×
Ad

ಯೋಗದ ಮೂಲ ರೂಪ ಬದಲಾಗದಿರಲಿ: ದಿನಕರ ಬಾಬು

Update: 2019-06-21 20:19 IST

 ಉಡುಪಿ, ಜೂ.21:ಯೋಗಕ್ಕೆ ಪ್ರಸ್ತುತ ವಿಶ್ವದಾದ್ಯಂತ ಮನ್ನಣೆ ದೊರೆತಿದ್ದು, ರಾಜ್ಯದಶಾಲೆಗಳಲ್ಲಿ ಸಹ ದೈಹಿಕ ಶಿಕ್ಷಣದಲ್ಲಿ ಯೋಗದ ಅಭ್ಯಾಸ ನಡೆಯುತ್ತಿದೆ. ಆದರೆ ಯೋಗದ ಮೂಲ ಸ್ವರೂಪ ಬದಲಾಗದಂತೆ ಎಲ್ಲೆಡೆ ಯೋಗದ ಆಚರಣೆ ನಡೆಯಬೇಕು ಎಂದು ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು ಹೇಳಿದ್ದಾರೆ.

ಶುಕ್ರವಾರ ಆಯುಷ್ ಇಲಾಖೆ ಬೆಂಗಳೂರು, ಜಿಲ್ಲಾಡಳಿತ, ಜಿಪಂ, ಆಯುಷ್ ಇಲಾಖೆ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಡಾ.ಜಿ.ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಇವರ ಸಹಬಾಗಿತ್ವದಲ್ಲಿ ಅಜ್ಜರಕಾಡು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಅಂತಾ ರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಇಡೀ ವಿಶ್ವ ಇಂದು ಯೋಗದ ಮಹತ್ವ ಅರಿಯುತ್ತಿದೆ. ಯೋಗದ ಮೂಲ ಸ್ವರೂಪ ಉಳಿಸಿಕೊಂಡು, ಯೋಗ ಅಭ್ಯಾಸ ನಡೆಸಬೇಕು. ಯೋಗದಿಂದ ಉದ್ಯೋಗ ಸೃಷ್ಟಿ ಸಹ ಆಗುತ್ತಿದೆ. ಅಮೇರಿಕದಲ್ಲಿ 2014ರಲ್ಲಿ 6.1 ಬಿಲಿಯನ್ ಡಾಲರ್ ಯೋಗದಿಂದ ವಹಿವಾಟು ನಡೆದಿದ್ದು, 2020ರ ವೇಳೆಗೆ ಇದು 11ಬಿಲಿಯನ್ ಡಾಲರ್ ತಲುಪುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.

ಉಡುಪಿ ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಜಿಪಂ ಸದಸ್ಯೆ ಶಿಲ್ಪಾ ಸುವರ್ಣ, ಡಾ.ಜಿ.ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶುಪಾಲ ಡಾ.ರಾಜೇಂದ್ರ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಮಧುಕರ್, ಜಿಲ್ಲಾ ಆಯುರ್ವೇದ ಸಂಘದ ಅಧ್ಯಕ್ಷ ಡಾ. ನಾರಾಯಣ ಅಂಚನ್, ಸಂಪನ್ಮೂಲ ವ್ಯಕ್ತಿ ಜೋತ್ನ್ಸಾ ಉಪಸ್ಥಿತರಿದ್ದರು.

ಜಿಲ್ಲಾ ಆಯುಷ್ ಇಲಾಖೆಯ ಯೋಗ ಶಿಕ್ಷಕಿ ಲಲಿತಾ ಕೆದ್ಲಾಯ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಆಯುಷ್ ಅಧಿಕಾರಿ ಡಾ. ಅಲಕಾನಂದ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News