ನಾಯಕರನ್ನು ಸೃಷ್ಠಿಸುವ ಧೀಮಂತ ನಾಯಕ ಬಿ.ಮಾಧವ: ಅದಮಾರು ಶ್ರೀಪತಿ ಆಚಾರ್ಯ

Update: 2019-06-20 15:16 GMT

ಉಡುಪಿ, ಜೂ.20: ಇಂದು ಕೆಲವು ನಾಯಕರು ಕೇವಲ ತಮ್ಮ ಅನು ಯಾಯಿಗಳನ್ನು ಸೃಷ್ಠಿಸುತ್ತಿದ್ದಾರೆಯೇ ಹೊರತು ನಾಯಕರುಗಳನ್ನಲ್ಲ. ಆದರೆ ಬಿ.ಮಾಧವ ಅವರು ನಾಯಕರನ್ನು ಸೃಷ್ಠಿಸುವ ಧೀಮಂತ ನಾಯಕರಾಗಿದ್ದರು ಎಂದು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ಉಡುಪಿ ಜಿಲ್ಲಾ ಸಂಚಾಲಕ ಅದಮಾರು ಶ್ರೀಪತಿ ಆಚಾರ್ಯ ಹೇಳಿದ್ದಾರೆ.

ವಿಮಾ ನೌಕರರ ಸಂಘ ಉಡುಪಿ ವಿಭಾಗದ ವತಿಯಿಂದ ಅಜ್ಜರಕಾಡಿನಲ್ಲಿ ರುವ ಸಂಘದ ಕಚೇರಿಯಲ್ಲಿ ಕಾರ್ಮಿಕ ಸಂಘಟನೆಗಳ ನಾಯಕ ಕಾ.ಬಿ. ಮಾಧವ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡುತಿದ್ದರು.

ಸಾಹಿತ್ಯದಲ್ಲಿ ಬಹಳ ಆಸಕ್ತಿ ಹೊಂದಿದ್ದ ಇವರು ಮಲಯಾಳಂ ಕೃತಿಯನ್ನು ಕನ್ನಡಕ್ಕೆ ಅನುವಾದ ಮಾಡಿದ್ದರು. ಸಂಘಟನಾ ಶಕ್ತಿ, ಬಹುಭಾಷಾ ಪ್ರವೀಣ ಹಾಗೂ ಹಾಸ್ಯ ಪ್ರಜ್ಞೆ ಕೂಡ ಅವರಲ್ಲಿತ್ತು. ಕಠಿಣ ಕಾಲದಲ್ಲೂ ಸಂಘಟನೆಗೆ ನೇತೃತ್ವ ನೀಡಿದ ಸಮರಶೀಲ ವ್ಯಕ್ತಿ ಅವರಾಗಿದ್ದರು. ಸಾಂಪ್ರದಾಯಿಕ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿ ಜಾತಿವಾದಿಯಾಗಿದ್ದ ನನ್ನನ್ನು ಮಾನವತಾವಾದಿಯನ್ನಾಗಿ ಪರಿವರ್ತಿಸಿದ ಕೀರ್ತಿ ಮಾಧವರಿಗೆ ಸಲ್ಲಬೇಕು ಎಂದರು.

ಚಿಂತಕ ಪ್ರೊ.ಫಣಿರಾಜ್ ಮಾತನಾಡಿ, ಬಿ.ಮಾಧವ ಕೇವಲ ಒಬ್ಬ ವ್ಯಕ್ತಿ ಯಲ್ಲ, ಅವರೊಂದು ಯುಗ. ನಾವು ಈಗ ಜೀವಂತ ಬುದ್ದಿಜೀವಿ, ಹಕ್ಕಿನ ಹೋರಾಟಗಾರನನ್ನು ಕಳೆದುಕೊಂಡಿದ್ದೇವೆ. ಬೀಡಿ, ಹಂಚಿನ ಕಾರ್ಮಿಕರಿಗೆ ಬೌದ್ಧಿಕತೆ ಕೊಡುವುದು ಅಷ್ಟು ಸುಲಭದ ಕೆಲಸ ಅಲ್ಲ. ಆದರೆ ಮಾಧವರು ಅದನ್ನು ನೀಡಿ ಅವರಿಗೆ ತಮ್ಮ ಹಕ್ಕಿನ ಪಾತ್ರವನ್ನು ಕಲಿಸಿಕೊಟ್ಟಿದ್ದರು ಎಂದು ತಿಳಿಸಿದರು.

ಹಿರಿಯ ಚಿಂತಕ ಜಿ.ರಾಜಶೇಖರ್ ಮಾತನಾಡಿ, ನಾವು ನಮ್ಮ ಗಳಿಕೆಯಲ್ಲಿ ಆಶಾವಾದಿಗಳಾಗಿರಲು ಸಾಧ್ಯವೇ ಇಲ್ಲ. ಆದರೆ ಸಂಕಲ್ಪದಲ್ಲಿ ಆಶಾವಾದಿ ಗಳಾಗಿರಬೇಕು. ಇದು ಮಾಧವರು ನಮಗೆ ಮುಖ್ಯವಾಗಿ ಕಲಿಸಿದ ಪಾಠ ಎಂದು ಹೇಳಿದರು.

ವಿಮಾ ನೌಕರರ ಸಂಘ ಉಡುಪಿ ವಿಭಾಗದ ಅಧ್ಯಕ್ಷ ವಿಶ್ವನಾಥ್, ಕಾರ್ಯದರ್ಶಿ ಪ್ರಭಾಕರ್, ಸಂಘದ ಪ್ರಮುಖರಾದ ಕೆ.ರಾಘವೇಂದ್ರ ಭಟ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News