ಪಶ್ಚಿಮಬಂಗಾಳದಲ್ಲಿ ಮತ್ತೆ ಹಿಂಸಾಚಾರ: ಇಬ್ಬರು ಸಾವು, ಮೂವರಿಗೆ ಗಾಯ

Update: 2019-06-20 16:42 GMT

ಕೋಲ್ಕತಾ, ಜೂ. 20: ಪಶ್ಚಿಮಬಂಗಾಳದಲ್ಲಿ ಗುರುವಾರ ಹಿಂಸಾಚಾರ ಮತ್ತೆ ಭುಗಿಲೆದ್ದಿದ್ದು, ಇಬ್ಬರು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ. ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯ ಸಂದರ್ಭ ಸಾಮೂಹಿಕ ಹಿಂಸಾಚಾರ ನಡೆದ ಭಾಟಪಾರದಲ್ಲೇ ಈ ಘಟನೆ ನಡೆದಿದೆ.

ಘರ್ಷಣೆ ಸಂಭವಿಸಲು ಕಾರಣ ಏನು ಎಂದು ಇದುವರೆಗೆ ತಿಳಿದು ಬಂದಿಲ್ಲ. ಆದರೆ, ಕಚ್ಚಾ ಬಾಂಬ್ ಎಸೆಯಲಾಗಿದೆ ಹಾಗೂ ಗುಂಡಿನ ದಾಳಿ ನಡೆಸಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಹಿಂಸಾಚಾರದಲ್ಲಿ ತೊಡಗಿದ್ದವರನ್ನು ಚದುರಿಸಲು ಪೊಲೀಸರು ಅಶ್ರುವಾಯು ಸೆಲ್‌ಗಳನ್ನು ಸಿಡಿಸಿದ್ದಾರೆ. ಪೊಲೀಸರು ಗುಂಡು ಕೂಡ ಹಾರಿಸಿದ್ದಾರೆ ಎಂದು ಕೆಲವು ವರದಿಗಳು ಹೇಳಿವೆ.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಕೇಂದ್ರದ ಒತ್ತಡಕ್ಕೆ ಒಳಗಾಗಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಹಿಂಸಾಚಾರಕ್ಕೆ ತೃಣಮೂಲ ಕಾಂಗ್ರೆಸ್ ಕಾರಣ ಎಂದು ಬಿಜೆಪಿ ಆರೋಪಿಸಿದೆ ಹಾಗೂ ಅದು ಈ ಹಿಂಸಾಚಾರದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ವರದಿ ರವಾನಿಸಿದೆ. ಹಿಂಸಾಚಾರದಲ್ಲಿ ಮೃತಪಟ್ಟ ಇಬ್ಬರಲ್ಲಿ ಓರ್ವನನ್ನು 17 ವರ್ಷದ ಪಾನಿಪುರಿ ಮಾರಾಟಗಾರ ರಾಮ್‌ಬಾಬು ಶಾ ಎಂದು ಗುರುತಿಸಲಾಗಿದೆ. ಗಂಭೀರ ಗಾಯಗೊಂಡಿದ್ದ ಇನ್ನೋರ್ವ ಆಸ್ಪತ್ರೆಯಲ್ಲಿ ಮೃತಪಪಟ್ಟಿದ್ದಾನೆ. ಗಂಭೀರ ಗಾಯಗೊಂಡ ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಆರ್‌ಎಎಫ್ ಸಿಬ್ಬಂದಿ ಸಹಿತ ಪೊಲೀಸ್ ಅಧಿಕಾರಿಗಳ ತಂಡವನ್ನು ನಿಯೋಜಿಸಲಾಗಿದೆ. ಅಂಗಡಿ, ಮಾರುಕಟ್ಟೆ ಹಾಗೂ ಉದ್ಯಮ ಸಂಸ್ಥೆಗಳು ಬಾಗಿಲು ಮುಚ್ಚಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News