ಹಲಸು ಚಾಕಲೇಟ್ ತಯಾರಿ ಯಶಸ್ವಿ: ಸತೀಶ್ಚಂದ್ರ

Update: 2019-06-22 14:59 GMT

ಮಂಗಳೂರು, ಜೂ.22: ಹಲಸು ಹಣ್ಣಿನ ಚಾಕಲೇಟು ತಯಾರಿಕೆಗೆ ಕ್ಯಾಂಪ್ಕೊ ಮುಂದಾಗಿದ್ದು, ಪ್ರಾಯೋಗಿಕವಾಗಿ ತಯಾರಿಸಲಾದ ಚಾಕಲೇಟು ಶೇ.90ರಷ್ಟು ಯಶಸ್ವಿಯಾಗಿದೆ ಎಂದು ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಹೇಳಿದರು.

ಸಾವಯವ ಕೃಷಿಕ ಗ್ರಾಹಕ ಬಳಗ ವತಿಯಿಂದ 4ನೇ ವರ್ಷದ ಹಲಸಿನ ಮೇಳಕ್ಕೆ (ಪ್ರದರ್ಶನ ಮತ್ತು ಮಾರಾಟ) ಶನಿವಾರ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಕರಾವಳಿಯ ಅನೇಕ ರೈತರು ಹಲಸಿನ ಮರಗಳನ್ನು ಕತ್ತರಿಸಿ ಅಡಕೆ ತೋಟ ಮಾಡಿದರು. ಈಗ ಹಲಸಿಗೆ ಬೇಡಿಕೆ ಬಂದಿದೆ. ಬಡವರಿಗೆ ಸೀಮಿತವಾಗಿದ್ದ ಹಲಸು ಇಂದು ಎಲ್ಲೆಡೆ ಮನ್ನಣೆ ಪಡೆಯುತ್ತಿದೆ. ಸಹಕಾರಿ ಕ್ಷೇತ್ರ ಕೂಡ ಹಲಸಿನ ಬಗ್ಗೆ ಆಸಕ್ತಿ ವಹಿಸಿದೆ ಎಂದರು.

ಕಾರ್ಯಕ್ರಮದಲ್ಲಿ ಮಂಗಳೂರು ಸಾವಯವ ಬಳಗ ಉಪಾಧ್ಯಕ್ಷ ರಾಜೇಂದ್ರ ಬಳ್ಳಾಲ್, ಪ್ರಧಾನ ಕಾರ್ಯದರ್ಶಿ ಡಾ.ಫಝಲ್, ಬಳಗದ ಅಧ್ಯಕ್ಷ ಅಡ್ಡೂರು ಕೃಷ್ಣ ರಾವ್ ಮತ್ತಿತರರಿದ್ದರು.

ಜನಜಂಗುಳಿ: ಹಲಸು ಮೇಳದ ಮೊದಲ ದಿನವೇ ಕಾಲಿಡಲು ಜಾಗವಿಲ್ಲದಷ್ಟು ನಗರವಾಸಿಗಳು ಬಾಳಂಭಟ್ ಸಭಾಂಗಣಕ್ಕೆ ದಾಂಗುಡಿ ಇಟ್ಟಿದ್ದರು. ಮಾಡಿಟ್ಟ ತಿಂಡಿಗಳೆಲ್ಲ ಕ್ಷಣಾರ್ಧದಲ್ಲಿ ಮಾಯವಾಗಿ ಬಿಡುತ್ತಿದ್ದವು. ರವಿವಾರವೂ ರಜಾ ದಿನವಾಗಿದ್ದರಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸುವ ನಿರೀಕ್ಷೆಯಿದೆ.

ಹಲಸು ಮೇಳದಲ್ಲಿ ಸ್ಥಳೀಯ ಹಲಸು ಸೇರಿದಂತೆ ವಿಶೇಷ ಆಕರ್ಷಣೆಯಾಗಿ ದೊಡ್ಡಬಳ್ಳಾಪುರದ ತೂಬಗೆರೆ ಹಲಸು, ಕೇಸರಿ ಬಣ್ಣದ ಚಂದ್ರ ಹಲಸು ಹಾಗೂ ರುದ್ರಾಕ್ಷಿ ಹಲಸಿನ ಮಾರಾಟ ಭರದಿಂದ ನಡೆಯುತ್ತಿದೆ. ಇದು ತುಸು ತುಟ್ಟಿಯಾದರೂ ವಿಶೇಷ ರುಚಿ. ಶನಿವಾರ ತೂಬಗೆರೆ ಹಲಸು ತಿನ್ನಲು ಗ್ರಾಹಕರು ಮುಗಿಬಿದ್ದಿದ್ದರು.

ಹಲಸಿನಿಂದ ತಯಾರಿಸಿದ ಗಟ್ಟಿ, ಹಲಸಿನ ಚಟ್ನಿ, ಹಲಸಿನ ಕೇಕ್, ಪಾಯಸ, ಅಪ್ಪ, ಹಲಸಿನದ್ದೇ ಹೋಳಿಗೆ... ಒಂದಲ್ಲ ಎರಡಲ್ಲ, ಹತ್ತಾರು ಬಗೆಯ ಖಾದ್ಯಗಳು. ಅನೇಕ ಸ್ಟಾಲ್‌ಗಳಲ್ಲಿ ಸ್ಥಳದಲ್ಲೇ ಹಲಸಿನ ಖಾದ್ಯಗಳನ್ನು ತಯಾರಿಸಿ ಬಿಸಿಬಿಸಿಯಾಗಿ ಗ್ರಾಹಕರಿಗೆ ನೀಡುವ ವ್ಯವಸ್ಥೆಯೂ ಉಂಟು. ಹಲಸಿನ ಬೀಜದಿಂದ ಮಾಡಿದ ಖಾದ್ಯಗಳೂ ಇವೆ. ಅಲ್ಲದೆ, ದಿನಸಿ ಮತ್ತು ಸಾವಯವ ತರಕಾರಿ ಸಂತೆಯೂ ಇಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News