ಮಣ್ಣು ಪಾಲಾಗುತ್ತಿರುವ ಕಾವಳಮೂಡೂರು ಗ್ರಾಮದ ಶುದ್ಧ ನೀರಿನ ಘಟಕ !

Update: 2019-06-20 17:19 GMT

ಬಂಟ್ವಾಳ, ಜೂ. 20: ಕಾವಳಮೂಡೂರು ಗ್ರಾಮದ ಕೈಲಾರ್ ರಸ್ತೆ ಬದಿಯಲ್ಲಿರುವ ಶುದ್ಧ ನೀರಿನ ಘಟಕವು ರಸ್ತೆ ಕಾಮಗಾರಿಯಿಂದಾಗಿ ಮಣ್ಣು ಪಾಲಾಗುತ್ತಿದ್ದು, ಈ ರೀತಿಯ ಅವ್ಯವಸ್ಥೆಯಿಂದ ಸಾರ್ವಜನಿಕರ ಹಣ ಪೋಲಾಗುತ್ತಿವೆ ಎಂದು ಸ್ಥಳೀಯರು ದೂರಿದ್ದಾರೆ.

ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಯೋಜನೆ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‍ರಾಜ್ ಇಲಾಖೆಯು ಕೆಆರ್‍ಐಡಿಎಲ್ ಮಂಗಳೂರು ಸಂಸ್ಥೆಯಿಂದ ಸುಮಾರು 8.8 ಲಕ್ಷ ರೂ. ವೆಚ್ಚದಲ್ಲಿ ಈ ಶುದ್ಧ ನೀರಿನ ಘಟಕವನ್ನು ನಿರ್ಮಾಣ ಮಾಡಲಾಗಿದೆ. ಆದರೆ, ಇಲ್ಲಿನ ಬಿ.ಸಿ.ರೋಡ್-ಪುಂಜಾಲಕಟ್ಟೆ ರಸ್ತೆ ಕಾಮಗಾರಿ ನಡೆಯುತ್ತಿದ್ದು, ರಸ್ತೆಯ ಅಗಲೀಕರಣದ ವೇಳೆ ಘಟಕದ ಪಕ್ಕದಲ್ಲಿಯೇ ಮಣ್ಣು ಹಾಕಲಾಗಿದ್ದು, ಇದೀಗ ಘಟಕವು ಮಣ್ಣಿನಡಿಗೆ ಸಿಲುಕಿಕೊಂಡಿದೆ.

ಹೆದ್ದಾರಿಯ ಕೆಲಸ ಪ್ರಾರಂಭ ಮಾಡುವ ಮೊದಲೇ ಶುದ್ಧ ನೀರಿನ ಘಟಕವನ್ನು ಸ್ಥಳಾಂತರಿಸಲು ಪಂಚಾಯತ್‍ಗೆ ತಿಳಿಸಲಾಗಿದೆ ಎಂದು ಹೆದ್ದಾರಿ ಇಲಾಖೆ ಹೇಳುತ್ತಿದ್ದರೆ, ಕೆಆರ್‍ಡಿಐಎಲ್ ಸಂಸ್ಥೆ ನೀರಿನ ಘಟಕವನ್ನು ಪಂಚಾಯತ್‍ಗೆ ಹಸ್ತಾಂತರ ಮಾಡಿಲ್ಲ ಎಂದು ಪಂಚಾಯತ್ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಗಳು ಸಾರ್ವಜನಿಕ ವಲಯಗಳಲ್ಲಿ ಕೇಳಿ ಬರುತ್ತಿವೆ.

ಸಾರ್ವಜನಿಕರು ಪ್ರಯೋಜನೆ ಪಡೆಯುತ್ತಿರುವ ಎಲ್ಲ ಯೋಜನೆಗಳು ಪಂಚಾಯತ್ ವ್ಯಾಪ್ತಿಯಲ್ಲಿ ನಿರ್ಮಾಣವಾಗಿದೆ. ಆದರೆ, ಯಾರಿಗೂ ಅದರಿಂದ ಪ್ರಾಯೋಜನವಾಗಿಲ್ಲ. ಕೇಳಿದರೆ ತಾಂತ್ರಿಕ ತೊಂದರೆ ಎನ್ನುತ್ತಾರೆ. ಹೀಗೆ ಪ್ರತೀ ಪಂಚಾಯತ್‍ನಲ್ಲಿ ನಿರ್ಮಾಣವಾದ ನೀರಿನ ಘಟಕ್ಕೆ ಲಕ್ಷಗಟ್ಟಲೆ ಹಣ ದುಪಯೋಗವಾಗುತ್ತಿದೆ. ಈ ನಿಟ್ಟಿನಲ್ಲಿ ಎಲ್ಲ ಶುದ್ಧ ನೀರಿನ ಘಟಕಗಳಿಗೆ ಮರು ಜೀವ ನೀಡಿ ಜನರಿಗೆ ಅದರ ಪ್ರಯೋಜನ ಬರುವಂತಾಗಬೇಕು. ಈ ಬಗ್ಗೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಸೂಕ್ತಕ್ರಮ ಕೈಗೊಳ್ಳುವಂತೆ ವಿನೋದ್ ಕುಮಾರ್ ತುಂಬೆ ಅವರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News