ಹಿದಾಯತ್ ನಗರ ಮದ್ರಸದ ಮೇಲಂತಸ್ತು ಉದ್ಘಾಟನೆ
ಉಳ್ಳಾಲ, ಜೂ.22: ಮದ್ರಸವು ಧಾರ್ಮಿಕ ವಿದ್ಯೆ ನೀಡುವ ಕೇಂದ್ರವಾಗಿದ್ದು ಹೆಣ್ಣು ಮತ್ತು ಗಂಡು ಎಂಬ ಭೇದವಿಲ್ಲ. ಸಮುದಾಯದ ಎಲ್ಲರಿಗೂ ಮದ್ರಸ ಶಿಕ್ಷಣ ಅನಿವಾರ್ಯ ಎಂದು ಉಡುಪಿ ಜಿಲ್ಲಾ ಸಂಯುಕ್ತ ಖಾಝಿ ಪಿ.ಎಂ. ಇಬ್ರಾಹೀಂ ಮುಸ್ಲಿಯಾರ್ ಬೇಕಲ ಹೇಳಿದರು.
ಕೋಟೆಕಾರ್ ಸಮೀಪದ ಹಿದಾಯತ್ ನಗರದಲ್ಲಿರುವ ಇಹ್ಸಾನುಲ್ ವಹ್ಹಾಬ್ ಅಲ್ ಮದ್ರಸತುಲ್ ಹಿದಾಯ ಇದರ ಮೇಲಂತಸ್ತು ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಲೌಕಿಕ ವಿದ್ಯೆ ಎನ್ನುವುದು ಭೂಲೋಕದಲ್ಲಿ ಅತ್ಯಗತ್ಯ. ಇದರಿಂದ ಜೀವನಕ್ಕೆ ಕೆಲಸ ದೊರಕಬಹುದು. ಅದೇ ರೀತಿ ಧಾರ್ಮಿಕ ವಿದ್ಯೆಯೂ ಮುಖ್ಯ. ಈ ವಿದ್ಯೆಯಿಂದ ಮನುಷ್ಯನ ಜೀವನ ಪಾಠ ಸಿಗುತ್ತದೆ. ಧಾರ್ಮಿಕ ವಿದ್ಯೆ ಪಡೆಯದವರು ಸುಸಂಸ್ಕೃತ ಜೀವನ ನಡೆಸಲಾಗದು. ವಿದ್ಯೆ ಪಡೆದರೆ ಸಾಲದು, ಅದಕ್ಕೆ ತಕ್ಕಂತೆ ಜೀವನ ಸಾಗಿಸುವುದು ಮುಖ್ಯ ಎಂದು ಬೇಕಲ ಉಸ್ತಾದ್ ನುಡಿದರು.
ಎಸ್‌ವೈಎಸ್ ರಾಜ್ಯಾಧ್ಯಕ್ಷ ಹುಸೈನ್ ಸಅದಿ ಕೆ.ಸಿ.ರೋಡು ಮಾತನಾಡಿ, ಹಿದಾಯತ್ ನಗರ ಮದ್ರಸ ಮತ್ತು ಮಸೀದಿಯ ವಿಸ್ತರಣೆ ಸಂದರ್ಭ ದಾನಿಗಳು ಹೆಸರು, ಅಧಿಕಾರಕ್ಕಾಗಿ ಹಾತೊರೆಯದೆ ಮುಕ್ತ ಮನಸ್ಸಿನಿಂದ ದೇಣಿಗೆ ನೀಡಿದ್ದಾರೆ. ಇಂತಹ ದಾನ ದೇವನ ಮುಂದೆ ಸ್ವೀಕಾರಾರ್ಹವಾಗಿದೆ ಎಂದರು.
ಮದ್ರಸ ಸಮಿತಿಯ ಅಧ್ಯಕ್ಷ ಎನ್‌ಎಸ್ ಉಮರ್ ಮಾಸ್ಟರ್ ಅಧ್ಯಕ್ಷತೆ ವಹಿಸಿದ್ದರು. ಖತೀಬ್ ಅಹ್ಮದ್ ಕಬೀರ್ ಸಅದಿ ಉಳ್ಳಾಲ, ಮುಅಲ್ಲಿಂ ಅಶ್ರಫ್ ಅಮ್ಜದಿ, ಎಸ್‌ಎಂಎ ಅಧ್ಯಕ್ಷ ಅಬ್ಬಾಸ್, ಮಸೀದಿಯ ಕಾರ್ಯದರ್ಶಿ ಝಾಕಿರ್ ಎಸ್. ಉಪಸ್ಥಿತರಿದ್ದರು. ಸದರ್ ಮುಅಲ್ಲಿಂ ಯು.ಎ.ಅಬ್ದುಲ್ ಅಝೀಝ್ ಸಖಾಫಿ ಸ್ವಾಗತಿಸಿದರು.