ಅಂಚೆ ಇಲಾಖೆಯಿಂದ 4.5 ಲಕ್ಷ ವಿದ್ಯಾರ್ಥಿ ಖಾತೆ: ಡಾ. ಚಾರ್ಲ್ಸ್ ಲೋಬೋ

Update: 2019-06-20 17:36 GMT

ಮಂಗಳೂರು, ಜೂ.20: ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ನೀಡಲು ಅಂಚೆ ಕಚೇರಿಗಳಲ್ಲಿ ಉಳಿತಾಯ ಖಾತೆ ತೆರೆಯುವಂತೆ ಸರ್ಕಾರ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಪ್ರಕ್ರಿಯೆ ಆರಂಭವಾಗಿದೆ. ಜೂನ್ ಅಂತ್ಯದ ವೇಳೆಗೆ 4.5 ಲಕ್ಷ ವಿದ್ಯಾರ್ಥಿಗಳ ಖಾತೆಗಳನ್ನು ತೆರೆಯಲಾ ಗುವುದು ಎಂದು ಅಂಚೆ ಇಲಾಖೆಯ ಕರ್ನಾಟಕ ವಲಯ ಪೋಸ್ಟ್ ಮಾಸ್ಟರ್ ಜನಲ್ ಡಾ.ಚಾರ್ಲ್ಸ್ ಲೋಬೊ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಈ ಬಗ್ಗೆ ಮಾಹಿತಿ ನೀಡಿದ ಅವರು, ಪ್ರಸ್ತುತ ಅಂಚೆ ಖಾತೆಗಳ ಸಂಖ್ಯೆ ಏರಿಕೆಯಾಗುತ್ತಿದೆ. ಇಂಡಿಯಾ ಪೋಸ್ಟ್ ಮೇಮೆಂಟ್ ಬ್ಯಾಂಕ್ ಆರಂಭವಾದ ಬಳಿಕ ರಾಜ್ಯದಲ್ಲಿ 3 ಲಕ್ಷಕ್ಕೂ ಅಧಿಕ ಮಂದಿ ಉಳಿತಾಯ ಖಾತೆಗಳನ್ನು ತೆರೆದಿದ್ದಾರೆ. ಇದೀಗ ವಿದ್ಯಾರ್ಥಿಗಳ ಅಂಚೆ ಖಾತೆಗಳನ್ನು ತೆರೆಯುತ್ತಿರುವುದು ಇಲಾಖೆಯ ಲಾಭದ ದೃಷ್ಟಿಕೋನದಿಂದ ಮುಂದಿನ ದಿನಗಳಲ್ಲಿ ಪರಿಣಾಮಕಾರಿಯಾಗಲಿದೆ ಎಂದವರು ಹೇಳಿದರು.

ಈ ಹಿಂದೆ ಅಂಚೆ ಕಚೇರಿಯಿಂದ ನೀಡಲಾಗುತ್ತಿದ್ದ ಎಟಿಎಂ ಕಾರ್ಡ್‌ಗಳನ್ನು ಕೇವಲ ಅಂಚೆ ಎಟಿಎಂಗಳಲ್ಲಿ ಮಾತ್ರ ಬಳಕೆ ಮಾಡಬಹುದಿತ್ತು. ಇದೀಗ ಯಾವ ಬ್ಯಾಂಕ್ ಎಟಿಎಂ ಕೇಂದ್ರಗಳಿಂದಲೂ ಹಣ ಪಡೆಯಬಹುದು ಎಂದ ಡಾ.ಚಾರ್ಲ್ಸ್, ಆರ್‌ಬಿಐ ಸೂಚನೆಯಂತೆ ಈಗ ಎಟಿಎಂ ಕಾರ್ಡ್ ನೀಡುವುದನ್ನು ಸ್ಥಗಿತಗೊಳಿಸಲಾಗಿದ್ದು, ಹೊಸ ಚಿಪ್‌ಬೇಸ್‌ಡ್ ಕಾರ್ಡ್ ನೀಡಲು ಕ್ರಮ ವಹಿಸಲಾಗಿದೆ. ಹೊಸ ಕಾರ್ಡ್‌ಗಳ ತಯಾರಿ ಕೆಯೂ ಆರಂಭವಾಗಿದೆ. ಶೀಘ್ರದಲ್ಲೇ ಅವುಗಳನ್ನು ಗ್ರಾಹಕರಿಗೆ ವಿತರಿಸಲಾಗುವುದು. ರಾಜ್ಯದಲ್ಲಿ ಪ್ರಸ್ತುತ 3 ಲಕ್ಷ ಎಟಿಎಂ ಕಾರ್ಡ್‌ಗಳನ್ನು ಹೊಂದಿದ ಗ್ರಾಹಕರಿದ್ದಾರೆ ಎಂದರು.

ಪೋಸ್ಟೇಜ್ ಡೆಪಾಸಿಟ್: ಗ್ರಾಹಕರು ಅಂಚೆ ಕಚೇರಿಯಲ್ಲಿ 200 ರು.ಗಳ ಪೋಸ್ಟೇಜ್ ಡೆಪಾಸಿಟ್ ಖಾತೆಯನ್ನು ತೆರೆದು ಅಂಚೆ ಚೀಟಿ, ಲಕೋಟೆ, ಮಿನಿಯೇಚರ್ ಹಾಳೆ ಇತ್ಯಾದಿಗಳನ್ನು ಪಡೆದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಖಾತೆ ತೆರೆಯುವಾಗ ಗ್ರಾಹಕರು ಯಾವ ವಸ್ತು ಬೇಕು ಎನ್ನುವುದನ್ನು ನಮೂದಿಸಿದರೆ ಅದನ್ನು ಅವರ ವಿಳಾಸಕ್ಕೆ ಕಳುಹಿಸಲಾಗುತ್ತದೆ. ಅದರ ಮೊತ್ತವನ್ನು ಖಾತೆಯಲ್ಲಿರುವ 200 ರು.ನಿಂದ ಕಡಿತಗೊಳಿಸಲಾಗುತ್ತದೆ. ಇನ್ನೂ ಬೇಕಿದ್ದರೆ ಮತ್ತೆ ಖಾತೆಗೆ ಮೊತ್ತವನ್ನು ಡೆಪಾಸಿಟ್ ಮಾಡಬಹುದು ಎಂದು ಅವರು ಹೇಳಿದರು.

ಅಂಚೆ ಚೀಟಿ ಸಂಗ್ರಹ ವಿಶ್ವಾದ್ಯಂತ ಮಿಲಿಯನ್ ಡಾಲರ್ ವ್ಯವಹಾರವಾಗಿ ರೂಪುಗೊಂಡಿದೆ. ಆದರೆ ಭಾರತದಲ್ಲಿ ಅಷ್ಟು ದೊಡ್ಡ ಮಟ್ಟದಲ್ಲಿ ನಡೆಯುತ್ತಿಲ್ಲ. ಅಂಚೆಚೀಟಿಗಳು ಎಲ್ಲ ದೇಶಗಳ ಸಾಂಸ್ಕೃತಿಕ ರಾಯಭಾರಿಯಂತೆ ಕೆಲಸ ಮಾಡುತ್ತವೆ. ಭಾರತದ ಸ್ಟಾಂಪ್‌ಗಳನ್ನು ನೋಡಿ ವಿದೇಶಿಗರು ಕೂಡ ಇಲ್ಲಿನ ಸಂಸ್ಕೃತಿಯನ್ನು ತಿಳಿದುಕೊಳ್ಳುತ್ತಾರೆ ಎಂದರು.

ಅಂಚೆ ಇಲಾಖೆಯ ದಕ್ಷಿಣ ವಲಯ ಪೋಸ್ಟ್ ಮಾಸ್ಟರ್ ಜನರಲ್ ರಾಜೇಂದ್ರ ಕುಮಾರ್, ಮಂಗಳೂರು ಹಿರಿಯ ಅಂಚೆ ಅಧೀಕ್ಷಕ ಶ್ರೀಹರ್ಷ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News