ಅತ್ಯಾಚಾರ ಆರೋಪ: ಪೊಲೀಸರಿಂದ ಕೊಡಿಯೇರಿ ಪುತ್ರನಿಗೆ ನೋಟಿಸ್ ಜಾರಿ

Update: 2019-06-20 14:25 GMT

ತಿರುವನಂತಪುರ,ಜೂ.20: ಮುಂಬೈ ಪೊಲೀಸರು ಅತ್ಯಾಚಾರ ಮತ್ತು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಸಿಪಿಎಂ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಅವರ ಪುತ್ರ ಬಿನೊಯ್ ಕೊಡಿಯೇರಿ ಅವರಿಗೆ ಗುರುವಾರ ನೋಟಿಸ್‌ನ್ನು ಜಾರಿಗೊಳಿಸಿದ್ದಾರೆ.

ಮೂರು ದಿನಗಳಲ್ಲಿ ತನಿಖಾಧಿಕಾರಿಗಳ ಎದುರು ಹಾಜರಾಗುವಂತೆ ಅವರಿಗೆ ನೋಟಿಸಿನಲ್ಲಿ ಸೂಚಿಸಲಾಗಿದೆ.ನೋಟಿಸ್ ಜಾರಿಗೊಳಿಸಲು ಮುಂಬೈನ ಇಬ್ಬರು ಪೊಲೀಸ್ ಅಧಿಕಾರಿಗಳು ಸ್ಥಳೀಯ ಇಬ್ಬರು ಪೊಲೀಸ್ ಅಧಿಕಾರಿಗಳೊಂದಿಗೆ ಕಣ್ಣೂರು ಜಿಲ್ಲೆ ತಿರುವಾಂಗಡ್‌ನಲ್ಲಿರುವ ಕೊಡಿಯೇರಿಯವರ ಮೂಲಮನೆಗೆ ಭೇಟಿ ನೀಡಿದ್ದರು. ಆದರೆ ಈ ವೇಳೆ ಬಿನೋಯ್ ಮನೆಯಲ್ಲಿರಲಿಲ್ಲ ಮತ್ತು ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿರುವುದರಿಂದ ಸಂಪರ್ಕ ಸಾಧ್ಯವಾಗಿಲ್ಲ ಎಂದು ಮುಂಬೈ ಪೊಲೀಸರು ಸುದ್ದಿಗಾರರಿಗೆ ತಿಳಿಸಿದರು.

33ರ ಹರೆಯದ ಬಿಹಾರಿ ಮಹಿಳೆಯ ದೂರಿನ ಮೇರೆಗೆ ಮುಂಬೈನ ಅಂಧೇರಿ-ಒಶಿವಾರಾ ಪೊಲೀಸ್ ಠಾಣೆಯಲ್ಲಿ ಪ್ರಕರಣವು ದಾಖಲಾಗಿದೆ. ತಾನು ದುಬೈನಲ್ಲಿ ಬಾರ್ ಡ್ಯಾನ್ಸರ್ ಆಗಿದ್ದಾಗ ಬಿನೋಯ್ ತನ್ನನ್ನು ಭೇಟಿಯಾಗಿದ್ದರು. ತನ್ನನ್ನು ಮದುವೆಯಾಗುವ ಭರವಸೆ ನೀಡಿದ್ದ ಅವರು ತನ್ನ ಮೇಲೆ ಅತ್ಯಾಚಾರವೆಸಗಿದ್ದರು. ಈ ಸಂಬಂಧದಿಂದ ತನಗೆ ಎಂಟರ ಹರೆಯದ ಮಗನಿದ್ದಾನೆ ಎಂದು ಮಹಿಳೆ ದೂರಿಕೊಂಡಿದ್ದಾಳೆ. ಆದರೆ ಬಿನೋಯ್ ತನ್ನ ವಿರುದ್ಧದ ಆರೋಪವನ್ನು ನಿರಾಕರಿಸಿದ್ದಾರೆ.

ಮಹಿಳೆ ಆರು ತಿಂಗಳ ಹಿಂದೆ ಐದು ಕೋ.ರೂ.ಗಳಿಗೆ ಬೇಡಿಕೆಯಿಟ್ಟು ತನಗೆ ಪತ್ರ ಕಳುಹಿಸಿದ್ದಳು. ಈ ಬಗ್ಗೆ ತಾನೀಗಾಗಲೇ ಕಣ್ಣೂರು ಪೊಲೀಸರಲ್ಲಿ ದೂರು ದಾಖಲಿಸಿದ್ದೇನೆ. ಈಗ ಆ ಮಹಿಳೆ ತನ್ನ ವಿರುದ್ಧ ದೂರು ದಾಖಲಿಸಿದ್ದಾಳೆ. ಆಕೆಯ ಮಗನ ತಂದೆ ತಾನಲ್ಲ ಎನ್ನುವುದನ್ನು ಸಾಬೀತುಗೊಳಿಸಲು ವೈಜ್ಞಾನಿಕ ಪರೀಕ್ಷೆಗೊಳಪಡಲು ತಾನು ಸಿದ್ಧನಿದ್ದೇನೆ ಎಂದು ಬಿನೋಯ್ ಹೇಳಿದ್ದನ್ನು ಮಾಧ್ಯಮಗಳು ವರದಿ ಮಾಡಿದ್ದವು. ತನ್ಮಧ್ಯೆ ಪಿತೃತ್ವ ಪರೀಕ್ಷೆಗೆ ಒಪ್ಪಿಕೊಂಡಿರುವ ಮಹಿಳೆ,ಬಿನೋಯ್ ಜೊತೆ ತನ್ನ ಸಂಬಂಧಕ್ಕೆ ಸಾಕ್ಷ್ಯಾಧಾರಗಳು ತನ್ನ ಬಳಿಯಿವೆ ಎಂದು ಹೇಳಿದ್ದಾಳೆ.

ಈ ವಿಷಯಕ್ಕೂ ಪಕ್ಷಕ್ಕೂ ಸಂಬಂಧವಿಲ್ಲ ಮತ್ತು ಪಕ್ಷವು ಯಾರನ್ನೂ ರಕ್ಷಿಸುವುದಿಲ್ಲ ಎಂದು ಸಿಪಿಎಂ ಪಾಲಿಟ್ ಬ್ಯೂರೊ ಸದಸ್ಯರೋರ್ವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News