ಮಣಿಪಾಲ: ವೈದ್ಯಕೀಯ ಖರ್ಚಿನ ರಿಯಾಯಿತಿ ಹೆಸರಿನಲ್ಲಿ ಚಿನ್ನಾಭರಣ ವಂಚನೆ

Update: 2019-06-20 17:05 GMT

ಮಣಿಪಾಲ, ಜೂ. 20: ವೈದ್ಯಕೀಯ ಖರ್ಚಿನ ಅರ್ಧದಷ್ಟು ಹಣವನ್ನು ವಾಪಸ್ಸು ಕೊಡಿಸುವುದಾಗಿ ನಂಬಿಸಿ ಮಹಿಳೆಯೊಬ್ಬರ ಚಿನ್ನದ ಸರವನ್ನು ಕಳವು ಮಾಡಿರುವ ಘಟನೆ ಜೂ.19ರಂದು ಬೆಳಗ್ಗೆ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ನಡೆದಿದೆ.

ಚಿತ್ರದುರ್ಗ ಜಿಲ್ಲೆಯ ಚೆಳ್ಳೆಕೆರೆಯ ತಿಪ್ಪೆ ಸ್ವಾಮಿ ಎಂಬವರ ಪತ್ನಿ ಶಾರದಮ್ಮ ಎಂಬವರು ತನ್ನ ಮಗಳು ವಿಜಯಲಕ್ಷ್ಮೀಯೊಂದಿಗೆ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಬಂದಿದ್ದು, ಚಿಕಿತ್ಸೆ ಮುಗಿಸಿ ವಾಪಸ್ಸು ಹೋಗಲು ಆಸ್ಪತ್ರೆಯ ಹೊರ ವಿಭಾಗದ ಬಳಿ ನಿಂತು ಕೊಂಡಿದ್ದರು.

ಆಗ ಅಲ್ಲಿಗೆ ಬಂದ ಅಪರಿಚಿತ ವ್ಯಕ್ತಿ ಚಿಕಿತ್ಸೆಯ ಅರ್ಧದಷ್ಟು ಖರ್ಚನ್ನು ವಾಪಸ್ಸು ನೀಡುವುದಾಗಿ ಭರವಸೆ ನೀಡಿ, ಅವರಲ್ಲಿದ್ದ ಬಿಲ್‌ಗಳನ್ನು ಪಡೆದು ಕೊಂಡು ಜೆರಾಕ್ಸ್ ಮಾಡಿಸಿಕೊಂಡು ವಾಪಸ್ಸು ಬಂದನು. ‘ನೀವು ಚಿನ್ನಾಭರಣ ಗಳನ್ನು ಹಾಕಿಕೊಂಡು ಹೋದರೆ ಆಸ್ಪತ್ರೆಯವರು ಬಿಲ್ಲು ಕಡಿಮೆ ಮಾಡು ವುದಿಲ್ಲ, ಅದನ್ನು ತೆಗೆದು ಕೊಡಿ, ಬ್ಯಾಗ್‌ನಲ್ಲಿ ಇಡುವ’ ಎಂದು ಹೇಳಿದನು.

ಅದನ್ನು ನಂಬಿದ ಶಾರದಮ್ಮ ತನ್ನಲ್ಲಿದ್ದ ಚಿನ್ನದ ಸರವನ್ನು ಆತನ ಕೈಗೆ ಕೊಟ್ಟಿದ್ದು, ಆತ ಅದನ್ನು ಪೇಪರ್‌ನಲ್ಲಿ ಕಟ್ಟಿ ಅವನೇ ತಂದಿದ್ದ ಬ್ಯಾಗಿಗೆ ಹಾಕಿ ನಂತರ ಆ ಬ್ಯಾಗನ್ನು ಶಾರದಮ್ಮಗೆ ಕೊಟ್ಟು ಹೊರಟು ಹೋಗಿದ್ದನು. ಬಳಿಕ ಶಾರದಮ್ಮ ರವರು ಬ್ಯಾಗ್‌ನ್ನು ಪರಿಶೀಲಿಸಿದಾಗ ಚಿನ್ನದ ಸರ ಕಳವಾಗಿರುವುದು ತಿಳಿದು ಬಂತು. ಕಳವಾದ 30 ಗ್ರಾಂ ತೂಕದ ಚಿನ್ನದ ಸರ ಮೌಲ್ಯ ಸುಮಾರು 70 ಸಾವಿರ ರೂ. ಎಂದು ಅಂದಾಜಿಸಲಾಗಿದೆ.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News