ತಾಲಿಬಾನ್ ಸಂಧಾನಕಾರನೊಂದಿಗೆ ಮಾತುಕತೆ ನಡೆಸಿದ್ದು ಹೌದು: ಒಪ್ಪಿಕೊಂಡ ಚೀನಾ

Update: 2019-06-20 16:21 GMT

ಬೀಜಿಂಗ್, ಜೂ. 20: ಅಫ್ಘಾನಿಸ್ತಾನದಲ್ಲಿನ ಚೀನಾದ ಪಾತ್ರವನ್ನು ವಿಸ್ತರಿಸುವುದಕ್ಕಾಗಿ ಹಾಗೂ ಯುದ್ಧಗ್ರಸ್ತ ದೇಶದಲ್ಲಿ ಶಾಂತಿಯನ್ನು ಮರುಸ್ಥಾಪಿಸುವ ಪ್ರಯತ್ನವಾಗಿ, ಅಫ್ಘಾನ್ ತಾಲಿಬಾನ್‌ನ ಮುಖ್ಯ ಶಾಂತಿ ಸಂಧಾನಕಾರ ಮುಲ್ಲಾ ಅಬ್ದುಲ್ ಘನಿ ಬರಾದರ್ ಜೊತೆಗೆ ಇತ್ತೀಚೆಗೆ ಮಾತುಕತೆ ನಡೆಸಿರುವುದನ್ನು ಚೀನಾ ಗುರುವಾರ ಮೊದಲ ಬಾರಿಗೆ ಒಪ್ಪಿಕೊಂಡಿದೆ.

1994ರ ತಾಲಿಬಾನನ್ನು ಸ್ಥಾಪಿಸಿದ ನಾಲ್ವರು ಕಮಾಂಡರ್‌ಗಳ ಪೈಕಿ ಒಬ್ಬನಾಗಿರುವ ಮುಲ್ಲಾ ಬರಾದರ್‌ನನ್ನು ಪಾಕಿಸ್ತಾನ ಸರಕಾರವು ಕಳೆದ ವರ್ಷ ಜೈಲಿನಿಂದ ಬಿಡುಗಡೆಗೊಳಿಸಿತ್ತು.

ಜೈಲಿನಿಂದ ಬಿಡುಗಡೆಯಾದ ಬಳಿಕ, ಮುಲ್ಲಾ ಬರಾದರ್, ಅಫ್ಘಾನ್ ಶಾಂತಿ ಮಾತುಕತೆಗಾಗಿ ನಿಯೋಜಿಸಲ್ಪಟ್ಟಿರುವ ಅಮೆರಿಕದ ಪ್ರತಿನಿಧಿ ಝಲ್ಮಾಯ್ ಖಲೀಲ್‌ಝಾದ್ ಜೊತೆ ಮಾತುಕತೆ ನಡೆಸುತ್ತಿದ್ದಾನೆ.

ಪಾಕಿಸ್ತಾನದ ಆಪ್ತ ಮಿತ್ರನಾಗಿರುವ ಚೀನಾವು ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ಪ್ರಯತ್ನಿಸುತ್ತಿದೆ. ಅಫ್ಘಾನಿಸ್ತಾನದಲ್ಲಿ ದಾಳಿಗಳನ್ನು ನಡೆಸುತ್ತಿರುವ ಅಫ್ಘಾನ್ ತಾಲಿಬಾನ್, ಹಕ್ಕಾನಿ ನೆಟ್‌ವರ್ಕ್ ಮತ್ತು ಇತರ ಭಯೋತ್ಪಾದಕ ಗುಂಪುಗಳಿಗೆ ಪಾಕಿಸ್ತಾನ ಆಶ್ರಯ ನೀಡುತ್ತಿದೆ ಎಂಬುದಾಗಿ ಅಫ್ಘಾನಿಸ್ತಾನ ಆರೋಪಿಸುತ್ತಿದೆ.

‘‘ದೋಹಾದಲ್ಲಿರುವ ತಾಲಿಬಾನ್ ರಾಜಕೀಯ ಕಚೇರಿಯ ಮುಖ್ಯಸ್ಥ ಬರಾದರ್ ಚೀನಾಕ್ಕೆ ಭೇಟಿ ನೀಡಿದ್ದಾರೆ’’ ಎಂದು ಚೀನಾದ ವಿದೇಶ ಸಚಿವಾಲಯ ವಕ್ತಾರ ಲು ಕಾಂಗ್ ಗುರುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.

‘‘ಅವನ ಭೇಟಿಯ ವೇಳೆ, ಅಫ್ಘಾನಿಸ್ತಾನದಲ್ಲಿನ ಶಾಂತಿ ಮತ್ತು ರಾಜಿ ಪ್ರಕ್ರಿಯೆ ಹಾಗೂ ಭಯೋತ್ಪಾದನೆ ವಿರುದ್ಧದ ಹೋರಾಟದ ಬಗ್ಗೆ ಅವನೊಂದಿಗೆ ಚೀನಾ ಅಧಿಕಾರಿಗಳು ವಿಚಾರ ವಿನಿಮಯ ನಡೆಸಿದರು’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News