ಮುಂದಿನ ಫೆಬ್ರವರಿಯಲ್ಲಿ ಗುರುಪುರ ಫಲ್ಗುಣಿ ನದಿಯ ಸೇತುವೆ ಲೋಕಾರ್ಪಣೆ
ಮಂಗಳೂರು, ಜೂ.22: ಗುರುಪುರದಲ್ಲಿ ಫಲ್ಗುಣಿ ನದಿಗೆ 39.42 ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಹೊಸ ಸೇತುವೆಯ ಕಾಮಗಾರಿಯು ಪ್ರಗತಿಯಲ್ಲಿದ್ದು, ಮುಂದಿನ ಫೆಬ್ರವರಿ ಅಂತ್ಯದೊಳಗೆ ಲೋಕಾರ್ಪಣೆಗೊಂಡು ಸಾರ್ವಜನಿಕರ ಬಳಕೆಗೆ ಲಭ್ಯವಾಗಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.
ಗುರುಪುರದಲ್ಲಿ ಶನಿವಾರ ಹೊಸ ಸೇತುವೆ ಕಾಮಗಾರಿ ಪರಿಶೀಲನೆ ನಡೆಸಿದ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಹೊಸ ಸೇತುವೆ 175 ಮೀಟರ್ ಉದ್ದ, 16 ಮೀಟರ್ ಅಗಲವಿದೆ. ತಲಾ 27 ಮೀಟರ್‌ನ 7 ಅಂಕಣಗಳಿವೆ. 2.5 ಮೀ.ನ ಕಾಲುದಾರಿ ಒಳಗೊಂಡಿದೆ. ರಸ್ತೆ ಅಗಲ 11 ಮೀ. ಇದ್ದು, ಸೇತುವೆಯ ಎರಡೂ ಕಡೆ 500 ಮೀಟರ್‌ವರೆಗೆ ರಸ್ತೆ ವಿಸ್ತರಣೆಗೊಳ್ಳಲಿದೆ. ಇದರ ಕಾಮಗಾರಿಯ ಗುತ್ತಿಗೆಯನ್ನು ಮುಗ್ರೋಡಿ ಕನ್‌ಸ್ಟ್ರಕ್ಷನ್ ವಹಿಸಿಕೊಂಡಿದೆ. ಈ ವರ್ಷದ ಫೆ.21ರಂದು ಕಾಮಗಾರಿ ಆರಂಭಗೊಂಡಿದ್ದು, ಮುಂದಿನ ಫೆಬ್ರವರಿ ಅಂತ್ಯದೊಳಗೆ ಸೇತುವೆಯ ಲೋಕಾರ್ಪಣೆಗೊಳ್ಳಲಿದೆ ಎಂದು ನಳಿನ್ ತಿಳಿಸಿದರು.
ಕಾಮಗಾರಿಯು ಅತ್ಯಂತ ವೇಗದಲ್ಲಿ ನಡೆಯುತ್ತಿದೆ. ಇದೀಗ ಪಿಲ್ಲರ್ ಕೆಲಸ ಆಗಿದೆ. ಮಳೆಗಾಲದಲ್ಲಿ ಸ್ಲಾಬ್ ಅಳವಡಿಸುವ ಕಾರ್ಯ ನಡೆಯಲಿದೆ. ಕಾಮಗಾರಿ ಬಿಟ್ಟುಕೊಡಲು 2021ರ ಫೆ.20ರವರೆಗೆ ಕಾಲಾವಕಾಶವಿದೆ. ಆದರೆ ಹೊಸ ತಂತ್ರಜ್ಞಾನದಿಂದ ಕಾಮಗಾರಿಯು ವೇಗ ಪಡೆಯುತ್ತಿವೆ. ಹಾಗಾಗಿ 2020ರ ಫೆಬ್ರವರಿ ಅಂತ್ಯದಲ್ಲಿ ಕಾಮಗಾರಿ ಮುಗಿದು ಸಾರ್ವಜನಿಕರ ಬಳಕೆಗೆ ಲಭ್ಯವಾಗಲಿದೆ ಎಂದು ನಳಿನ್ ನುಡಿದರು.
ಮೂಲರಪಟ್ಣ ಸೇತುವೆ ಕುಸಿದಾಗ ಗುರುಪುರ ಸೇತುವೆಯ ಬಗ್ಗೆಯೂ ಕೆಲವರು ಸಂಶಯ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ದೆಹಲಿಯಿಂದ ತಜ್ಞರನ್ನು ಕರೆಸಿ ಸಾಮರ್ಥ್ಯ ಪರೀಕ್ಷೆ ನಡೆಸಲಾಗಿತ್ತು. ಹಳೆಯ ಸೇತುವೆಯನ್ನು ಇನ್ನೂ 10 ವರ್ಷಗಳ ಕಾಲ ಬಳಸಬಹುದು ಎಂದು ತಜ್ಞರು ತಿಳಿಸಿದ್ದರೂ ಕುಲಶೇಖರ-ಕಾರ್ಕಳ ಹೆದ್ದಾರಿ ಚತುಷ್ಪಥ ಹಿನ್ನೆಲೆಯಲ್ಲಿ ಹೊಸ ಸೇತುವೆ ಅವಶ್ಯಕತೆ ಇತ್ತು. ವಾಹನ ದಟ್ಟಣೆ ಹಿನ್ನೆಲೆಯಲ್ಲಿ ಬ್ರಿಟಿಷರ ಕಾಲದ ಗುರುಪುರ ಸೇತುವೆಯ ಬದಲಾಗಿ ಹೊಸ ಸೇತುವೆ ನಿರ್ಮಿಸುವಂತೆ ಸ್ಥಳೀಯ ಶಾಸಕ ಡಾ. ವೈ. ಭರತ್ ಶೆಟ್ಟಿ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿಗೆ ಸಲ್ಲಿಸಿದ ಮನವಿಯಂತೆ ಕಾಮಗಾರಿಗೆ ಹಣ ಬಿಡುಗಡೆಗೊಂಡು ಶೀಘ್ರ ಟೆಂಡರ್ ನಡೆಯಿತು. ಕಾಮಗಾರಿ ಉತ್ತಮವಾಗಿ ನಡೆಯುತ್ತಿದೆ ಎಂದು ನಳಿನ್ ವಿವರಿಸಿದರು.
*ಕುಲಶೇಖರ-ಕಾರ್ಕಳ ಹೆದ್ದಾರಿ ಚತುಷ್ಪಥಕ್ಕೆ ಕೇಂದ್ರ ಸರಕಾರದ ಒಪ್ಪಿಗೆ ದೊರೆತಿದೆ. ಸರ್ವೆ ಕಾರ್ಯವೂ ಪೂರ್ಣಗೊಂಡಿದೆ. ಭೂಸ್ವಾಧೀನ ಪ್ರಕ್ರಿಯೆ ಮುಗಿದೊಡನೆ ಟೆಂಡರ್ ಆಗಲಿದೆ. 35 ಕಿ.ಮೀ. ಉದ್ದದ ರಸ್ತೆ 45 ಮೀ. ಅಗಲದಲ್ಲಿ 800 ಕೋ.ರೂ. ವೆಚ್ಚದಲ್ಲಿ ಚತುಷ್ಪಥಗೊಳ್ಳಲಿದೆ. ಈ ಹೆದ್ದಾರಿಗೆ ಸಂಬಂಧಿಸಿದಂತೆ ಯೋಜನಾ ನಿರ್ದೇಶಕರ ಕಚೇರಿಯು ತುಮಕೂರಿನಿಂದ ಮಂಗಳೂರಿಗೆ ಸ್ಥಳಾಂತರವಾಗಿದೆ ಎಂದರು.
*ಬಿ.ಸಿ. ರೋಡ್-ಚಾರ್ಮಾಡಿ ಹೆದ್ದಾರಿಯ ಬಿ.ಸಿ.ರೋಡ್‌ನಿಂದ ಪುಂಜಾಲಕಟ್ಟೆವರೆಗೆ ಮೊದಲ ಹಂತದ ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭಗೊಂಡಿದೆ. ಆರಂಭದ 3.65 ಕಿಮೀ. ನಾಲ್ಕು ಪಥದ ಕಾಂಕ್ರೀಟ್ ರಸ್ತೆ, ಬಳಿಕದ 16 ಕಿ.ಮೀ. ಫೇವರ್ ಫಿನಿಶ್ ದ್ವಿಪಥ ರಸ್ತೆ ನಿರ್ಮಾಣಗೊಳ್ಳುತ್ತಿದೆ. ಇದಕ್ಕಾಗಿ 159.70 ಕೋ.ರೂ. ಹಣ ಮಂಜೂರಾಗಿದ್ದು, 98.32 ಕೋ.ರೂ. ವೆಚ್ಚದ ಕಾಮಗಾರಿಗೆ ಟೆಂಡರ್ ಆಗಿದೆ. ಈ ಪೈಕಿ 6 ಕಿ.ಮೀ. ಕಾಮಗಾರಿ ನಡೆದಿದೆ. ಎರಡನೇ ಹಂತದಲ್ಲಿ ಪುಂಜಾಲಕಟ್ಟೆಯಿಂದ ಚಾರ್ಮಾಡಿವರೆಗಿನ ರಸ್ತೆಗೆ 225 ಕೋ.ರೂ., ಮೂರನೇ ಹಂತದಲ್ಲಿ ಚಾರ್ಮಾಡಿಯಿಂದ ಕೊಟ್ಟಿಗೆ ಹಾರವರೆಗಿನ ರಸ್ತೆಗೆ 200 ಕೋ.ರೂ. ಡಿಪಿಆರ್ ಸಿದ್ಧಗೊಂಡಿದ್ದು, ಅನುಮೋದನೆಗಾಗಿ ಕೇಂದ್ರ ಸರಕಾರಕ್ಕೆ ಕಳುಹಿಸಲಾಗಿದೆ ಎಂದು ನಳಿನ್ ತಿಳಿಸಿದರು.
*ಕೇಂದ್ರಿಯ ರಸ್ತೆ ನಿಧಿ (ಸಿಆರ್‌ಎಫ್)ನಿಂದ ದ.ಕ. ಜಿಲ್ಲೆಗೆ ಮೂರು ಹಂತದಲ್ಲಿ ಅನುದಾನ ಬಂದಿದೆ. ಮೊದಲ ಹಂತದಲ್ಲಿ 14 ಕಾಮಗಾರಿಗೆ 65.4 ಕೋ.ರೂ. ಬಿಡುಗಡೆಗೊಂಡಿದ್ದು, 71 ಕಿಮೀ ರಸ್ತೆ ನಿರ್ಮಾಣವಾಗಿದೆ. ಎರಡನೇ ಹಂತದಲ್ಲಿ 8 ಕಾಮಗಾರಿಗೆ 55.5 ಕೋ.ರೂ. ಬಿಡುಗಡೆಗೊಂಡಿದ್ದು, 58 ಕಿಮೀ ರಸ್ತೆ ಪೈಕಿ ಶೇ.50 ಕಾಮಗಾರಿ ಆಗಿದೆ. ಮೂರನೇ ಹಂತದಲ್ಲಿ 4 ಕಾಮಗಾರಿಗೆ 25.5 ಕೋ.ರೂ. ಬಿಡುಗಡೆಗೊಂಡಿದ್ದು, 30 ಕಿ.ಮೀ. ರಸ್ತೆ ಕಾಮಗಾರಿ ಟೆಂಡರ್ ಹಂತದಲ್ಲಿದೆ.
*ಸಿಆರ್‌ಎಫ್‌ನಿಂದ ಕಳೆದ 2 ವರ್ಷದಲ್ಲಿ 23 ಕೋ.ರೂ. ವೆಚ್ಚದಲ್ಲಿ ಮಣಿಹಳ್ಳ, ನಿಡಗಲ್, ಚಾರ್ಮಾಡಿಯಲ್ಲಿ ಸೇತುವೆ ಕಾಮಗಾರಿ ಪೂರ್ಣಗೊಂಡಿದೆ. ರಸ್ತೆ ಡಾಮರೀಕರಣಕ್ಕಾಗಿ ಮಾಣಿ-ಮೈಸೂರು ಹೆದ್ದಾರಿಗೆ 25 ಕೋ.ರೂ., ಕುಲಶೇಖರ ಕಾರ್ಕಳ ಹೆದ್ದಾರಿಗೆ 10 ಕೋ.ರೂ., ಪುಂಜಾಲಕಟ್ಟೆ-ಚಾರ್ಮಾಡಿಗೆ 20 ಕೋ.ರೂ.ಬಿಡುಗಡೆಗೊಂಡಿದ್ದು, ಮಳೆಗಾಲ ಕಳೆದ ಬಳಿಕ ಕಾಮಗಾರಿ ಆರಂಭಗೊಳ್ಳಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಡಾ. ವೈ. ಭರತ್ ಶೆಟ್ಟಿ, ಎಇಗಳಾದ ರಮೇಶ್, ಕೀರ್ತಿ ಅಮೀನ್ ಉಪಸ್ಥಿತರಿದ್ದರು.