×
Ad

ಬಲಿ ಕೊಡುವ ಕುರಿ ಬಂದಿದೆಯಾ?: ಧ್ವನಿಮುದ್ರಿಕೆಯಲ್ಲಿ ಖಶೋಗಿ ಹತ್ಯೆಯ ಘೋರ ವಿವರಗಳು

Update: 2019-06-20 21:56 IST

ರಿಯಾದ್, ಜೂ. 20: ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಸೌದಿ ಅರೇಬಿಯದ ಭಿನ್ನಮತೀಯ ಪತ್ರಕರ್ತ ಜಮಾಲ್ ಖಶೋಗಿಯ ಹತ್ಯೆ ನಡೆಯುವ ಕ್ಷಣಗಳ ಮೊದಲು, ಟರ್ಕಿ ದೇಶದ ಇಸ್ತಾಂಬುಲ್ ನಗರದಲ್ಲಿರುವ ಸೌದಿ ಅರೇಬಿಯದ ಕೌನ್ಸುಲೇಟ್ ಕಚೇರಿಯಲ್ಲಿ ಖಶೋಗಿಗಾಗಿ ಕಾಯುತ್ತಿದ್ದ ಇಬ್ಬರು ಶಂಕಿತ ಹಂತಕರು ತಾವು ಮಾಡಬೇಕಾದ ಕೃತ್ಯದ ಬಗ್ಗೆ ಗಾಬರಿಗೊಂಡಿದ್ದರು ಎಂದು ಬುಧವಾರ ಪ್ರಕಟಗೊಂಡ ವಿಶ್ವಸಂಸ್ಥೆಯ ವರದಿಯೊಂದು ತಿಳಿಸಿದೆ.

‘‘ಮುಂಡ (ಕೈ-ಕಾಲುಗಳು ಮತ್ತು ತಲೆಯಿಲ್ಲದ ದೇಹ)ವನ್ನು ಚೀಲದಲ್ಲಿಡಲು ಸಾಧ್ಯವೇ?’’ ಎಂಬುದಾಗಿ ಸೌದಿ ಯುವರಾಜರ ಹಿರಿಯ ಸಲಹೆಗಾರನಿಗಾಗಿ ಕೆಲಸ ಮಾಡುತ್ತಿದ್ದ ಸೌದಿಯ ಗುಪ್ತಚರ ಅಧಿಕಾರಿ ಮಹರ್ ಮುತ್ರೆಬ್ ಕೇಳಿದ್ದನು ಎಂದು ವಿಶ್ವಸಂಸ್ಥೆಯ ವರದಿ ಹೇಳಿದೆ.

ನ್ಯಾಯಾಂಗದಿಂದ ಹೊರಗೆ ನಡೆಯುವ ಹತ್ಯೆಗಳಿಗೆ ಸಂಬಂಧಿಸಿದ ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿ ಈ ವರದಿಯನ್ನು ಸಲ್ಲಿಸಿದ್ದಾರೆ.

‘‘ಇಲ್ಲ. ತುಂಬಾ ಭಾರವಿದೆ’’ ಎಂಬುದಾಗಿ ಈ ಪ್ರಶ್ನೆಗೆ ಆಂತರಿಕ ಸಚಿವಾಲಯದ ಫಾರೆನ್ಸಿಕ್ ವೈದ್ಯ ಸಲಾಹ್ ಅಲ್-ತುಬೈಗಿ ಉತ್ತರಿಸುತ್ತಾನೆ. ಖಶೋಗಿ ದೇಹವನ್ನು ಛಿದ್ರಗೊಳಿಸಿ ವಿಲೇವಾರಿ ಮಾಡುವುದು ಅವನ ಕೆಲಸವಾಗಿತ್ತು. ತನ್ನ ಕೆಲಸ ಸುಲಭವಾಗಿರಲಿ ಎಂಬುದಾಗಿ ಅವನು ಆಶಿಸುತ್ತಾನೆ.

ತುಬೈಗಿ ಮುಂದುವರಿದು ಹೇಳುತ್ತಾನೆ: ‘‘ಸಂದುಗಳನ್ನು ಪ್ರತ್ಯೇಕಿಸಲಾಗುವುದು. ಅದೇನೂ ಸಮಸ್ಯೆಯಲ್ಲ. ದೇಹ ಭಾರವಾಗಿದೆ. ನೆಲದ ಮೇಲೆ ನಾನು ಮೊದಲ ಬಾರಿಗೆ ಕತ್ತರಿಸುತ್ತಿರುವುದು. ನಾವು ಪ್ಲಾಸ್ಟಿಕ್ ಚೀಲಗಳನ್ನು ಪಡೆದು ದೇಹವನ್ನು ತುಂಡು ತುಂಡಾಗಿ ಕತ್ತರಿಸಿದರೆ, ಅಲ್ಲಿಗೆ ಮುಗಿಯುತ್ತದೆ. ಬಳಿಕ ನಾವು ಪ್ರತಿಯೊಂದು ತುಂಡುಗಳನ್ನು ಸುತ್ತಿಡಬೇಕು’’.

ಮುತ್ರೆಬ್ ಮತ್ತು ಇತರ 10 ಮಂದಿಯ ವಿರುದ್ಧ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸೌದಿ ಅರೇಬಿಯದಲ್ಲಿ ಮುಚ್ಚಿದ ಬಾಗಿಲ ಹಿಂದೆ ವಿಚಾರಣೆ ನಡೆಯುತ್ತಿದೆ.

ಅಕ್ಟೋಬರ್ 2ರಂದು ಖಶೋಗಿ, ಕೌನ್ಸುಲೇಟ್ ಕಚೇರಿಗೆ ಹೋಗುವ ಮೊದಲು ತುಬೈಗಿ ಮತ್ತು ಮುತ್ರೆಬ್ ನಡುವೆ ನಡೆದ ಸಂಭಾಷಣೆಯ ಕೊನೆಯಲ್ಲಿ ಮುತ್ರೆಬ್, ‘‘ಬಲಿ ಕೊಡುವ ಕುರಿ ಬಂದಿದೆಯಾ?’’ ಎಂದು ಕೇಳುತ್ತಾನೆ. ಯಾವುದೇ ಸಂದರ್ಭದಲ್ಲಿ ಅವರು ಖಶೋಗಿಯ ಹೆಸರನ್ನು ಹೇಳುವುದಿಲ್ಲ.

ಬಳಿಕ, 2 ನಿಮಿಷಗಳಲ್ಲಿ ಖಶೋಗಿ ಸೌದಿ ಕೌನ್ಸುಲೇಟ್ ಕಚೇರಿಯನ್ನು ಪ್ರವೇಶಿಸುತ್ತಾರೆ.

ವರದಿಯಲ್ಲಿ ಹೊಸತೇನೂ ಇಲ್ಲ: ಸೌದಿ

ಸೌದಿ ಅರೇಬಿಯದ ಪತ್ರಕರ್ತ ಜಮಾಲ್ ಖಶೋಗಿಯ ಹತ್ಯೆಯಲ್ಲಿ ಸೌದಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಮತ್ತು ಇತರ ಉನ್ನತ ಮಟ್ಟದ ಅಧಿಕಾರಿಗಳು ಶಾಮೀಲಾಗಿದ್ದಾರೆ ಎನ್ನುವುದಕ್ಕೆ ಪ್ರಬಲ ಪುರಾವೆಗಳಿವೆ ಎಂದು ಹೇಳುವ ವಿಶ್ವಸಂಸ್ಥೆಯ ವರದಿಯನ್ನು ಸೌದಿ ಅರೇಬಿಯದ ವಿದೇಶ ವ್ಯವಹಾರಗಳ ಸಹಾಯಕ ಸಚಿವ ಆದಿಲ್ ಅಲ್-ಜುಬೈರ್ ಬುಧವಾರ ತಿರಸ್ಕರಿಸಿದ್ದಾರೆ.

‘‘ಇದರಲ್ಲಿ ಹೊಸತೇನೂ ಇಲ್ಲ. ಈಗಾಗಲೇ ಮಾಧ್ಯಮಗಳಲ್ಲಿ ಪ್ರಕಟಗೊಂಡಿರುವುದನ್ನು ವಿಶ್ವಸಂಸ್ಥೆಯ ಮಾನವಹಕ್ಕುಗಳ ಅಧಿಕಾರಿ ತನ್ನ ವರದಿಯಲ್ಲಿ ಪುನರುಚ್ಚರಿಸಿದ್ದಾರೆ’’ ಎಂಬುದಾಗಿ ಅವರು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News