ತುಳು ಭಾಷೆ 8ನೇ ಪರಿಚ್ಛೇದ ಸೇರ್ಪಡೆಗೆ ರಾಜಕೀಯ ಒತ್ತಡ ಅಗತ್ಯ: ಎ.ಸಿ. ಭಂಡಾರಿ

Update: 2019-06-22 12:35 GMT

ಪುತ್ತೂರು: ತುಳು ಭಾಷೆ 8ನೇ ಪರಿಚ್ಛೇದ ಸೇರ್ಪಡೆಗೆ ಎಲ್ಲಾ ಅರ್ಹತೆಗಳನ್ನು ಪಡೆದಿದ್ದರೂ ಇನ್ನೂ ಸೇರ್ಪಡೆಯಾಗಿಲ್ಲ ಈ ಕಾರ್ಯಕ್ಕೆ ರಾಜಕೀಯ ಒತ್ತಡದ ಅಗತ್ಯವಿದೆ. ಜಗತ್ತಿನಲ್ಲಿ 1.50 ಕೋಟಿ ಮಂದಿ ತುಳು ಭಾಷೆಯನ್ನು ಮಾತನಾಡುತ್ತಿದ್ದಾರೆ. ಈ ಭಾಗದ ಸಂಸದರು ತುಳುವನ್ನು 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸುವ ಬಗ್ಗೆ ಮನಸ್ಸು ಮಾಡಿದರೆ ಖಂಡಿತಾ ತುಳು ಭಾಷಿಗರ ಬಹು ಕಾಲದ ಕನಸು ನನಸಾಗಲಿದೆ ಎಂದು ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ ಹೇಳಿದರು. 

ಅವರು ಪುತ್ತೂರಿನ ಕೊಂಬೆಟ್ಟು ಬಂಟರ ಭವನದಲ್ಲಿ ಶನಿವಾರ ಅಖಿಲ ಭಾರತ ತುಳು ಒಕ್ಕೂಟ, ಪುತ್ತೂರು ತುಳುಕೂಟ ಹಾಗೂ ರಾಮಕೃಷ್ಣ ಪ್ರೌಢ ಶಾಲಾ ಸಹಯೋಗದಲ್ಲಿ ನಡೆದ ತುಳು ಭಾಷೆಯಲ್ಲಿ 10 ನೇ ತರಗತಿಯಲ್ಲಿ ಶೇ.100 ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ `ಚಾತಿರ್ಪುದ ಮಾನಾದಿಗೆ-2019' ಉದ್ಘಾಟಿಸಿ ಮಾತನಾಡಿದರು. 

ರಾಜ್ಯ ಸರ್ಕಾರವು ಈಗಾಗಲೇ ತುಳು ಪಠ್ಯ ಕ್ರಮವನ್ನು ಈಗಾಗಲೇ ಪೌಢಶಾಲೆ ಹಾಗೂ ಪದವಿ ತರಗತಿಯಲ್ಲಿ ಆರಂಭಿಸಿದೆ. ಸ್ನಾತಕ್ಕೋತ್ತರ ವಿಭಾಗದಲ್ಲಿಯೂ ತುಳು ಪಠ್ಯದ ಮೊದಲ ಪರೀಕ್ಷೆ ನಡೆದಿದ್ದು, 2ನೇ ವರ್ಷ ಪರೀಕ್ಷೆ ಈ ಬಾರಿ ನಡೆಯಲಿದೆ. ಆದರೆ ಪದವಿ ಪೂರ್ವ ತರಗತಿಯಲ್ಲಿ ತುಳು ಪಠ್ಯ ಕ್ರಮ ಅಳವಡಿಸಲಾಗಿಲ್ಲ. ತುಳು ಭಾಷೆ ಅಭಿವೃದ್ದಿಗೆ ಪೂರಕವಾಗುವಂತೆ ಪದವಿಪೂರ್ವ ತರಗತಿಗೂ ತುಳುಪಠ್ಯವನ್ನು ಸರ್ಕಾರ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಈಗಾಗಲೇ ಸರ್ಕಾರಕ್ಕೆ ಈ ಬಗ್ಗೆ ತುಳು ಸಾಹಿತ್ಯ ಅಕಾಡೆಮಿಯಿಂದ ಮನವಿ ಸಲ್ಲಿಸಿ ಆಗ್ರಹಿಸಲಾಗಿದೆ. ಮುಖ್ಯಮಂತ್ರಿಗಳು ಪೂರಕ ಭರವಸೆ ನೀಡಿದ್ದಾರೆ ಎಂದರು.  .

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 44 ಶಾಲೆಗಳಲ್ಲಿ ತುಳು ಪಠ್ಯವಿದೆ. 625 ಮಂದಿ 10ನೇ ತರಗತಿಯಲ್ಲಿ ತುಳುಭಾಷೆ ಆಯ್ಕೆ ಮಾಡಿಕೊಂಡು ಪರೀಕ್ಷೆ ಬರೆದಿದ್ದಾರೆ. ಅದರಲ್ಲಿ 65 ಮಂದಿ ಶೇ.100 ಅಂಕ ಗಳಿಸಿದ್ದಾರೆ ಎಂದ ಅವರು ಪ್ರಸ್ತುತ ಖಾವಂದರಾದ ಡಾ. ಡಿ. ವೀರೇಂದ್ರ ಹೆಗ್ಗಡೆ ಮತ್ತು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ತುಳು ಸಮ್ಮೇಳನ ನಡೆಸುವ ಮೂಲಕ ತುಳು ಭಾಷೆಯ ಬೆಳವಣಿಗೆಯಲ್ಲಿ ತಮ್ಮದೇ ಕೊಡುಗೆ ನೀಡಿದ್ದಾರೆ. ಇದರೊಂದಿಗೆ ಅಖಿಲ ಭಾರತ ತುಳು ಒಕ್ಕೂಟ, ತುಳು ಸಾಹಿತ್ಯ ಅಕಾಡಮಿ ಇವೆಲ್ಲದರ ಕಾರಣದಿಂದ ಇದೀಗ ತುಳು ಭಾಷೆಗೆ ಸುವರ್ಣ ಕಾಲ ಬಂದಿದೆ. ತುಳು ಬರಹ, ಓದು ಮತ್ತು ವ್ಯವಹಾರದ ಮೂಲಕ ಉತ್ತಮವಾಗಿ ಬೆಳೆಯ ಬೇಕು ಎಂಬುದು ಎಲ್ಲರ ಧ್ಯೇಯವಾಗಿದೆ ಎಂದರು. 

ತುಳು ಭಾಷೆ ಯಾವುದೇ ಧರ್ಮ ಮತ್ತು ಜಾತಿಗೆ ಸೀಮಿತವಲ್ಲ. ಈ ಭಾಗದ ಮುಸ್ಲಿಮರು, ಕ್ರಿಶ್ಚನರು ಸೇರಿದಂತೆ ಎಲ್ಲರೂ ತುಳು ಭಾಷೆ ಮಾತನಾಡುತ್ತಿರುವ ತುಳುವರಾಗಿದ್ದಾರೆ. ತುಳು ನಾಡಿನ ಎಲ್ಲರ ಭಾಷೆಯಾಗಿ ಬೆಳೆದಿದೆ ಎಂದರು. 

ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ ತುಳು ಸಂಘಟನೆಗಳು ಕೇವಲ ಕೆಲವರಿಗಷ್ಟೇ ಸೀಮಿತವಾಗದೆ ತುಳುನಾಡಿನ ಎಲ್ಲರ ಸಂಘಟನೆಯಾಗಿ ಬೆಳೆಯಬೇಕು. ತುಳು ಭಾಷಾ ಬೆಳವಣಿಗೆ ಬಲಿಷ್ಟವಾಗಲು ಜನಜಾಗೃತಿಯ ಆಂದೋಲನ ನಡೆಯಬೇಕಾಗಿದೆ. ತುಳು ಪಠ್ಯ ಕೇವಲ ಪುಸ್ತಕದ ಬದನೆಯಾಗದೆ ತುಳು ಶಬ್ದ ಸಂಪತ್ತನ್ನು ಬೆಳೆಸುವಂತಿರಬೇಕು. ತುಳು ಪಠ್ಯಕ್ಕೆ ಉತ್ತಮ ಶಿಕ್ಷಕರ ನೇಮಕಾತಿಯತ್ತ ಅಕಾಡೆಮಿ ಗಮನ ಹರಿಸಬೇಕಾಗಿದೆ ಎಂದ ಅವರು ಮುಂದಿನ ಬಾರಿ ರಾಮಕೃಷ್ಣ ಪ್ರೌಢ ಶಾಲೆಯ 10 ನೇ ತರಗತಿಯಲ್ಲಿ ತುಳು ಪಠ್ಯದಲ್ಲಿ ಶೇ.100 ಅಂಕ ಪಡೆಯುವ ವಿದ್ಯಾರ್ಥಿಗಳಿಗೆ ತಮ್ಮ ವತಿಯಿಂದ ತಲಾ ರೂ.1000 ನಗದು ಬಹುಮಾನ ನೀಡುವುದಾಗಿ ಘೋಷಣೆ ಮಾಡಿದರು. 

ಅಖಿಲಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ದೆಹಲಿ ದಕ್ಷಿಣ ಭಾರತೀಯ ಸಾಂಸ್ಕೃತಿಕ ಸಂಘದ ಸಂಚಾಲಕ ನರೇಂದ್ರ ರೈ ಎಂ.ಬಿ, ತುಳು ಸಾಹಿತ್ಯ ಅಕಾಡೆಮಿ ಸದಸ್ಯ ನಿರಂಜನ ರೈ ಮಠಂತಬೆಟ್ಟು, ನಗರಸಭಾ ಸದಸ್ಯ ಪಿ.ಜಿ.ಜಗನ್ನೀವಾಸ ರಾವ್, ರಾಮಕೃಷ್ಣ ಪ್ರೌಢಶಾಲಾ ಮುಖ್ಯಗುರು ರೂಪಕಲಾ, ತುಳು ಅಕಾಡೆಮಿ ಸದಸ್ಯರಾದ ಕಾಂತಿ ಶೆಟ್ಟಿ ಬೆಂಗಳೂರು,  ಶೀನಪ್ಪ ಆಳ್ವ, ವಿಜಯಕುಮಾರ್ ಕುಲಶೇಖರ, ತುಳು ಸಂಘಟಕರಾದ ಹರಿಣಿ ವಿಜಯ್, ಚಂದ್ರಶೇಖರ ಸುವರ್ಣ, ಜಯಂತಿ ಬಂಗೇರ ಉಪಸ್ಥಿತರಿದ್ದರು. 

ಕಾರ್ಯಕ್ರಮದಲ್ಲಿ ಬರೋಡಾ ತುಳು ಸಂಘದ ಅಧ್ಯಕ್ಷ ಶಶಿಧರ ಶೆಟ್ಟಿ.ಬಿ ಅವರನ್ನು ಸನ್ಮಾನಿಸಲಾಯಿತು. 10ನೇ ತರಗತಿ ಪರೀಕ್ಷೆಯಲ್ಲಿ ತುಳು ಪಠ್ಯದಲ್ಲಿ ಶೇ.100 ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಪುರಸ್ಕರಿಸಲಾಯಿತು. 

ಕಾರ್ಯಕ್ರಮ ಸಂಯೋಜಕ ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ ಸ್ವಾಗತಿಸಿದರು. ಅಖಿಲ ಭಾರತ ತುಳು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ನಿಟ್ಟೆ ಶಶಿಧರ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುತ್ತೂರು ತುಳುಕೂಟದ ಅಧ್ಯಕ್ಷ ವಿಜಯಕುಮಾರ್ ಹೆಬ್ಬಾರಬೈಲು ವಂದಿಸಿದರು. ನ್ಯಾಯವಾದಿ ಹರಿಣಾಕ್ಷಿ ಜೆ.ಶೆಟ್ಟಿ ಮತ್ತು ಶಿಕ್ಷಕಿ ಲತಾ ರೈ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News