ಮಾಣಿ: ಯುವ ಸ್ಫೂರ್ತಿ ಕಾರ್ಯಾಗಾರ

Update: 2019-06-22 13:19 GMT

ಬಂಟ್ವಾಳ, ಜೂ. 22: ಯುವವಾಹಿನಿ ಮಾಣಿ ಘಟಕದ ಆಶ್ರಯದಲ್ಲಿ ಪರಿಣಾಮಕಾರಿ ಭಾಷಣ ಕಲೆ, ಸಂವಹನ ಮತ್ತು ಮಾನಸಿಕ ಆರೋಗ್ಯ ಹಾಗೂ ವ್ಯಕ್ತಿತ್ವ ವಿಕಸನ ವಿಷಯಗಳ ಕುರಿತಾಗಿ "ಯುವ ಸ್ಫೂರ್ತಿ-2018-19" ಕಾರ್ಯಾಗಾರವು ಇತ್ತೀಚೆಗೆ  ಗಡಿಯಾರ ಶಾಲೆಯಲ್ಲಿ ನಡೆಯಿತು.

ಮಾಣಿ ಘಟಕದ ಅಧ್ಯಕ್ಷ ಹರೀಶ್ ಪೂಜಾರಿ ಬಾಕಿಲ ಅಧ್ಯಕ್ಷತೆಯಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಜಯಂತ ನಡುಬೈಲು, ನಿವೃತ್ತ ಬ್ಯಾಂಕ್ ಉದ್ಯೋಗಿ ಸೋಮಪ್ಪ ಪೂಜಾರಿ ಮಾದೆಲು, ಸಲಹೆಗಾರ ರವಿಚಂದ್ರ, ಶಾಲಾ ಮುಖ್ಯ ಶಿಕ್ಷಕಿ ಸುಚೇತ, ಕಾರ್ಯಕ್ರಮ ಸಂಚಾಲಕ ಜಯಪ್ರಕಾಶ್ ಕೆದಿಲ, ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ತುಕಾರಾಂ ಪೂಜಾರಿ, ಪದ್ಮನಾಭ ಮರೊಳಿ ಹಾಗೂ ಮಂಗಳೂರು ಘಟಕದ ಮಾಜಿ ಅಧ್ಯಕ್ಷ ಮೋಹನ ಪೆಜಕಳ ಉಪಸ್ಥಿತರಿದ್ದರು. 

ಭಾಷಣ ಕಲೆಯ ಕುರಿತಾಗಿ ವಿಷಯ ಮಂಡಿಸಿದ ತರಬೇತುದಾರ ಅಭಿಜಿತ್ ಕರ್ಕೇರ ಮಾತನಾಡಿ, ಭಾಷಣ ಕಲೆಯನ್ನು ಕರಗತ ಮಾಡಿಕೊಳ್ಳುವವರು ಜಗತ್ತಿನ ಆಗುಹೋಗುಗಳ ಕುರಿತಾದ ಸಾಮಾನ್ಯ ಜ್ಞಾನ ಬೆಳೆಸಿಕೊಂಡಿರಬೇಕು. ನೋಡುಗರನ್ನು ಸೆಳೆಯುವ ಮುಖಭಾವ, ಸ್ಪಷ್ಟ ಉಚ್ಛಾರವೂ ಅತೀ ಅಗತ್ಯ ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಮಾನಸಿಕ ಆಪ್ತ ಸಮಾಲೋಚಕರಾದ ಲೋಹಿತ್ ಮಾನಸಿಕ ಆರೋಗ್ಯದ ಕುರಿತಾಗಿ ಮಾಹಿತಿ ನೀಡುತ್ತಾ, ಮನುಷ್ಯನು ಹೊರಜಗತ್ತಿಗೆ ಎಷ್ಟು ಸಂತೋಷವಾಗಿ ಕಾಣುತ್ತಾನೊ ಅಂತೆಯೇ ಮಾನಸಿಕವಾಗಿಯೂ ಸದೃಢ ಆಗಿರಬೇಕಾಗುತ್ತದೆ. ಮೂಡನಂಬಿಕೆಗಳನ್ನು ಹೆಚ್ಚು ನಂಬಿ ಮೋಸ ಹೋಗುವ ಬದಲು ತನ್ನಲ್ಲಿರುವ ಮಾನಸಿಕ ಸಮಸ್ಯೆಯನ್ನು ಪರಿಹರಿಸುವುದರ ಕಡೆಗೆ ಗಮನಹರಿಸಬೇಕು ಎಂದರು.

ವ್ಯಕ್ತಿತ್ವ ವಿಕಸನದ ಕುರಿತಾಗಿ ತರಬೇತಿ ನೀಡಿದ ಸುಧಾಕರ್ ಕಾರ್ಕಳ, ವ್ಯಕ್ತಿ ತನ್ನ ಮನಸ್ಸಿನ ಒಳಗಿನ ತತ್ವಗಳನ್ನು ಬದಲಾವಣೆ ಮಾಡಿಕೊಂಡರೆ ಜೀವನದಲ್ಲಿ ಯಶಸ್ಸು ಖಂಡಿತ ಎಂದು ಹೇಳಿದರು.ಮನುಷ್ಯ ತನ್ನ ಜೀವನದಲ್ಲಿ ನಕಾರತ್ಮಕ ಭಾವನೆಗಳನ್ನು ಹೆಚ್ಚಾಗಿ ಆಳವಡಿಕೊಳ್ಳದೆ ಸಕಾರತ್ಮಕ ಭಾವನೆಗಳನ್ನು ಜೀವನದಲ್ಲಿ ಆಳವಡಿಸಿಕೊಳ್ಳಬೇಕು ಎಂದರು.

ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ಪ್ರೇಮನಾಥ್ ಬಂಟ್ವಾಳ, ಉದ್ಯಮಿ ನಿತಿನ್ ಅರ್ಬಿ, ಬಂಟ್ವಾಳ ಘಟಕ ಉಪಾಧ್ಯಕ್ಷ ಸತೀಶ್ ಬಾಯಿಲ, ಎಸ್‍ಡಿಎಂಸಿ ಅಧ್ಯಕ್ಷ ಜನಾಬ್ ಪಿ ಇಬ್ರಾಹಿಂ, ನಿಕಟಪೂರ್ವ ಅಧ್ಯಕ್ಷ ರಾಜೇಶ್ ಬಾಬನಕಟ್ಟೆ, ಉಪಾಧ್ಯಕ್ಷ ರಮೇಶ್ ಮುಜಲ ಮತ್ತು ಸಲಹೆಗಾರರಾದ ದಯಾನಂದ ಪೂಜಾರಿ ಕೊಡಜೆ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ 100ಕ್ಕೂ ಹೆಚ್ಚು ಸದಸ್ಯರು ಮತ್ತು ಶಾಲಾ ಮಕ್ಕಳು ಭಾಗವಹಿಸಿ ಕಾರ್ಯಾಗಾರದ ಸದುಪಯೋಗ ಪಡೆದುಕೊಂಡರು. ಕಾರ್ಯದರ್ಶಿ ಸುಜಿತ್ ಅಂಚನ್ ಸ್ವಾಗತಿಸಿದರು, ಉಪಾಧ್ಯಕ್ಷ ಪ್ರಶಾಂತ್ ಅನಂತಾಡಿ ವಂದಿಸಿದರು. ರಾಜೇಶ್ ಬಲ್ಯ ಮತ್ತು ದಿನಕರ್ ಬರಿಮಾರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News