ಗೋಡ್ಸೆಯನ್ನು ಹೊಗಳಿದ ಟ್ವೀಟ್‌ ಶೇರ್ ಮಾಡಿದ ಟೆಲಿಫೋನ್ ನಿಗಮ!

Update: 2019-06-20 14:31 GMT

ಹೊಸದಿಲ್ಲಿ,ಜೂ.20: ಸರಕಾರಿ ಸ್ವಾಮ್ಯದ ಮಹಾನಗರ ಟೆಲಿಫೋನ್ ನಿಗಮ(ಎಂಟಿಎನ್‌ಎಲ್)ದ ಟ್ವಿಟರ್ ಹ್ಯಾಂಡಲ್ ಗುರುವಾರ ಮಹಾತ್ಮಾ ಗಾಂಧಿಯವರ ಹಂತಕ ನಾಥುರಾಮ ಗೋಡ್ಸೆಯನ್ನು ಹೊಗಳಿರುವ ಟ್ವೀಟ್ ವೊಂದನ್ನು ಶೇರ್ ಮಾಡಿಕೊಂಡಿದೆ. ಇದರ ಬೆನ್ನಲ್ಲೇ ಟ್ವೀಟ್‌ನ್ನು ಅಳಿಸಲಾಗಿದೆ.

‘‘ ಈ ದಿನಗಳಲ್ಲಿ ಹಿಂದುಗಳು ಗೋಡ್ಸೆಯನ್ನು ಬೆಂಬಲಿಸಲು ಹೆದರುತ್ತಿದ್ದಾರೆ,ಆದರೆ ಮುಸ್ಲಿಮರು ತಮ್ಮ ಮಕ್ಕಳಿಗೆ ತೈಮೂರ್ ಹೆಸರಿಟ್ಟು ಹೆಮ್ಮೆ ಪಡುತ್ತಿದ್ದಾರೆ. ದೇಶಪ್ರೇಮವು ನಿಮ್ಮ ರಕ್ತದಲ್ಲಿ ಹರಿಯಬೇಕು ’’ಎಂದು ನೀತಾ ಅಂಬಾನಿ ಫ್ಯಾನ್ ಹೆಸರಿನ ಖಾತೆಯು ಟ್ವೀಟಿಸಿದೆ.

ಇದನ್ನು ಶೇರ್ ಮಾಡಿಕೊಂಡ ಎಂಟಿಎನ್‌ಎಲ್ ‘ಈ ಸತ್ಯವನ್ನು ಅರಗಿಸಿಕೊಳ್ಳುವುದು ಕಷ್ಟ ’ಎಂದು ಹೇಳಿದೆ.

ಸಾರ್ವತ್ರಿಕ ಚುನಾವಣೆಗಳ ಸಂದರ್ಭ ಗೋಡ್ಸೆ ವ್ಯಾಪಕ ಚರ್ಚೆಗಳಿಗೆ ವಸ್ತುವಾಗಿದ್ದ. ಗೋಡ್ಸೆ ಭಾರತದ ಮೊದಲ ಭಯೋತ್ಪಾದಕನಾಗಿದ್ದ ಎಂದು ನಟ-ರಾಜಕಾರಣಿ ಕಮಲ್ ಹಾಸನ್ ಬಣ್ಣಿಸಿದ್ದರು. ಇದಕ್ಕೆ ವ್ಯಾಪಕ ಖಂಡನೆಗಳು ವ್ಯಕ್ತವಾಗಿದ್ದರೂ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದ ಅವರು,ಪ್ರತಿ ಧರ್ಮದಲ್ಲಿಯೂ ಉಗ್ರವಾದಿಗಳಿದ್ದಾರೆ ಮತ್ತು ತನ್ನ ಹೇಳಿಕೆಯು ಐತಿಹಾಸಿಕ ಸತ್ಯವಾಗಿದೆ ಎಂದಿದ್ದರು.ಕಮಲ್ ಹೇಳಿಕೆಗೆ ಪ್ರತಿಕ್ರಿಯಿಸುತ್ತ ‘ಗೋಡ್ಸೆ ದೇಶಪ್ರೇಮಿಯಾಗಿದ್ದ ’ಎಂದು ಬಣ್ಣಿಸಿದ್ದಕ್ಕಾಗಿ ಈಗ ಬಿಜೆಪಿ ಸಂಸದೆಯಾಗಿರುವ ಪ್ರಜ್ಞಾ ಸಿಂಗ್ ಠಾಕೂರ್ ತನ್ನದೇ ಪಕ್ಷದ ನಾಯಕರು ಮತ್ತು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ರಾಜಕೀಯ ನಾಯಕರ ಟೀಕೆಗಳಿಗೆ ಗುರಿಯಾಗಿದ್ದರು.

ಟ್ವೀಟ್‌ನಲ್ಲಿ ಪ್ರಸ್ತಾಪಿಸಲಾದ ತೈಮೂರ್ ಬಾಲಿವುಡ್ ದಂಪತಿ ಸೈಫ್ ಅಲಿ ಖಾನ್-ಕರೀನಾ ಕಪೂರ್ ಪುತ್ರನ ಹೆಸರಾಗಿದೆ. 

ಎಂಟಿಎನ್‌ಎಲ್‌ನ ಟ್ವೀಟ್ ಟ್ವಿಟರ್ ಬಳಕೆದಾರರಿಂದ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದೆ. ‘ಎಂಟಿಎನ್‌ಎಲ್ ಟ್ವಿಟರ್‌ನಲ್ಲಿ ನಿಮ್ಮನ್ನು ಫಾಲೋ ಮಾಡುತ್ತಿದೆ ಮತ್ತು ಅದು ಗೋಡ್ಸೆಯ ಬೆಂಬಲಿಗನೂ ಆಗಿದೆ. ಹೀಗಾಗಿ ನೀವೀಗ ಎಂಟಿಎನ್‌ಎಲ್‌ನ್ನು ಫಾಲೋ ಮಾಡಬೇಕು’ ಎಂದು ಓರ್ವ ಟ್ವೀಟಿಗ ಮೋದಿಯವರನ್ನು ಕಿಚಾಯಿಸಿದ್ದರೆ,ತನ್ನ ಹೆಸರನ್ನು ‘ಅಫಿಷಿಯಲ್ ನಾಥುರಾಮ ಗೋಡ್ಸೆ ’ಎಂದು ಬದಲಿಸಿಕೊಳ್ಳುವಂತೆ ಇನ್ನೋರ್ವ ಟ್ವೀಟಿಗ ಎಂಟಿಎನ್‌ಎಲ್‌ಗೆ ಸೂಚಿಸಿದ್ದಾನೆ.

ದೇಶವನ್ನು ನಂತರ ವಿಭಜಿಸಿ. ಮೊದಲು ಮೂರು ದಿನಗಳಿಂದ ಸ್ಥಗಿತಗೊಂಡಿರುವ ದೂರವಾಣಿ ಸಂಪರ್ಕಗಳನ್ನು ಸರಿಪಡಿಸಿ ಎಂದು ಇನ್ನೋರ್ವ ಟ್ವೀಟಿಗ ಕುಟುಕಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News