ಅಜ್ಜರಕಾಡು ಪಾರ್ಕ್‌ಗೆ ಭದ್ರತೆ ವ್ಯವಸ್ಥೆ ಕಲ್ಪಿಸಲು ಮನವಿ

Update: 2019-06-20 13:37 GMT

ಉಡುಪಿ, ಜೂ.20: ಅಜ್ಜರಕಾಡು ಉದ್ಯಾನವನದಲ್ಲಿ ಸೂಕ್ತ ಭದ್ರತೆ ವ್ಯವಸ್ಥೆ ಹಾಗೂ ಮಿನಿ ಗಾರ್ಡನ್ ನಿರ್ಮಿಸಲು ಅನುಮತಿ ನೀಡುವಂತೆ ಒತ್ತಾಯಿಸಿ ಕ್ಲೀನ್ ಉಡುಪಿ ಪ್ರಾಜೆಕ್ಟ್ ವತಿಯಿಂದ ಉಡುಪಿ ನಗರಸಭೆ ಪೌರಾಯುಕ್ತರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.

ಅಜ್ಜರಕಾಡು ಉದ್ಯಾನವನವು ಮದ್ಯದ ಬಾಟಲಿಗಳನ್ನು ಎಸೆಯುವ ತಾಣ ವಾಗಿ ಮಾರ್ಪಟ್ಟಿದೆ. ಕುಡುಕರು ಕುಡಿದ ಮದ್ಯದ ಬಾಟಲಿಗಳನ್ನು ಇಲ್ಲಿಯೇ ಎಸೆಯುವುದರಿಂದ ವಾಯು ವಿಹಾರಕ್ಕೆ ಬರುವ ಸಾರ್ವಜನಿಕರಿಗೆ ತೊಂದರೆ ಯಾಗುತ್ತಿದೆ. ಈ ಮೂಲಕ ಈ ಪ್ರದೇಶದ ಸ್ವಚ್ಛತೆಗೆ ಧಕ್ಕೆ ಉಂಟಾಗುತ್ತಿದೆ ಎಂದು ಸಂಘಟನೆ ಆರೋಪಿಸಿದೆ.

ಅದೇ ರೀತಿ ಉದ್ಯಾನವನದಲ್ಲಿ ಸಾರ್ವಜನಿಕವಾಗಿ ದೂಮಪಾನ ಮಾಡಿ ಶುದ್ಧ ಗಾಳಿಯನ್ನು ವಿಷಕಾರಿಯನ್ನಾಗಿಸುವ ಪ್ರಯತ್ನ ಮಾಡಲಾಗುತ್ತಿದೆ. ಇಲ್ಲಿ ಯಾವುದೇ ರೀತಿಯ ಗೇಟ್, ಪ್ರವೇಶಕ್ಕೆ ಸಂಬಂಧಿಸಿದಂತೆ ನಿಯಮಗಳು ಇಲ್ಲದ ಕಾರಣ ಇಂತಹ ಚಟುವಟಿಕೆಗಳು ದಿನೇ ದಿನೇ ಹೆಚ್ಚುತ್ತಿವೆ. ಆದುದ ರಿಂದ ಆದಷ್ಟು ಶೀಘ್ರವೇ ಇಲ್ಲಿಗೆ ಸೂಕ್ತ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಸಂಘಟನೆ ಮನವಿಯಲ್ಲಿ ಒತ್ತಾಯಿಸಿದೆ.

ಉದ್ಯಾನವನದಲ್ಲಿ ತಂಡದ ವತಿಯಿಂದ ಐದು ವಾರಗಳಿಂದ ಸ್ಪಚ್ಛತಾ ಅಭಿ ಯಾನವು ನಡೆಯುತ್ತಿದ್ದು, ಹುತಾತ್ಮ ಸ್ಮಾರಕದ ಸುತ್ತಮುತ್ತಲಿನ ಪ್ರದೇಶದಲ್ಲಿ ಮಿನಿ ಗಾರ್ಡನ್ ನಿರ್ಮಿಸಲು ತಂಡ ಯೋಜನೆ ಹಾಕಿಕೊಂಡಿದೆ. ಇದಕ್ಕೆ ಅನು ಮತಿ ನೀಡಬೇಕು ಎಂದು ಕ್ಲೀನ್ ಉಡುಪಿ ಪ್ರಾಜೆಕ್ಟ್ ಮನವಿ ಮಾಡಿದೆ.

ಈ ಕುರಿತ ಮನವಿಯನ್ನು ನಗರಸಭೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಗಣೇಶ್ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಕ್ಲೀನ್ ಉಡುಪಿ ಪ್ರಾಜೆಕ್ಟ್‌ನ ಪ್ರಮುಖರಾದ ಗಣೇಶ್ ಪ್ರಸಾದ್, ರಾಘವೇಂದ್ರ ಪ್ರಭು ಕರ್ವಾಲು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News