ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ: ದ.ಕ.ದಲ್ಲಿ 2.30 ಲಕ್ಷ ರೈತರು ಅರ್ಹರು- ಜಿಲ್ಲಾಧಿಕಾರಿ

Update: 2019-06-20 17:33 GMT

ಮಂಗಳೂರು, ಜೂ.20: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ- ಕಿಸಾನ್) ಯೋಜನೆಯಡಿ ದ.ಕ. ಜಿಲ್ಲೆಯಲ್ಲಿ 2.30 ಲಕ್ಷ ರೈತರು ಅರ್ಹರಾಗಿದ್ದು, ನೋಂದಣಿ ಮಾಡುವ ಮೂಲಕ ಪ್ರಯೋಜನ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಕರೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಪ್ರತಿ ನಾಲ್ಕು ತಿಂಗಳಿಗೊಮ್ಮೆ ಒಟ್ಟು ಮೂರು ಸಮಾನ ಕಂತುಗಳಲ್ಲಿ ವಾರ್ಷಿಕ 6000 ರೂ. ಈ ನಿಧಿಯಡಿ ರೈತರ ಖಾತೆ ಜಮಾ ಆಗಲಿದೆ ಎಂದು ಹೇಳಿದರು.

ರೈತರು ತಮ್ಮ ಆಧಾರ್, ಪಹಣಿ ವಿವರಗಳು ಹಾಗೂ ಬ್ಯಂಕ್ ಖಾತೆಯ ವಿವರಗಳೊಂದಿಗೆ ಗ್ರಾಮಕರಣಿಕರ ಕಚೇರಿ (ವಿಎ),ತಾಲೂಕು ಕಚೇರಿ, ಗ್ರಾಮ ಪಂಚಾಯತ್ ಕಚೇರಿಯ ಬಾಪೂಜಿ ಸೇವಾ ಕೇಂದ್ರಗಳು, ರೈತ ಸಂಪರ್ಕ ಕೇಂದ್ರ ಅಥವಾ ಅಟಲ್ ಜಿ ಜನಸ್ನೇಹಿ ಕೇಂದ್ರಗಳಲ್ಲಿ ಸ್ವಯಂ ಘೋಷಣಾ ಪತ್ರದೊಂದಿಗೆ ಜೂನ್ 25ರೊಳಗೆ ನೋಂದಾಯಿಸಬಹುದು. ನಿವೃತ್ತ/ ಹಾಲಿ ಸೇವೆಯಲ್ಲಿರುವ ಸರಕಾರಿ ಅಧಿಕಾರಿ ನೌಕಕರು (ಗ್ರೂಪ್ ಡಿ ಹೊರತುಪಡಿಸಿ), 10,000 ರೂ.ಗಿಂತ ಹೆಚ್ಚಿನ ಮೊತ್ತ ಪಡೆಯುತ್ತಿರುವ ಪಿಂಚಣಿದಾರರು, ಆದಾಯ ತೆರಿಗೆ ಪಾವತಿದಾರರು, ವೃತ್ತಿಪರರು, ಮಾಜಿ ಮತ್ತು ಹಾಲಿ ಸಾಂವಿಧಾನಿಕ ಹುದ್ದೆ ಹೊಂದಿರುವವರು ಈ ಯೋಜನೆಗೆ ಅರ್ಹರಾಗಿರುವುದಿಲ್ಲ ಎಂದು ಅವರು ಹೇಳಿದರು.

ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ: ಜೂ. 30 ಅಂತಿಮ ದಿನ

ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ದ.ಕ. ಜಿಲ್ಲೆಯಲ್ಲಿ ಅಡಿಕೆ ಮತ್ತು ಕರಿಮೆಣಸು ಬೆಳೆಗಳನ್ನು ಮುಂಗಾರು ಹಂಗಾಮಿಗೆ ಸೇರ್ಪಡೆಗೊಳಿಸಲಾಗಿದೆ. ಈ ಯೋಜನೆಯು ಕೇಂದ್ರ ಸರಕಾರ ನೀಡಿರುವ ಮಾನದಂಡಗಳ ಆಧಾರದಲ್ಲಿ ಹವಾಮಾನ ವೈಪರೀತ್ಯದಿಂದ ಬೆಳೆ ನಷ್ಟ ಉಂಟಾದಲ್ಲಿ ವಿಮಾ ಪರಿಹಾರ ಪಡೆಯುವ ಅವಕಾಶವನ್ನು ಹೊಂದಿದ್ದು, 2019ನೆ ಸಾಲಿನ ಮುಂಗಾರು ಹಂಗಾಮಿಗೆ ಸಂಬಂಧಿಸಿ ವಿಮಾ ಕಂತು ಪಾವತಿಸಲು ಜೂನ್ 30 ಕೊನೆಯ ದಿನವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಇದು ಉತ್ತಮ ವಿಮಾ ಯೋಜನೆಯಾಗಿದ್ದು, ಬೆಳೆಗಾರರು ಇದರ ಪ್ರಯೋಜನ ಪಡೆಯಬೇಕು ಎಂದು ಹೇಳಿದ ಅವರು, ಅಡಿಕೆಗೆ ಹೆಕ್ಟೇರ್‌ಗೆ ವಿಮಾ ಮೊತ್ತ 128000 ರೂ.ಗಳಾಗಿದ್ದು, ವಿಮಾ ಕಂತು 38400 ರೂ. ಆಗಿರುತ್ತದೆ. ಆದರೆ ರೈತರು 6400 ರೂ.ಗಳನ್ನು ಮಾತ್ರವೇ ಪಾವತಿಸಬೇಕಾಗಿದ್ದು, ಉಳಿದ ವಿಮಾ ಕಂತನ್ನು ಸರಕಾರ ಭರಿಸಲಿದೆ. ಕರಿಮೆಣಸು ಹೆಕ್ಟೇರಿಗೆ ವಿಮಾ ಮೊತ್ತ 47,000 ರೂ.ಗಳಾಗಿದ್ದು, 11167 ವಿಮಾ ಕಂತಾಗಿರುತ್ತದೆ. ರೈತರು ಪಾವತಿಸಬೇಕಾದ ಕಂತಿನ ಹಣ 2350 ರೂ.ಗಳು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಭತ್ತದ ಬೆಳೆಗೆ ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆಯಡಿಯೂ ಅರ್ಹ ರೈತರು ಪ್ರಸಕ್ತ ಸಾಲಿನ ವಿಮಾ ಕಂತು ಪಾವತಿಸಲು ಆಗಸ್ಟ್ 14ರವರೆಗೆ ಅವಕಾಶವಿದೆ ಎಂದು ಜಿಲಾ್ಲಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News