ಬಜೆಯಲ್ಲಿ ನೀರಿನ ಸಂಗ್ರಹ ಮಟ್ಟ ಏರಿಕೆ: ನಾಳೆಯಿಂದ ನಾಲ್ಕು ದಿನಗಳಿಗೊಮ್ಮೆ ನೀರು ಪೂರೈಕೆ

Update: 2019-06-20 15:20 GMT

ಉಡುಪಿ, ಜೂ.20: ಉಡುಪಿ ನಗರಸಭೆಗೆ ನೀರು ಪೂರೈಕೆ ಮಾಡುವ ಸ್ವರ್ಣ ನದಿಯ ಬಜೆ ಅಣೆಕಟ್ಟಿನಲ್ಲಿ ನೀರಿನ ಒಳ ಹರಿವು ಹೆಚ್ಚಾಗಿದ್ದು, ನೀರಿನ ಸಂಗ್ರಹ 4.60ಮೀಟರ್‌ಗೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ನಗರಕ್ಕೆ ಆರು ದಿನಗಳ ಬದಲು ನಾಲ್ಕು ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲು ಅಧಿಕಾರಿಗಳು ಚಿಂತನೆ ನಡೆಸುತ್ತಿದ್ದಾರೆ.

ಕಳೆದ ಕೆಲವು ದಿನಗಳಿಂದ ಜಿಲ್ಲೆಯಾದ್ಯಂತ ಸಾಧಾರಣ ಮಳೆಯಾಗುತ್ತಿರುವ ಪರಿಣಾಮ ಸ್ವರ್ಣ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಬಜೆಯಲ್ಲಿ ನೀರಿನ ಸಂಗ್ರಹದ ಮಟ್ಟ ಏರಿಕೆ ಕಂಡಿದೆ. ಇಂದು ಸಂಜೆಯ ವೇಳೆ ನೀರಿನ ಮಟ್ಟ 4.60 ಮೀಟರ್ ಇದ್ದು, ನೀರಿನ ಪ್ರಮಾಣ 4.90ಮೀಟರ್‌ಗಿಂತ ಹೆಚ್ಚಾದರೆ ನೀರು ಉಕ್ಕಿ ಹರಿಯಲಿದೆ. ರಾತ್ರಿ ವೇಳೆ ನೀರು ಈ ಮಟ್ಟಕ್ಕೆ ಏರಿಕೆಯಾಗಿ ಉಕ್ಕಿ ಹರಿಯುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಬಜೆಯಲ್ಲಿ ಈಗ ದಿನದ 24ಗಂಟೆಗಳ ಕಾಲವೂ ನೀರು ಪಂಪಿಂಗ್ ಮಾಡ ಲಾಗುತ್ತಿದೆ. ಸದ್ಯ ನಗರಕ್ಕೆ ಆರು ದಿನಗಳಿಗೊಮ್ಮೆ ನೀರು ಪೂರೈಕೆ ಮಾಡುವ ರೇಶನಿಂಗ್ ವ್ಯವಸ್ಥೆ ಮುಂದುವರೆಸಲಾಗಿದೆ. ನೀರಿನ ಮಟ್ಟ ಇನ್ನು ಹೆಚ್ಚಾಗಿ ಉಕ್ಕಿ ಹರಿದರೆ ಜೂ.22ರಿಂದ ನಾಲ್ಕು ದಿನಗಳಿಗೊಮ್ಮೆ ನೀರು ಸರಬರಾಜು ಮಾಡುವ ವ್ಯವಸ್ಥೆಯನ್ನು ಆರಂಭಿಸಲಾಗುವುದು. ಆದರೆ ಮುಂಗಾರು ಸಮರ್ಪಕವಾಗಿ ಆರಂಭವಾಗುವವರೆಗೆ ದಿನದ 24ಗಂಟೆಗಳ ನೀರು ಪೂರೈಕೆ ಮಾಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News