ಕ್ಯೂಎಸ್ ವಿಶ್ವ ರ‍್ಯಾಂಕಿಂಗ್: ಮಾಹೆ ದೇಶದ ಅಗ್ರ ರ‍್ಯಾಂಕ್ ಖಾಸಗಿ ವಿವಿ

Update: 2019-06-22 13:04 GMT

ಉಡುಪಿ, ಜೂ.22: ಈ ವಾರ ಪ್ರಕಟವಾದ ಕ್ಯೂಎಸ್ ಜಾಗತಿಕ ವಿಶ್ವವಿದ್ಯಾನಿಲಯ ರ‍್ಯಾಂಕಿಂಗ್-2020ರಲ್ಲಿ ಮಣಿಪಾಲದ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ಭಾರತದ ಅಗ್ರ ರ‍್ಯಾಂಕ್ ಖಾಸಗಿ ವಿವಿಯಾಗಿ ಗುರುತಿಸಲ್ಪಟ್ಟಿದೆ.

16ನೇ ಕ್ಯೂಎಸ್ ವಿಶ್ವ ರ‍್ಯಾಂಕಿಂಗ್ ಬುಧವಾರ ಪ್ರಕಟವಾಗಿದ್ದು, ಇದರಲ್ಲಿ ಮಣಿಪಾಲ 701-750ರ ಶ್ರೇಣಿಯಲ್ಲಿ ಸ್ಥಾನ ಪಡೆದಿದೆ. ಕಳೆದ ವರ್ಷದ ರ‍್ಯಾಂಕಿಂಗ್‌ನಲ್ಲಿ ಮಾಹೆ 750-800ರಲ್ಲಿ ಸ್ಥಾನ ಪಡೆದಿತ್ತು. ವಿಶ್ವದ 82 ದೇಶಗಳ 1620 ವಿಶ್ವವಿದ್ಯಾಲಯಗಳನ್ನು ರ‍್ಯಾಂಕಿಂಗ್‌ಗಾಗಿ ಪರಿಗಣಿಸಲಾಗಿದ್ದು, ಪ್ರಕಟಿತ ರ‍್ಯಾಂಕಿಂಗ್‌ನಲ್ಲಿ 1000 ವಿವಿಗಳು ಸ್ಥಾನ ಪಡೆದಿವೆ. ಮಾಹೆ ಒಟ್ಟಾರೆಯಾಗಿ ಶೇ.66 ರ‍್ಯಾಂಕಿಂಗ್ ಅಂಕಗಳನ್ನು ಪಡೆದಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಮಾಹೆ ತಿಳಿಸಿದೆ.

2020ರ ರ‍್ಯಾಂಕಿಂಗ್‌ಗಾಗಿ ಸಂಸ್ಥೆಯು ವಿವಿಗಳನ್ನು ಆರು ಮಾನದಂಡಗಳಲ್ಲಿ ಮೌಲ್ಯಮಾಪನ ನಡೆಸಿತ್ತು. ವಿವಿಯ ಶೈಕ್ಷಣಿಕ ಗೌರವ, ಉದ್ಯೋಗದಾತರ ಗೌರವ, ವಿದ್ಯಾಥಿ-ಪ್ರಾದ್ಯಾಪಕರ ಅನುಪಾತ, ಪ್ರಾಧ್ಯಾಪಕರುಗಳ ಅರ್ಹತೆ, ಅಂತಾರಾಷ್ಟ್ರೀಯ ಪ್ರಾಧ್ಯಾಪಕರ ಅನುಪಾತ ಹಾಗೂ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಅನುಪಾತಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿತ್ತು.

ಅಲ್ಲದೇ ವಿವಿಗಳ 93 ಮಿಲಿಯ ಉಲ್ಲೇಖಗಳು, 13 ಮಿಲಿಯ ಪ್ರಬಂಧ ಗಳು, 45,000 ಉದ್ಯೋಗಿಗಳ ಸಮೀಕ್ಷಾ ಪ್ರತಿಕ್ರಿಯೆಗಳನ್ನು ಹಾಗೂ ಇತರ ಸಮೀಕ್ಷೆಗಳನ್ನು ಅವಲೋಕನ ಮಾಡಿತ್ತು.

ವಿಷಯವಾರು ಕ್ಯೂಎಸ್ ವಿಶ್ವರ್ಯಾಂಕಿಂಗ್‌ನ್ನು ಕಳೆದ ವರ್ಷ ಪ್ರಕಟಿಸಲಾಗಿತ್ತು. ಇದರಲ್ಲಿ ಮಣಿಪಾಲದ ಮಣಿಪಾಲ ಕಾಲೇಜ್ ಆಫ್ ಫಾರ್ಮಸ್ಯೂಟಿಕಲ್ ಸಾಯನ್ಸ್, ಫಾರ್ಮಸಿ ಮತ್ತು ಫಾರ್ಮಕಾಲಜಿಯಲ್ಲಿ 201ರಿಂದ 250ರ ಶ್ರೇಣಿಯಲ್ಲಿ ರ್ಯಾಂಕ್ ಪಡೆದಿತ್ತು. ಮಣಿಪಾಲ ಕಸ್ತೂರ್‌ಬಾ ಮೆಡಿಕಲ್ ಕಾಲೇಜು ಮೆಡಿಸಿನ್ ವಿಭಾಗದಲ್ಲಿ 351-400ರ ಶ್ರೇಣಿಯಲ್ಲಿ ಸ್ಥಾನ ಪಡೆದಿತ್ತು.

ಕ್ಯೂಎಸ್ ವಿಶ್ವ ರ್ಯಾಂಕಿಂಗ್‌ನಲ್ಲಿ ಪಡೆದ ಸ್ಥಾನದ ಕುರಿತಂತೆ ಮಾತನಾಡಿದ ಮಾಹೆಯ ಕುಲಪತಿ ಡಾ.ಎಚ್.ವಿನೋದ ಭಟ್, ನಾವು ಕಠಿಣ ಪರಿಶ್ರಮ ಪಟ್ಟಿದ್ದೇವೆ. ಇದರ ಪರಿಣಾಮಗಳು ಈ ಸಮೀಕ್ಷೆಯಲ್ಲಿ ಕಾಣಿಸುತ್ತಿದೆ. ಪ್ರತಿಯೊಂದು ಮಾನದಂಡದಲ್ಲಿ ನಾವು ಉತ್ತಮ ಸಾಧನೆ ತೋರಿಸಿದ್ದೇವೆ ಎಂದರು.

ಮುಂಬಯಿ ಐಐಟಿ ಭಾರತದ ಅಗ್ರವಿವಿ
ಕ್ಯೂಎಸ್ ವಿಶ್ವ ರ್ಯಾಂಕಿಂಗ್‌ನಲ್ಲಿ ಮುಂಬಯಿಯ ಬಾಂಬೆ ಐಐಟಿ ದೇಶದ ಅತ್ಯುತ್ತಮ ವಿವಿಯಾಗಿ ಹೊರಹೊಮ್ಮಿದೆ. ಭಾರತದ ಒಟ್ಟು ಮೂರು ವಿವಿಗಳು ವಿಶ್ವದ ಅಗ್ರ 200 ವಿವಿಗಳಲ್ಲಿ ಸ್ಥಾನ ಪಡೆದಿದೆ. ಇವುಗಳಲ್ಲಿ ಬಾಂಬೆ ಐಐಟಿ 152ನೇ ಸ್ಥಾನದಲ್ಲಿದ್ದು, ಕಳೆದ ವರ್ಷಕ್ಕಿಂತ(162) 10 ಸ್ಥಾನ ಮೇಲಕ್ಕೇರಿದೆ. ಐಐಟಿ ದಿಲ್ಲಿ 182ನೇ ಸ್ಥಾನದಲ್ಲಿದ್ದರೆ, ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ 184ನೇ ಸ್ಥಾನದಲ್ಲಿದೆ. ಕಳೆದ ವರ್ಷ ಐಐಟಿ ದಿಲ್ಲಿ 172ನೇ ಸ್ಥಾನದಲ್ಲಿತ್ತು.

ಈ ಬಾರಿಯ ಕ್ಯೂಎಸ್ ರ್ಯಾಂಕಿಂಗ್‌ನಲ್ಲಿ ದೇಶದ ಒಟ್ಟು 23 ವಿವಿಗಳು ಸ್ಥಾನ ಪಡೆದಿವೆ. ಇವುಗಳಲ್ಲಿ ಮೂರು ಮಾತ್ರ ವಿಶ್ವದ ಅಗ್ರ 200 ವಿವಿಗಳಲ್ಲಿ ಸ್ಥಾನ ಪಡೆದಿವೆ. ಉಳಿದಂತೆ ಐಐಟಿ ಮದರಾಸು 271, ಐಐಟಿ ಖರಗ್‌ಪುರ 281, ಐಐಟಿ ಕಾನ್ಪುರ 291, ಐಐಟಿ ರೂರ್ಕಿ 383, ದಿಲ್ಲಿ ವಿವಿ 474, ಐಐಟಿ ಗುವಾಹಟಿ 491ನೇ ಸ್ಥಾನದಲ್ಲಿವೆ.

ವಿಶ್ವದಲ್ಲಿ ಅಮೆರಿಕದ ಎಂಐಟಿ ಸತತ ಎಂಟನೇ ವರ್ಷದಲ್ಲಿ ವಿಶ್ವದ ಅಗ್ರ ರ್ಯಾಂಕ್ ವಿವಿಯ ಹೆಗ್ಗಳಿಕೆಯನ್ನು ಉಳಿಸಿಕೊಂಡು ದಾಖಲೆ ಬರೆದಿದೆ. ಸ್ಟಾನ್‌ಪೋರ್ಡ್ ವಿವಿ, ಹಾರ್ವರ್ಡ್ ವಿವಿ ಹಾಗೂ ಕ್ಯಾಲಿಫೋರ್ನಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕ್ರಮವಾಗಿ ಎರಡರಿಂದ ನಾಲ್ಕನೇ ರ್ಯಾಂಕ್‌ನ್ನು ಉಳಿಸಿಕೊಂಡಿವೆ.

ಉಳಿದಂತೆ ಆಕ್ಸ್‌ಫರ್ಡ್ ವಿವಿ (5), ಕೆಂಬ್ರಿಡ್ಜ್ ವಿವಿ(6), ಯೇಲೆ ವಿವಿ (15), ಕೊಲಂಬಿಯಾ ವಿವಿ (16), ಪ್ರಿನ್ಸ್‌ಟನ್ ವಿವಿ (17), ಯುನಿವರ್ಸಿಟಿ ಆಫ್ ಎಡಿನ್‌ಬರೋ (18), ಯುನಿವರ್ಸಿಟಿ ಆಫ್ ಮಿಚಿಗನ್ (20) ವಿಶ್ವದ ಅಗ್ರ 20 ವಿವಿಗಳಲ್ಲಿ ಸ್ಥಾನವನ್ನು ಹೊಂದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News