದರ್ಶನ ಕರ್ನಾಪೆಕ್ಸ್ 2019 ಈ ಬಾರಿ ಮಂಗಳೂರಿನಲ್ಲಿ ಅಕ್ಟೋಬರ್ 12ರಿಂದ 15ರವರೆಗೆ ನಡೆಯಲಿದೆ. ಅಂಚೆ ಇಲಾಖೆಯಿಂದ ನಾಲ್ಕು ವರ್ಷಗಳಿಗೊಮ್ಮೆ ನಡೆಸಲಾಗುವ ಈ ಪ್ರದರ್ಶನವನ್ನು 60 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮಂಗಳೂರಿನಲ್ಲಿ ನಡೆಸಲಾಗುತ್ತಿದೆ ಎಂದು ಕರ್ನಾಟಕ ವೃತ್ತದ ಚೀಪ್ ಪೋಸ್ಟ್ ಮಾಸ್ಟರ್ ಜನರ್ ಡಾ. ಚಾರ್ಲ್ಸ್ ಲೋಬೋ ತಿಳಿಸಿದರು.

ಪಾಂಡೇಶ್ವರದ ಪ್ರಧಾನ ಅಂಚೆ ಕಚೇರಿಯಲ್ಲಿ ಇಂದು ನವೀಕೃತ ಫಿಲಾಟೆಲಿಕ್ ಬ್ಯೂರೋವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಮಟ್ಟದ ಅಂಚೆ ಚೀಟಿ ಸಂಗ್ರಾಹಕರು ಈ ಪ್ರದರ್ಶನದಲ್ಲಿ ಭಾಗವಹಿಸಲಿದ್ದು, ಈ ಸಂದರ್ಭ ಕೇಂದ್ರದ ಮಾಜಿ ಸಚಿವ ದಿವಂಗತ ಜಾರ್ಜ್ ಫೆರ್ನಾಂಡಿಸ್‌ರವರ ವಿಶೇಷ ಅಂಚೆ ಕವರ್ ಬಿಡುಗಡೆಗೊಳಿಸಲಾಗುವುದು ಎಂದರು.

ದಕ್ಷಿಣ ಕರ್ನಾಟಕ ವಲಯದ ಪೋಸ್ಟ್ ಮಾಸ್ಟರ್ ಜನರಲ್ ಎಸ್. ರಾಜೇಂದ್ರ ಕುಮಾರ್ ಮಾತನಾಡಿ, ಮಂಗಳೂರಿನ ಫಿಲಾಟೆಲಿ ಬ್ಯೂರೋ ಚಟುವಟಿಕೆಯಿಂದ ಕೂಡಿರಲು ಜಿಲ್ಲೆಯ ಅಂಚೆ ಸಂಗ್ರಾಹಕರು ಪ್ರಬುದ್ಧರಾಗಿರುವುದೇ ಕಾರಣ ಎಂದರು.

ಫಿಲಾಟೆಲಿ ಬ್ಯೂರೋದಲ್ಲಿ ಅಂಚೆ ಸಂಗ್ರಾಹಕರಿಗೆ ತಮ್ಮ ಅಂಚೆಚೀಟಿಗಳ ಸಂಗ್ರಹವನ್ನು ಪ್ರದರ್ಶಿಸಲು ನಿಗದಿತ ಜಾಗವನ್ನು ಒದಗಿಸಲಾಗಿದೆ. ವರ್ಷಪೂರ್ತಿ ಇಲ್ಲಿ ಪ್ರದರ್ಶನ ಮಾಡಬುದಾಗಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಕರ್ನಾಪೆಕ್ಸ್ 2019ರ ಅಧಿಕೃತ ಲಾಂಛನವನ್ನು ಬಿಡುಗಡೆಗೊಳಿಸಲಾಯಿತು. ಕಲಾವಿದ ದಿನೇಶ್ ಹೊಳ್ಳ ಅವರು ರಚಿಸಿರುವ ಲಾಂಛನವನ್ನು ಆಯ್ಕೆ ಮಾಡಲಾಗಿದ್ದು, ಕರ್ನಾಪೆಕ್ಸ್ ಪ್ರದರ್ಶನದಲ್ಲಿ ಅವರಿಗೆ ಸನ್ಮಾನ ಕಾರ್ಯವನ್ನು ಆಯೋಜಿಸಲಾಗಿದೆ.

ಈ ಸಂದರ್ಭ ದ.ಕ. ಹಾಗೂ ಉಡುಪಿ ಜಿಲ್ಲೆಗೆಸಂಬಂಧಿಸಿದಂತೆ ಈವರೆಗೆ ಬಿಡುಗಡೆಯಾಗಿರುವ ಸ್ಮರಣಾರ್ಥ ಅಂಚೆಚೀಟಿಗಳು ಹಾಗೂ ಪಿಕ್ಟೋರಿಯಲ್ ಕ್ಯಾನ್ಸಲೇಶನ್‌ಗಳ ಮಾಹಿತಿಯ ಕಿರು ಪುಸ್ತಕವನ್ನು ಈ ಸಂದರ್ಭ ಬಿಡುಗಡೆಗೊಳಿಸಲಾಯಿತು.

ಫಿಲಾಟೆಲಿಕ್ ಬ್ಯೂರೋಗೆ ಪ್ರವಾಸೋದ್ಯಮದ ಸಂಪರ್ಕ ಅಗತ್ಯ

ಫಿಲಾಟೆಲಿಕ್ ಬ್ಯೂರೋದಲ್ಲಿರುವ ಅಂಚೆ ಚೀಟಿಗಳ ಸಂಗ್ರಹದ ಮೂಲಕ ಜಿಲ್ಲೆಯ ಇತಿಹಾಸವನ್ನು ಅರಿಯಬಹುದಾಗಿದೆ. ಹಾಗಾಗಿ ಈ ಬ್ಯೂರೋವನ್ನು ಪ್ರವಾಸೋದ್ಯಮ ತಾಣವಾಗಿಸುವ ಮೂಲಕ ಪ್ರವಾಸಿಗರು ಇಲ್ಲಿನ ಸಂಸ್ಕೃತಿಯನ್ನು ಅಂಚೆಚೀಟಿಗಳ ಮೂಲಕ ತಿಳಿಯಲು ಅವಕಾಸ ಕಲ್ಪಿಸಬೇಕು ಎಂದು ಹಿರಿಯ ಅಂಚೆ ಅಧೀಕ್ಷಕ ಹರ್ಷ ಅವರು ಪ್ರಾಸ್ತಾವಿಕಾಗಿ ಮಾತನಾಡುತ್ತಾ ಅಭಿಪ್ರಾಯಿಸಿದರು. ಸಹಾಯಕ ಅಂಚೆ ಅಧೀಕ್ಷಕ ಶ್ರೀನಾಥ್ ವಂದಿಸಿದರು. ಗ್ರೆಗರಿ ಕಾರ್ಯಕ್ರಮ ನಿರೂಪಿಸಿದರು.

ಶ್ರೀನಿವಾಸ ಮಲ್ಯರ ಅಂಚೆಚೀಟಿ ಇಲ್ಲದಿರುವುದು ಬೇಸರದ ಸಂಗತಿ

ಕರಾವಳಿಯ ಅಭಿವೃದ್ಧಿಗೆ ಕೊಡುಗೆ ನೀಡಿದ, ಎನ್‌ಎಂಪಿಟಿಯ ಪ್ರಮುಖ ಸೂತ್ರಧಾರಿ ದಿವಂಗತ ಶ್ರೀನಿವಾಸ ಮಲ್ಯರು ಅಂಚೆಚೀಟಿಯಲ್ಲಿ ಜಾಗ ಈವರೆಗೂ ಜಾಗ ಪಡೆಯದಿರುವುದು ಬೇಸರದ ಸಂಗತಿ ಎಂದು ರಾಜ್ಯದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಡಾ. ಚಾರ್ಲ್ಸ್ ಲೋಬೋ ಹೇಳಿದರು.
ಈ ಬಗ್ಗೆ ಸ್ಥಳೀಯ ಸಂಸದರು ಹಾಗೂ ಕರ್ನಾಟಕ ಸರಕಾರ ಮುತುವರ್ಜಿ ವಹಿಬೇಕು ಎಂದು ಅವರು ಹೇಳಿದರು.

ಮಂಗಳೂರು ಫಿಲಾಟೆಲಿಕ್ ಬ್ಯೂರೋದಿಂದ ಪುತ್ತೂರು, ಉಡುಪಿ, ಕಾರ್ಕಳ, ಕುಂದಾಪುರ, ಮಣಿಪಾಲ, ಶಿವಮೊಗ್ಗ, ಭದ್ರಾವತಿ, ಸಾಗರ, ಚಿಕ್ಕಮಗಳೂರು, ಕೊಪ್ಪ, ಅರಸೀಕೆರೆ, ಹಾಸನ ಪ್ರಧಾನ ಅಂಚೆ ಕಚೇರಿಗಳಿಗೆಫಿಲಾಟೆಲಿಗೆ ಸಂಬಂಧಿಸಿದ ಅಂಚೆಚೀಟಿ ಹಾಗೂ ಇತರ ವಸ್ತುಗಳು ಪೂರೈಕೆಯಾಗುತ್ತವೆ ಎಂದು ಪೋಸ್ಟ್ ಮಾಸ್ಟರ್ ಜನರಲ್  ರಾಜೇಂದ್ರ ಕುಮಾರ್ ತಿಳಿಸಿದರು.

ಏನಿದು ಫಿಲಾಟೆಲಿಕ್ ಬ್ಯೂರೋ ?

ಅಂಚೆ ಚೀಟಿ ಸಂಬಂಧಿತ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕಾಗಿ ಫಿಲಾಟೆಲಿ ಬ್ಯೂರೋಗಳನ್ನು ದೇಶಾದ್ಯಂತ ಪ್ರಮುಖ ನಗರಗಳಲ್ಲಿ ಭಾರತೀಯ ಅಂಚೆ ಇಲಾಖೆ ಆರಂಭಿಸಿದೆ. ಕರ್ನಾಟದಲ್ಲಿ ಮಂಗಳೂರು ಸೇರಿ ನಾಲ್ಕು ಬ್ಯೂರೋಗಳಿದ್ದು, ಮಂಗಳೂರು ಪ್ರಧಾನ ಅಂಚೆ ಕಚೇರಿಯಲ್ಲಿ 1989ರ ಸೆಪ್ಟಂಬರ್ 11ರಂದು ಈ ಬ್ಯೂರೋ ಆರಂಭಗೊಂಡಿತ್ತು. ಇದೀಗ ಈ ಬ್ಯೂರೋ ಸುಮಾರು ಐದು ಲಕ್ಷ ರೂ. ವೆಚ್ಚದಲ್ಲಿ ನವೀಕೃತಗೊಂಡಿದೆ. ಫಿಲಾಟೆಲಿ ವಸ್ತುಗಳನ್ನು ಮನೆಬಾಗಿಲಿಗೆ ಪಡೆಯಲು ಆಸಕ್ತರು ಪಿಡಿಎ (ಫಿಲಾಟೆಲಿಕ್ ಡೆಪೋಸಿಟ್ ಅಕೌಂಟ್) ಖಾತೆ ತೆರೆಯಲು ಅವಕಾಶವಿದೆ. ಪ್ರಸ್ತುತ ಮಂಗಳೂರು ಬ್ಯೂರೋದಲ್ಲಿ 1066 ಪಿಡಿಎ ಖಾತೆಗಳಿವೆ ಎಂದು ಕಾರ್ಯಕ್ರಮದ ಬಳಿಕ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ವೃತ್ತದ ಚೀಪ್ ಪೋಸ್ಟ್ ಮಾಸ್ಟರ್ ಜನರಲ್ ಡಾ. ಚಾರ್ಲ್ಸ್ ಲೋಬೋ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News