ಮೆದುಳು ಜ್ವರದೊಂದಿಗೆ ಲಿಚಿ ಹಣ್ಣಿಗೆ ನಂಟು ಬೆಸೆಯುತ್ತಿರುವುದು ‘ಪಿತೂರಿ’: ರಾಜೀವ್ ಪ್ರತಾಪ್ ರೂಡಿ

Update: 2019-06-21 18:13 GMT

ಹೊಸದಿಲ್ಲಿ, ಜೂ. 20: ಕಳೆದ ಮೂರು ವಾರಗಳಲ್ಲಿ 130ಕ್ಕೂ ಅಧಿಕ ಮಕ್ಕಳ ಸಾವಿಗೆ ಕಾರಣವಾಗಿರುವ ಮೆದುಳು ಜ್ವರ ರಾಜ್ಯದಲ್ಲಿ ಹರಡಲು ಲಿಚಿ ಹಣ್ಣು ತಿಂದಿರುವುದೇ ಕಾರಣ ಎಂದು ಪ್ರತಿಪಾದಿಸುತ್ತಿರುವುದು ಸರಿಯಲ್ಲ ಎಂದು ಬಿಜೆಪಿಯ ಬಿಹಾರದ ಸಂಸದ ರಾಜೀವ್ ಪ್ರತಾಪ್ ರೂಡಿ ಹೇಳಿದ್ದಾರೆ.

 ಲಿಚಿ ಹಣ್ಣಿನ ಬ್ರಾಂಡ್ ಹೆಸರಿಗೆ ಹಾನಿ ಮಾಡುವ ಪಿತೂರಿ ಇದಾಗಿದೆ ಎಂದು ಹೇಳಿದ ಅವರು, ಮಕ್ಕಳ ಸಾವಿಗೆ ಕಾರಣವಾಗಿರುವ ಮೆದುಳು ಜ್ವರವನ್ನು ಲಿಚಿ ಹಣ್ಣಿನೊಂದಿಗೆ ನಂಟು ಬೆಸೆಯುವ ಬಗ್ಗೆ ರಾಜ್ಯ ಸರಕಾರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ಬಿಹಾರದ ಮುಝಪ್ಫರ್‌ಪುರದಲ್ಲಿ ಲಿಚಿ ಹಣ್ಣು ತಿಂದು ಮಕ್ಕಳು ಮೆದಳು ಜ್ವರಕ್ಕೆ ತುತ್ತಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇದು ಲಿಚಿ ಹಣ್ಣಿನ ಬ್ರಾಂಡ್ ಹೆಸರಿಗೆ ಹಾನಿ ಮಾಡುವ ಸಂಚು. ನಾವು ಬಾಲ್ಯದಿಂದಲೂ ಲಿಚಿ ಹಣ್ಣು ತಿನ್ನುತ್ತಿದ್ದೇವೆ. ಆದರೆ, ನಾವು ಎಂದೂ ಮೆದುಳು ಜ್ವರದಿಂದ ಬಳಲಲಿಲ್ಲ ಎಂದು ಸಂಸತ್ ಚರ್ಚೆಯ ಶೂನ್ಯ ವೇಳೆಯಲ್ಲಿ ರೂಡಿ ಹೇಳಿದರು.

ತಪ್ಪು ಮಾಹಿತಿಯಿಂದ ಜನರು ಲಿಚಿ ಹಣ್ಣು ತಿನ್ನುತ್ತಿಲ್ಲ. ಅದರ ಜ್ಯೂಸ್ ಕುಡಿಯುತ್ತಿಲ್ಲ ಎಂದು ರೂಡಿ ಹೇಳಿದರು. ರಾಜ್ಯದಲ್ಲಿ 30 ಹೆಕ್ಟೇರ್ ಪ್ರದೇಶದಲ್ಲಿ ಲಿಚಿ ಬೆಳೆಸಲಾಗುತ್ತಿದೆ. ಈ ತಪ್ಪು ಮಾಹಿತಿಯಿಂದ ಲಿಚಿ ಹಣ್ಣಿನ ರಫ್ತಿಗೆ ತೊಂದರೆ ಉಂಟಾಗಬಹುದು. ಲಿಚಿ ಕೃಷಿಯನ್ನು ನಾಶ ಮಾಡಬೇಡಿ. ಮೆದುಳು ಜ್ವರ ಹರಡಲು ಬೇರೆ ಕಾರಣ ಇರಬಹುದು ಎಂದು ಅವರು ಹೇಳಿದರು. ಲಿಚಿ ವಾಣಿಜ್ಯ ಬೆಳೆ. ಲಿಚಿ ಕೃಷಿಯನ್ನು ನಾಶ ಮಾಡಬೇಡಿ. ಹೆಚ್ಚು ಪ್ರಾಯೋಗಿಕವಾಗಿ ಆಲೋಚಿಸಿ ಹಾಗೂ ಮಕ್ಕಳ ಸಾವಿಗೆ ನಿಜವಾದ ಕಾರಣ ಪತ್ತೆ ಮಾಡಿ. ಸುಮಾರು 120 ಮಕ್ಕಳು ಸಾವನ್ನಪ್ಪಿದವು, ಇದಕ್ಕೆ ಲಿಚಿ ಹಣ್ಣು ಕಾರಣ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ ಎಂದು ರೂಡಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News