ಉಪ್ಪೂರು ಸಮೀಪ ಟಿಪ್ಪರ್ ಪಲ್ಟಿ: ಚಾಲಕ ಸಹಿತ ಇಬ್ಬರು ಮೃತ್ಯು

Update: 2019-06-21 16:32 GMT

ಬ್ರಹ್ಮಾವರ, ಜೂ.21: ಟಿಪ್ಪರೊಂದು ಚಾಲಕ ನಿಯಂತ್ರಣ ತಪ್ಪಿ ರಸ್ತೆ ನಡುವಿನ ಡಿವೈಡರ್‌ಗೆ ಢಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಇಬ್ಬರು ಮೃತ ಪಟ್ಟು ಓರ್ವ ಗಂಭೀರವಾಗಿ ಗಾಯಗೊಂಡ ಘಟನೆ ಇಂದು ಬೆಳಗ್ಗೆ 7:25ರ ಸುಮಾರಿಗೆ ಉಪ್ಪೂರು ಗ್ರಾಮದ ಹೆರಾಯಿಬೆಟ್ಟು ಫಿಶರೀಸ್ ಶಾಲೆ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.

ಮೃತರನ್ನು ಟಿಪ್ಪರ್ ಚಾಲಕ ಬ್ರಹ್ಮಾವರ ನಿವಾಸಿ ನಾಗರಾಜ್ ಗಾಣಿಗ(30) ಹಾಗೂ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ನಾಗವಲ್ಲಿಯ ಕುಮಾರ್ ಆರ್.ಎಂ.(27) ಎಂದು ಗುರುತಿಸಲಾಗಿದೆ. ಮೃತ ಕುಮಾರ್‌ರ ದೊಡ್ಡಪ್ಪನ ಮಗ ರಾಘವೇಂದ್ರ ಎಸ್.ಎಂ.(19) ಗಂಭೀರವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬ್ರಹ್ಮಾವರದಿಂದ ಮಣಿಪಾಲದ ಸೈಟಿಗೆ ಕೆಲಸಕ್ಕಾಗಿ ಹೋಗುತ್ತಿದ್ದ ಟಿಪ್ಪರ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಮಧ್ಯದ ಡಿವೈಡರ್ ಮೇಲೆ ಹತ್ತಿ ತಡೆ ಕಂಬಕ್ಕೆ ಡಿಕ್ಕಿ ಹೊಡೆದು ರಸ್ತೆಗೆ ಪಲ್ಟಿಯಾಗಿ ಬಿತ್ತೆನ್ನಲಾಗಿದೆ. ಇದರ ಪರಿಣಾಮ ಗಂಭೀರ ವಾಗಿ ಗಾಯಗೊಂಡ ಚಾಲಕ ನಾಗರಾಜ್ ಸ್ಥಳದ್ಲೇ ಮೃತಪಟ್ಟರು.

ಮಧ್ಯದಲ್ಲಿ ಕುಳಿತ್ತಿದ್ದ ಕುಮಾರ್ ಟಿಪ್ಪರ್ ಅಡಿಯಲ್ಲಿ ಸಿಲುಕಿಕೊಂಡು ಕಿಬ್ಬೊಟ್ಟೆ, ಕಾಲುಗಳಿಗೆ ತೀವ್ರವಾದ ಗಾಯಗಳಾಗಿದ್ದವು. ಎಡಬದಿಯ ಬಾಗಿಲ ಬಳಿ ಕುಳಿತ್ತಿದ್ದ ರಾಘವೇಂದ್ರ ರಸ್ತೆಗೆ ಎಸೆಯಲ್ಪಟ್ಟು ಗಾಯಗೊಂಡರು. ಇವರಿಬ್ಬ ರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿಸಲಾಗಿದ್ದು, ಇವರಲ್ಲಿ ಕುಮಾರ್ ಬೆಳಗ್ಗೆ 8:40ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.

ಈ ಸಂದರ್ಭ ಪಕ್ಷದ ಯೋಗ ಕಾರ್ಯಕ್ರಮಕ್ಕೆ ಉಡುಪಿಗೆ ತೆರಳುತ್ತಿದ್ದ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಸ್ಥಳಕ್ಕೆ ಆಗಮಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಸಹಕಾರ ನೀಡಿದರು. ಅಪಘಾತದಿಂದ ರಸ್ತೆ ಸಂಚಾರದಲ್ಲಿ ಕೆಲ ಕಾಲ ವ್ಯತ್ಯಯ ಉಂಟಾಗಿತ್ತು.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News