ಗಿರೀಶ್ ಕಾರ್ನಾಡರ ನಾಟಕಗಳು ಸಾರ್ವಕಾಲಿಕ: ಲೇಖಕಿ ಡಾ.ಚಂದ್ರಕಲಾ ನಂದಾವರ

Update: 2019-06-20 14:46 GMT

ಮಂಗಳೂರು, ಜೂ.20: ದೇಶಕಂಡ ಅದ್ವಿತೀಯ ಖ್ಯಾತ ನಾಟಕಕಾರ ಗಿರೀಶ್ ಕಾರ್ನಾಡರ ನಾಟಕಗಳಲ್ಲಿ ಐತಿಹಾಸಿಕ, ಪೌರಾಣಿಕ, ಸಾಮಾಜಿಕ ಚಿಂತನೆಗಳ ಚಿಲುಮೆಯಿದೆ. ಸಾಹಿತ್ಯ ಆಯಾ ಕಾಲವನ್ನು ಪ್ರತಿನಿಧಿಸುತ್ತದೆ. ಗಿರೀಶ್ ಕಾರ್ನಾಡರ ಎಲ್ಲ ನಾಟಕಗಳು ಸಾರ್ವಕಾಲಿಕ ಸ್ಥಾನಮಾನ ಪಡೆದಿವೆ ಎಂದು ಲೇಖಕಿ ಡಾ.ಚಂದ್ರಕಲಾ ನಂದಾವರ ತಿಳಿಸಿದ್ದಾರೆ.

ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ವಿಭಾಗ ಹಾಗೂ ಸಮುದಾಯ ಮಂಗಳೂರು ಸಂಘಟನೆಯ ಸಹಯೋಗದಲ್ಲಿ ಮಂಗಳೂರು ನಗರದ ಸಂತ ಅಲೋಶಿಯಸ್ ಕಾಲೇಜಿನ ಸಾನಿಧ್ಯ ಸಭಾಂಗಣದಲ್ಲಿ ಗುರುವಾರ ನಡೆದ ‘ಗಿರೀಶ್ ಕಾರ್ನಾಡ್ ಒಂದು ನೆನಪು- ನುಡಿನಮನ’ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಕನ್ನಡ ವಿಮರ್ಶಕರು ಕಾರ್ನಾಡರ ಕೃತಿಗಳನ್ನು ‘ಓದು ನಾಟಕಗಳು’ ಎಂದು ವಿಮರ್ಶಿಸಿದ್ದರು. ಜಾಗತಿಕ ಸಾಲಿನಲ್ಲಿ ಸೇರುವ ಕಾರ್ನಾಡರ ನಾಟಕಗಳನ್ನು ಅಂತಹವರು ಯಾವ ನೆಲೆಯಲ್ಲಿ ಹೇಳಿದ್ದಾರೆ ಎನ್ನುವುದನ್ನು ವಿಮರ್ಶೆಯ ಓರೆಗೆ ಹಚ್ಚುವ ಕೆಲಸ ಮಾಡಬೇಕಿದೆ ಎಂದು ನುಡಿದರು.

‘ಓರ್ವ ವ್ಯಕ್ತಿಯ ವ್ಯಕ್ತಿತ್ವಕ್ಕೆ ಒಂದೇ ಮುಖ ಅಲ್ಲ’ ಎನ್ನುವ ಸತ್ಯದ ಶೋಧನೆ ಕಾರ್ನಾಡರ ಹಲವು ಕೃತಿಗಳಲ್ಲಿ ಕಂಡುಬರುತ್ತದೆ. ಕೆಟ್ಟ ಅರಸನಾಗಿ ಅಧಿಕಾರ ನಡೆಸಿದ್ದ ತುಘಲಕ್‌ನನ್ನು, ಆತನ ಮತ್ತೊಂದು ಬದಿಯ ಚಿತ್ರಣವನ್ನು ಅಕ್ಷರಗಳ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. ಟಿಪ್ಪುಸುಲ್ತಾನ್‌ರಿಗೆ ಸಂಬಂಧಿಸಿದ ಶಾಸನಗಳು, ಸಾಕ್ಷಿಗಳು ಇದ್ದಾಗಲೂ ದ್ವೇಷ ಮಾಡಬೇಕಾಗಿದೆ ಎನ್ನುವ ದುರುದ್ದೇಶದಿಂದ ಸುಳ್ಳನ್ನು ಹರಡಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಟಿಪ್ಪು ಸುಲ್ತಾನರ ನೈಜ ಪಾತ್ರವನ್ನು ಕಾರ್ನಾಡರು ತಮ್ಮ ಕೃತಿಗಳಲ್ಲಿ ತುಂಬಿಕೊಟ್ಟಿದ್ದಾರೆ ಎಂದರು.

ಬರೆಯುವುದು ನನ್ನ ಬದ್ಧತೆಗಾಗಿ ಎಂದು ಶಿವರಾಮ್ ಕಾರಂತರು ಹೇಳುತ್ತಿದ್ದರು. ಕಾರ್ನಾಡರು ಕೂಡ ಅದೇ ಮಾರ್ಗದಲ್ಲಿ ನಡೆದರು. ಸ್ವಾತಂತ್ರೋತ್ತರ ಹಾಗೂ ಸ್ವಾತಂತ್ರೋತ್ಸವ ಬಳಿಕ ಚರಿತ್ರೆ ಸುಳ್ಳಾಗಿಸುವ ಪ್ರಯತ್ನವನ್ನು ಪ್ಯಾಶಿಸ್ಟ್ ಶಕ್ತಿಗಳು ಮಾಡುತ್ತಾ ಬರುತ್ತಿವೆ. ಇವುಗಳನ್ನು ಕೆಲವೆಡೆ ಕಾರ್ನಾಡರು ವಿರೋಧಿಸಿದ್ದರು. ಕಾರ್ನಾಡ್ ಮೊದಲು ಆ್ಯಕ್ಟಿವಿಸ್ಟ್ ಆಗಿರಲಿಲ್ಲ ಎಂದು ಹೇಳಿದರು.

ಸಮುದಾಯ ಮಂಗಳೂರು ಇದರ ಉಪಾಧ್ಯಕ್ಷ ವಾಸುದೇವ ಉಚ್ಚಿಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲ ರೆ.ಡಾ.ಪ್ರವೀಣ್ ಮಾರ್ಟಿಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಕೆ.ಸರಸ್ವತಿಕುಮಾರಿ ಸ್ವಾಗತಿಸಿದರು. ವಿದ್ಯಾರ್ಥಿನಿ ಚಿನ್ಮಯಿ ಪ್ರಾರ್ಥಿಸಿದರು. ಚಿನ್ಮಯಿ ಮತ್ತು ಮೇಘನಾ ‘ಗಿಳಿಯು ಪಂಜರದೊಳಿಲ್ಲ...’ ಗೀತೆಯನ್ನು ಪ್ರಸ್ತುತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News