ಕೊಡಕ್ಕಲ್ ರೈಲ್ವೆ ಸೇತುವೆ ಬಳಿ ಯುವಕನ ಕೊಲೆ ಪ್ರಕರಣ: ನಾಲ್ವರ ಖುಲಾಸೆ
ಮಂಗಳೂರು, ಜೂ.21: ನಗರದ ಹೊರವಲಯ ಅಳಪೆ ಗ್ರಾಮದ ಕೊಡಕ್ಕಲ್ ರೈಲ್ವೆ ಸೇತುವೆ ಬಳಿಯ ಪಾರ್ಕ್‌ನಲ್ಲಿ ನಡೆದ ನಿಸರ್ಗ ಎಂಬ ಯುವಕನ ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಖುಲಾಸೆಗೊಳಿಸಿದೆ.
ಪುನೀತ್, ಶರತ್, ನಿಖಿಲ್ ಮತ್ತು ಪ್ರಕಾಶ್ ಖುಲಾಸೆಗೊಂಡ ಆರೋಪಿಗಳು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶೆ ಶಾರದಾ ಬಿ. ಅವರು, ಪ್ರಕರಣದ ಮೇಲಿನ ಆರೋಪ ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂಬುದನ್ನು ಮನಗಂಡು ಆರೋಪಿಗಳನ್ನು ಬಿಡುಗಡೆ ಮಾಡಿದ್ದಾರೆ.
ಪ್ರಕರಣದ ಹಿನ್ನೆಲೆ: ವೀರನಗರ ನಿವಾಸಿ ಪುನೀತ್ ಎಂಬಾತನನ್ನು ನಿಸರ್ಗ ಎಂಬಾತ ಹೀಯಾಳಿಸಿದ್ದ ವಿಚಾರದಲ್ಲಿ ಮನಸ್ತಾಪವಿತ್ತು. 2017ರ ಸೆಪ್ಟಂಬರ್ 15ರಂದು ನಿಸರ್ಗ ಎಂಬಾತನನ್ನು ಕೊಲೆ ಮಾಡುವ ಉದ್ದೇಶದಿಂದ ಪುನೀತ್ ಸೇಹಿತರಾದ ಶರತ್, ನಿಖಿಲ್, ಪ್ರಕಾಶ್ ಜತೆ ಸೇರಿಕೊಂಡು ವೀರನಗರದ ಮೊಸರು ಕುಡಿಕೆ ಉತ್ಸವಕ್ಕೆ ಹೋದವರು ಹಿಂದಿರುಗಿ ಬರುತ್ತಿದ್ದರು. ಈ ವೇಳೆ ರೈಲ್ವೆ ಟ್ರಾಕ್‌ನಲ್ಲಿ ಕುಳಿತಿದ್ದ ನಿಸರ್ಗನನ್ನು ಸ್ನೇಹಿತರ ಜತೆ ಸೇರಿ ಚೂರಿಯಿಂದ ಇರಿದು ಪುನೀತ್ ಕೊಲೆ ಮಾಡಿದ್ದ ಎಂದು ಆರೋಪಿಸಲಾಗಿತ್ತು. ಈ ಸಂದರ್ಭ ನಿಸರ್ಗನ ಗೆಳೆಯರು ಆಸ್ಪತ್ರೆಗೆ ಕರೆದೊಯ್ದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಕೊಡಿಸಿದ್ದರೂ ಚೇತರಿಸಿಕೊಳ್ಳದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ.
ಈ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಆರೋಪಿಗಳ ಪರವಾಗಿ ನ್ಯಾಯವಾದಿ ವೇಣುಕುಮಾರ್ ಹಾಗೂ ಯುವರಾಜ್ ಕೆ. ಅಮೀನ್ ವಾದಿಸಿದ್ದರು.