ಕರ್ತವ್ಯನಿರತ ಪೊಲೀಸ್‌ಗೆ ಬೈಕ್ ಸವಾರ ಹಲ್ಲೆ: ಆರೋಪಿ ಸೆರೆ
ಮಂಗಳೂರು, ಜೂ.21: ತೊಕ್ಕೊಟ್ಟು ಬಸ್‌ನಿಲ್ದಾಣ ಸಮೀಪ ಕರ್ತವ್ಯನಿರತ ಮಂಗಳೂರು ದಕ್ಷಿಣ ಸಂಚಾರ ಠಾಣೆ ಪೊಲೀಸ್ ಪೇದೆಗೆ ಬೈಕ್ ಸವಾರ ಹಲ್ಲೆ ನಡೆಸಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕುತ್ತಾರ್ ಮದನಿನಗರ ನಿವಾಸಿ ಅಜರುದ್ದೀನ್ (32) ಬಂಧಿತ ಆರೋಪಿ.
ಘಟನೆ ವಿವರ: ಶುಕ್ರವಾರ ಬೆಳಗ್ಗೆ 9 ಗಂಟೆ ಸುಮಾರು ತೊಕ್ಕೊಟ್ಟು ಬಸ್ ನಿಲ್ದಾಣದ ಸಮೀಪದಲ್ಲಿ ಹೆಲ್ಮೆಟ್ ರಹಿತ ಬೈಕ್ ಸವಾರ ಅಜರುದ್ದೀನ್ ಡಬಲ್ ಸೀಟ್ ಹಾಕಿ ಬೈಕ್ ಸವಾರಿ ಮಾಡುತ್ತಿದ್ದ. ಕರ್ತವ್ಯನಿರತ ಪೊಲೀಸ್ ಪೇದೆ ಸಂಗನಗೌಡ ಎಂಬವರು ಆರೋಪಿಯ ಬೈಕ್‌ನ್ನು ನಿಲ್ಲಿಸಲು ಸೂಚಿಸಿದ್ದಾರೆ. ಆರೋಪಿಯು ಬೈಕ್‌ನ್ನು ನಿಲ್ಲಿಸದೇ ಮುಂದೆ ಸಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಬೈಕ್‌ನ್ನು ನಿಲ್ಲಿಸದೇ ವೇಗದಲ್ಲಿ ತೆರಳಿದ ಸವಾರನ ಪೋಟೊವನ್ನು ತೆಗೆಯಲು ಪೊಲೀಸರು ಮುಂದಾಗಿದ್ದಾರೆ. ಇದರಿಂದ ಆಕ್ರೋಶಗೊಂಡ ಬೈಕ್ ಸವಾರ, ಪೊಲೀಸ್ ಪೇದೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದ. ಆರೋಪಿಯ ಬೈಕ್‌ಗೆ ಯಾವುದೇ ನಂಬರ್ ಪ್ಲೇಟ್ ಅಳವಡಿಸಿರಲಿಲ್ಲ. ಜತೆಗೆ, ಬೈಕ್‌ನಲ್ಲಿ ಹೆಲ್ಮೆಟ್ ರಹಿತ ಇಬ್ಬರು ವ್ಯಕ್ತಿಗಳು ಸವಾರಿ ಮಾಡುತ್ತಿದ್ದರು ಎಂದು ದೂರಿನಲ್ಲಿ ವಿವರಿಸಲಾಗಿದೆ.
ಆರೋಪಿಯು ಪೊಲೀಸ್ ಪೇದೆಗೆ ಹಲ್ಲೆ ನಡೆಸಿ, ಸ್ಥಳದಿಂದ ಪರಾರಿಯಾದ ಬಳಿಕ ಆತನ ಫೋಟೊವನ್ನು ಎಲ್ಲ ಪೊಲೀಸ್ ಠಾಣೆಗಳಿಗೆ ರವಾನಿಸಲಾಗಿತ್ತು. ಆರೋಪಿಯನ್ನು ಬಂಧಿಸಲು ಎಲ್ಲ ಪೊಲೀಸರು ಅಲರ್ಟ್ ಆಗಿದ್ದರು. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಹೋಂಗಾರ್ಡ್ ಹಮೀದ್ ಪಾವಳ ಎಂಬವರು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಯುಕ್ತರಿಂದ ಪ್ರಶಂಸೆ: ಪೊಲೀಸ್ ಪೇದೆ ಮೇಲೆ ಹಲ್ಲೆ ನಡೆಸಿದ್ದ ಬೈಕ್ ಸವಾರ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ಹೋಂಗಾರ್ಡ್ ಹಮೀದ್ ಪಾವಳ ಅವರನ್ನು ಮಂಗಳೂರು ಪೊಲೀಸ್ ಕಮಿಷನರೇಟ್ ಆಯುಕ್ತ ಸಂದೀಪ್ ಪಾಟೀಲ್ ಅಭಿನಂದಿಸಿದ್ದಾರೆ.