ಆರೋಗ್ಯ ಸಮತೋಲನಕ್ಕೆ ಯೋಗ ಸಾಧನ:ಡಾ.ಬಲ್ಲಾಳ್
ಉಡುಪಿ, ಜೂ.21:ಭಾರತೀಯ ಸಂಸ್ಕೃತಿ ಆರೋಗ್ಯಕ್ಕೆ ಹಲವಾರು ಕೊಡುಗೆ ಗಳನ್ನು ನೀಡಿದೆ. ಆರೋಗ್ಯವನ್ನು ಸಮತೋಲನದಲ್ಲಿಡಲು ಯೋಗ ಬಹು ಮುಖ್ಯ ಸಾಧನ ಎಂದು ಅಂಬಲಪಾಡಿ ಶ್ರೀಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನ ಮ್ಯಾನೇಜಿಂಗ್ ಟ್ರಸ್ಟಿ ಡಾ.ಎನ್.ಬಿ.ವಿಜಯ ಬಲ್ಲಾಳ್ ಹೇಳಿದ್ದಾರೆ.
ಶುಕ್ರವಾರ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕದ ವತಿಯಿಂದ ರೆಡ್‌ಕ್ರಾಸ್ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನುಉದ್ಘಾಟಿಸಿ ಅವರು ಮಾತನಾಡಿದರು.
ಆರೋಗ್ಯವಿಲ್ಲ ಎಂದರೆ ಜೀವನದಲ್ಲಿ ಏನೂ ಮಾಡಲು ಸಾಧ್ಯವಿಲ್ಲ. ಯೋಗದ ಪ್ರಾಮುಖ್ಯತೆಯನ್ನು ಅರಿತು ಯೋಗವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಯೋಗ ನಿತ್ಯ ಜೀವನದ ಭಾಗವಾಗಿರಬೇಕು ಎಂದು ಎಂದರು.
ಕಾರ್ಯಕ್ರಮದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಆಡಳಿತ ಸಮಿತಿ ಸದಸ್ಯ ಬಸ್ರೂರು ರಾಜೀವ್ ಶೆಟ್ಟಿ, ಯೋಗ ಶಿಕ್ಷಕಿ ರಾಧಿಕಾ ರವಿರಾಜ್ ಉಪಸ್ಥಿತರಿದ್ದರು. ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಉಡುಪಿ ಜಿಲ್ಲಾಘಟಕದ ಸಭಾಪತಿ ಡಾ.ಉಮೇಶ್ ಪ್ರಭು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಉಡುಪಿ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿದರು. ಯುವ ರೆಡ್‌ಕ್ರಾಸ್ ಘಟಕದ ಅಧ್ಯಕ್ಷ ಜಯರಾಮ ಆಚಾರ್ಯ ಸಾಲಿಗ್ರಾಮ ನಿರೂಪಿಸಿದರು. ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಉಡುಪಿ ಜಿಲ್ಲಾ ಘಟಕದ ಗೌರವ ಖಜಾಂಚಿ ಟಿ ಚಂದ್ರಶೇಖರ್ ವಂದಿಸಿದರು.