ಉಡುಪಿ: ವಿಕಲಚೇತನರಿಗೆ ವಿಶಿಷ್ಟ ಗುರುತಿನ ಚೀಟಿ ಯೋಜನೆ

Update: 2019-06-20 16:46 GMT

ಉಡುಪಿ, ಜೂ.20: ಭಾರತ ಸರಕಾರದ ವಿಶಿಷ್ಟ ಗುರುತಿನ ಚೀಟಿ ಯೋಜನೆ ಯು ವಿಕಲಚೇತರಿಗೆ ವೈದ್ಯಕೀಯ ಪ್ರಾಧಿಕಾರಗಳಿಂದ ದೃಢೀಕರಿಸಲಾಗುವ ವೈದ್ಯಕೀಯ ಪ್ರಮಾಣ ಪತ್ರದ ಸಮಗ್ರ ಮಾಹಿತಿಯುಳ್ಳ ಗಣಕೀಕೃತ ಗುರುತಿನ ಚೀಟಿಯನ್ನು ನೀಡುವ ವ್ಯವಸ್ಥೆಯಾಗಿದ್ದು, ಇದರಲ್ಲಿ ವಿಕಲಚೇತನ ವ್ಯಕ್ತಿಯ ವಿವರಗಳು ಹಾಗೂ ಅವರಲ್ಲಿರುವ ವಿಕಲತೆಯ ವಿವರ ಮತ್ತು  ಪ್ರಮಾಣ ನಮೂದಿತವಾಗಿರುತ್ತದೆ.

ಈ ವಿಶಿಷ್ಟ ಗುರುತಿನ ಚೀಟಿ ಯೋಜನೆಯು ದೇಶದ ವಿಕಲಚೇತನರ ಅಂಕಿ ಸಂಖ್ಯೆಗಳ ಮಾಹಿತಿಯನ್ನು ನೀಡುತ್ತದೆ. ಈ ಯೋಜನೆಯ ಅನುಷ್ಠಾನದ ಉದ್ದೇಶ ಸರಕಾರದ ಸೌಲಭ್ಯಗಳು ಪರಿಣಾಮಕಾರಿಯಾಗಿ ವಿಕಲಚೇತನರಿಗೆ ತಲುಪುವಂತೆ ಮಾಡುವುದಾಗಿದೆ. ಈ ಯೋಜನೆಯು ವಿಕಲಚೇತನರಿಗೆ ಸಂಬಂಧಿಸಿದಂತೆ ರಾಜ್ಯ, ಜಿಲ್ಲೆ, ತಾಲೂಕು ಮತ್ತು ಗ್ರಾಮ ಮಟ್ಟದಲ್ಲಿ ಅಂಗವಿಕಲರು ಪಡೆದ ವಿವಿಧ ಯೋಜನೆಗಳನ್ನು ಪಡೆಯುವಲ್ಲಿ ಪಾರದರ್ಶ ಕತೆಯನ್ನು ಕಾಪಾಡುವುದು ಹಾಗೂ ಅವರ ಸಾಮಾಜಿಕ ಹಾಗೂ ಆರ್ಥಿಕ ಚಿತ್ರಣವನ್ನು ನೀಡುವುದರಲ್ಲಿ ಸಹಕಾರಿಯಾಗಲಿದೆ.

ವಿಕಲಚೇತನರ ಈ ವಿಶಿಷ್ಟ ಗುರುತಿನ ಚೀಟಿಯು ಅವರ ಜೀವನದಲ್ಲಿ ಆಧಾರ್ ಕಾರ್ಡ್‌ನಷ್ಟೇ ಪ್ರಮುಖವಾದ ದಾಖಲೆಯಾಗಲಿದೆ. ಈ ಯೋಜನೆ ಯನ್ನು ಸರಕಾರ 2019ನೇ ವರ್ಷದಿಂದ ಕಡ್ಡಾಯಗೊಳಿಸಿ ಪ್ರತಿಯೊಬ್ಬ ವಿಕಲಚೇತನ ವ್ಯಕ್ತಿಯು ಈ ಯೋಜನೆಯ ಅಡಿಯಲ್ಲಿ ನೊಂದಣಿ ಮಾಡಿ ಕೊಂಡು ಅಂಗವಿಕಲರ ವಿಶೇಷ ಗುರುತಿನ ಚೀಟಿಯನ್ನು ಪಡೆದುಕೊಳ್ಳುವಂತೆ ಆದೇಶಿಸಿದೆ.

ಪ್ರಯೋಜನಗಳು: ವಿಕಲಚೇತನ ವ್ಯಕ್ತಿಯು ಅವರಿಗಾಗಿ ಇರುವ ಸೌಲಭ್ಯ ವನ್ನು ಪಡೆದುಕೊಳ್ಳುವಲ್ಲಿ ಇದು ಸಹಕಾರಿಯಾಗಲಿದೆ. ವಿಕಲಚೇತನ ವ್ಯಕ್ತಿಯ ವಿಕಲತೆಗೆ ಸಂಬಂಧಿಸಿದ ಮುಖ್ಯ ದಾಖಲೆಯನ್ನು ಇದು ಹೊಂದಿರುವುದರಿಂದ ದೇಶ ವ್ಯಾಪಿ ಮಾನ್ಯತೆ ಇದೆ. ಈ ಕಾರ್ಡ್‌ನ್ನು ಭಾರತ ದಾದ್ಯಂತ ವಿಕಲಚೇತನ ವ್ಯಕ್ತಿಗಳ ಅಂಗವೈಕಲ್ಯತೆಗೆ ಪುರಾವೆಯಾಗಿ ಪರಿಗಣಿಸಲಾಗುತ್ತದೆ. ವಿಕಲಚೇತನ ವ್ಯಕ್ತಿಯ ಮಾಹಿತಿಗಳ ದುರ್ಬಳಕೆಗೆ ಬೇರೆ ವ್ಯಕ್ತಿಗಳಿಗೆ ಅವಕಾಶವಿರುವುದಿಲ್ಲ. ಆನ್‌ಲೈನ್ ಮೂಲಕ ಮಾಹಿತಿ ತುಂಬಿ ಯುಡಿಐಡಿ ಕಾರ್ಡ್ ಪಡೆದು ಕೊಳ್ಳುವುದರಿಂದ ಯಾವುದೇ ವ್ಯಕ್ತಿಯ ಮಾಹಿತಿಗಳನ್ನು ನಕಲಿ ದಾಖಲೆಗಳಾಗಿ ಪಡೆಯಲು ಸಾಧ್ಯವಿಲ್ಲ.

ಕಾರ್ಡ್ ಪಡೆಯುವ ವಿಧಾನ: ಅರ್ಜಿಯನ್ನು ಪಡೆಯಲು ವೆಬ್‌ಸೈಟ್ ನಲ್ಲಿ ಮಾಹಿತಿಯನ್ನು ತುಂಬಬೇಕು. ಮಾಹಿತಿಯನ್ನು ತುಂಬಲು ಬೇಕಾದ ಅಗತ್ಯ ದಾಖಲೆಗಳ ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಬೇಕು. ಬೇಕಾದ ದಾಖಲೆಗಳು ಪಾಸ್‌ಪೋರ್ಟ್ ಸೈಜ್ ಭಾವಚಿತ್ರ, ವಿಕಲಚೇತನ ವ್ಯಕ್ತಿಯ ಸಹಿ, ಹೆಬ್ಬೆರಳಿನ ಗುರುತು, ಹಿಂದುಳಿದ ಜಾತಿ ವರ್ಗಕ್ಕೆ ಸೇರಿದವರಾಗಿದ್ದಲ್ಲಿ ಜಾತಿ ಪ್ರಮಾಣ ಪತ್ರ, ಅಂಗವಿಕಲತೆಯ ವೈದ್ಯಕೀಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಯಾವುದಾದರೊಂದು ಅಡ್ರೆಸ್ ಫ್ರೂಪ್ (ರೇಷನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ವೋಟರ್ ಐಡಿ ಇತ್ಯಾದಿ), ಈಗಾಗಲೇ ಅಂಗವಿಕಲತೆಯ ವೈದ್ಯಕೀಯ ಪ್ರಮಾಣ ಪತ್ರ ಹೊಂದಿರುವವರು ಕೂಡ ಯುಡಿಐಡಿ ಕಾರ್ಡ್ ಪಡೆಯಲು ನೋಂದಾಯಿಸಿಕೊಳ್ಳಬೇಕಾಗುತ್ತದೆ.

ಆನ್‌ಲೈನ್ ಮೂಲಕ ಸಲ್ಲಿಸಿದ ಅರ್ಜಿಯಲ್ಲಿ ನಮೂದಿಸಿದ ವಿಳಾಸಕ್ಕೆ ಅಂಚೆಯ ಮೂಲಕ ಕಾರ್ಡ್‌ನ್ನು ತಲುಪಿಸಲಾಗುತ್ತದೆ. ಈ ಕುರಿತು ಹೆಚ್ಚಿನ ಮಾಹಿತಿಗಳಿಗೆ ಇಲಾಖೆಯ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ವಿಕಲಚೇತನ ಸಬಲೀಕರಣ ಅಧಿಕಾರಿ ನಿರಂಜನ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News