ದ.ಕ.: ಒಂದನೇ ತರಗತಿಯಿಂದಲೇ ಇಂಗ್ಲಿಷ್ ಮಾಧ್ಯಮ ಶಿಕ್ಷಣ ಪ್ರಕ್ರಿಯೆ

Update: 2019-06-20 13:34 GMT

ಮಂಗಳೂರು, ಜೂ.20: ಸರಕಾರಿ ಶಾಲೆಗಳಲ್ಲಿ 1ನೇ ತರಗತಿಯಿಂದಲೇ ಕನ್ನಡದ ಜೊತೆ ಇಂಗ್ಲಿಷ್ ಮಾಧ್ಯಮ ಆರಂಭಿಸುವ ಪ್ರಕ್ರಿಯೆಗೆ ದ.ಕ.ಜಿಲ್ಲೆಯಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆ. ಅಂದರೆ, ದ.ಕ. ಜಿಲ್ಲೆಯಲ್ಲಿ ಆಯ್ಕೆ ಮಾಡಿಕೊಂಡಿರುವ 43 ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿಗಳ ಸಂಖ್ಯೆ 1,583 ಮತ್ತು ಕನ್ನಡ ಮಾಧ್ಯಮಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿಗಳ ಸಂಖ್ಯೆ ಕೇವಲ 224 ಮಾತ್ರ.

ಆರಂಭದಲ್ಲಿ ಮಕ್ಕಳ ಸೇರ್ಪಡೆಗೆ ಯಾವುದೇ ಮಿತಿ ಇರಲಿಲ್ಲ. ಹಾಗಾಗಿ ದುಬಾರಿ ಶುಲ್ಕ ನೀಡಿ ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಗೆ ಸೇರಿಸಲಾಗದವರು ಸಮೀಪದ ಸರಕಾರಿ ಶಾಲೆಗೆ ಸೇರಿಸಿದ್ದರು. ಆ ಬಳಿಕ ರಾಜ್ಯ ಸರಕಾರವು ಮಕ್ಕಳ ಸೇರ್ಪಡೆಗೆ ಮಿತಿ ಏರಿತ್ತು. ಅಂದರೆ 30ಕ್ಕಿಂತ ಹೆಚ್ಚು ಮಕ್ಕಳನ್ನು ಸೇರಿಸಬಾರದು ಎಂದು ಸೂಚಿಸಿತ್ತು. ಇದಕ್ಕೆ ಹೆತ್ತವರು ತೀವ್ರ ವಿರೋಧ ಮತ್ತು ಆಕ್ರೋಶ ವ್ಯಕ್ತಪಡಿಸಿದ್ದರು.

ಇದೀಗ ಮಿತಿ ದಾಟಿದ ವಿದ್ಯಾರ್ಥಿಗಳಿಗೂ ಪ್ರವೇಶ ನೀಡಲಾಗಿದೆ. ಅಂದರೆ ದ.ಕ.ಜಿಲ್ಲೆಯ 43 ಶಾಲೆಗಳ ಪೈಕಿ 21ಕ್ಕೂ ಅಧಿಕ ಶಾಲೆಗಳಲ್ಲಿ 30ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲಾಗಿದೆ.

ಗರಿಷ್ಠ ಸೇರ್ಪಡೆಯ ಶಾಲೆಗಳು

ಬಂಟ್ವಾಳದ ದಡ್ಡಲಕಾಡು ಸರಕಾರಿ ಹಿ.ಪ್ರಾ. ಶಾಲೆಯಲ್ಲಿ 106, ದೇರಳಕಟ್ಟೆಯ ಸರಕಾರಿ ಹಿ.ಪ್ರಾ. ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ 104, ವಿಟ್ಲದ ಸರಕಾರಿ ಹಿ.ಪ್ರಾ. ಮಾದರಿ ಶಾಲೆಯಲ್ಲಿ 128, ಹಾರಾಡಿಯ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ 63, ಬೆಳ್ಳಾರೆರ ಸರಕಾರಿ ಹಿ.ಪ್ರಾ. ಶಾಲೆಯಲ್ಲಿ 62 ವಿದ್ಯಾರ್ಥಿಗಳು ಗರಿಷ್ಠ ಸಂಖ್ಯೆಯಲ್ಲಿ ಇಂಗ್ಲಿಷ್ ಮಾಧ್ಯಮಕ್ಕೆ ಪ್ರವೇಶ ಪಡೆದಿದ್ದಾರೆ.

20 ಶಾಲೆಗಳಲ್ಲಿ ಕನ್ನಡಕ್ಕೆ ವಿದ್ಯಾರ್ಥಿಗಳಿಲ್ಲ

ಆಂಗ್ಲ ಮಾಧ್ಯಮ ಆರಂಭಿಸಲು ಅವಕಾಶ ಪಡೆದಿರುವ ದ.ಕ.ಜಿಲ್ಲೆಯ 43 ಶಾಲೆಗಳ ಪೈಕಿ 20 ಶಾಲೆಗಳಲ್ಲಿ ಕನ್ನಡ ಮಾಧ್ಯಮಕ್ಕೆ ಯಾವುದೇ ವಿದ್ಯಾರ್ಥಿಯು ಪ್ರವೇಶ ಪಡೆಯದಿರುವುದು ಗಮನಾರ್ಹ. ಇದು ಕನ್ನಡಪರ ಸಂಘಟನೆಗಳ ಮುಖಂಡರಿಗೆ ಸವಾಲಾಗಿ ಪರಿಗಣಿಸಿದೆ.

2019-20ನೆ ಶೈಕ್ಷಣಿಕ ವರ್ಷದಿಂದ ಆರಂಭಗೊಂಡಿರುವ ಸರಕಾರಿ ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ದ.ಕ. ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ಸಿಕ್ಕಿವೆ. ಹೆತ್ತವರು ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಸೇರ್ಪಡೆಗೊಳಿಸಿದ್ದಾರೆ. ವಿದ್ಯಾರ್ಥಿಗಳ ಸೇರ್ಪಡೆಗೆ ಸರಕಾರ ಮಿತಿ ಹೇರುವ ಮೊದಲೇ ಅನೇಕ ಶಾಲೆಗಳಲ್ಲಿ 30ಕ್ಕಿಂತ ಅಧಿಕ ವಿದ್ಯಾರ್ಥಿಗಳಿಗೆ ಪ್ರವೇಶ ಸಿಕ್ಕಿತ್ತು.

ಸರಕಾರಿ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಇಂಗ್ಲಿಷ್‌ಗೆ ಮಾತ್ರ ಆದ್ಯತೆ ಎಂಬ ಕಲ್ಪನೆ ಬೇಡ. ಅಲ್ಲೂ ಪ್ರಥಮ ಭಾಷೆ ಕನ್ನಡವೇ ಇರುತ್ತದೆ. ಮತ್ತು ಅದು ಕಡ್ಡಾಯವೂ ಆಗಿರುತ್ತದೆ. ಅಲ್ಲದೆ ಕನ್ನಡ ಭಿತ್ತಿಪತ್ರ, ಕಮ್ಮಟ, ಭಾಷಣ ಸ್ಪರ್ಧೆ, ಸಾಹಿತ್ಯ ಸಮ್ಮೇಳನ, ನಾಟಕ ಹಾಡು, ಜನಪದ ಮುಂತಾದ ಚಟುವಟಿಕೆಗಳನ್ನು ನಡೆಸುವುದರ ಮೂಲಕ ಅಲ್ಲಿ ಕನ್ನಡಕ್ಕೆ ಪೂರಕ ಕಾರ್ಯಕ್ರಮಕ್ಕೆ ಒತ್ತು ನೀಡಲಾಗುತ್ತದೆ.

- ವೈ.ಶಿವರಾಮಯ್ಯ ಡಿಡಿಪಿಐ, ದ.ಕ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News