ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಹೆಸರು ನೋಂದಾಯಿಸಿ: ಭಟ್ಕಳ ತಹಶೀಲ್ದಾರ್

Update: 2019-06-20 17:30 GMT

ಭಟ್ಕಳ:  ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ, ಪಿಎಮ್ ಕಿಸಾನ್ ಯೋಜನೆಯ ಲಾಭ ಪಡೆದುಕೊಳ್ಳಲು ತಾಲೂಕಿನ ರೈತರು ತಡಮಾಡದೇ ಹೆಸರನ್ನು ನೋಂದಾವಣಿ ಮಾಡಿಕೊಳ್ಳುವಂತೆ ತಹಶೀಲ್ದಾರ್ ವಿ.ಎನ್.ಬಾಡ್ಕರ್ ತಿಳಿಸಿದ್ದಾರೆ.

ಅವರು ತಹಶೀಲ್ದಾರ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಈ ಯೋಜನೆಯಡಿ ಎಲ್ಲ ರೈತರಿಗೂ ಪ್ರತಿ ಕುಟುಂಬಕ್ಕೆ ಒಂದು ವರ್ಷಕ್ಕೆ ರೂ. 6000ಗಳನ್ನು ಪ್ರತಿ 4 ತಿಂಗಳಿಗೊಮ್ಮೆ ಒಟ್ಟೂ 3 ಕಂತುಗಳಲ್ಲಿ ನೀಡಲಾಗುತ್ತದೆ. ಈ ಯೋಜನೆಯ ಲಾಭ ಪಡೆಯಲು ರೈತರು ಭರ್ತಿ ಮಾಡಿದ ಅರ್ಜಿ ಅಜಿ ಫಾರ್ಮ, ತಮ್ಮ ಕೃಷಿ ಭೂಮಿಯ ಪಹಣಿ ಪತ್ರಿಕೆ, ಬ್ಯಾಂಕ್ ಪಾಸ್‍ಬುಕ್ (ಬ್ಯಾಂಕ್ ಐಎಫ್‍ಎಸ್‍ಸಿ ಕೋಡ್ ಕಡ್ಡಾಯ) ಆಧಾರ್ ಕಾರ್ಡ ಮತ್ತು ತಮ್ಮ ಭಾವಚಿತ್ರದ ಪ್ರತಿಗಳೊಂದಿಗೆ ಸಮೀಪದ ಬಾಪೂಜಿ ಸೇವಾ ಕೇಂದ್ರ ಅಥವಾ ರೈತ ಸಂಪರ್ಕ ಕೇಂದ್ರ ಅಥವಾ ಅಟಲ್ ಜಿ ಜನಸ್ನೇಹಿ ಕೇಂದ್ರಗಳಲ್ಲಿ ತಮ್ಮ ಹೆಸರುಗಳನ್ನು ನೋಂದಾವಣಿ ಮಾಡಿಕೊಳ್ಳಬೇಕು.

ಆದಾಯ ತೆರಿಗೆ ಪಾವತಿದಾರರು ಮತ್ತು ಜಿಲ್ಲಾ ಪಂಚಾಯತ್ ಅಧ್ಯಕ್ಷರಿಗಿಂತ ಮೇಲ್ಪಟ್ಟ ಜನಪ್ರತಿನಿಧಿಗಳಿಗೆ ಈ ಯೋಜನೆಯ ಫಲಾನುಭವಿ ಯಾಗಲು ಅವಕಾಶ ಇಲ್ಲ. ಪಹಣಿ ಪತ್ರಿಕೆಯಲ್ಲಿ ಇರುವ ಜಮೀನಿನ ಹಕ್ಕು ಹೊಂದಿರುವ ಎಲ್ಲ ರೈತರೂ ಫಲಾನುಭವಿಗಳಾಗಿರುತ್ತಾರೆ. ಯೋಜನೆಯ ಬಗ್ಗೆ ಈಗಾಗಲೇ ರೈತ ಸಂಘಗಳು ಹಾಗೂ ಮಾಧ್ಯಮ ಪ್ರಕಟಣೆಯ ಮೂಲಕ ವ್ಯಾಪಕ ಪ್ರಚಾರ ನೀಡಲಾಗಿದೆ. ಜೂನ್ 30ರ ನಂತರ ಹೆಸರು ನೋಂದಾವಣಿಗೆ ಅವಕಾಶ ಇಲ್ಲ. ಇದನ್ನು ರೈತರು ಗಮನದಲ್ಲಿಟ್ಟುಕೊಳ್ಳಬೇಕು ಎಂದರು. ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ, ಸಹಾಯಕ ಕೃಷಿ ಅಧಿಕಾರಿ ಜಿ.ಎನ್.ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News