ನೇತ್ರಾವತಿ ನದಿ ತೀರದಲ್ಲಿ ಅಕ್ರಮ ಮರಳು ಸಾಗಾಟ: 45 ಲಕ್ಷ ರೂ. ಮೌಲ್ಯದ ಸೊತ್ತು ವಶ

Update: 2019-06-22 15:27 GMT

ಮಂಗಳೂರು, ಜೂ. 22: ನಗರದ ಹೊರವಲಯದ ಅಡ್ಯಾರು ಗ್ರಾಮದ ಸುರೇಂದ್ರ ಕಾಂಬ್ಲಿ ಎಂಬವರಿಗೆ ಸೇರಿದ ಮರಳು ದಕ್ಕೆಯಲ್ಲಿ ಪರವಾನಿಗೆ ಇಲ್ಲದೆ ಶೇಖರಿಸಿಟ್ಟಿದ್ದ 55 ಸಾವಿರ ರೂ. ಮೌಲ್ಯದ ಮರಳು ಹಾಗೂ 45 ಲಕ್ಷ ರೂ. ಮೌಲ್ಯದ ಜೆಸಿಬಿ, ಮರಳು ತುಂಬಿದ ಮೂರು ಟಿಪ್ಪರ್‌ಗಳನ್ನು ಗ್ರಾಮಾಂತರ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ನೇತ್ರಾವತಿ ನದಿ ತೀರದಲ್ಲಿ ಜೆಸಿಬಿ ಯಂತ್ರದ ಮೂಲಕ ಮರಳನ್ನು ಟಿಪ್ಪರ್‌ಗೆ ತುಂಬಿಸಿ ಅಕ್ರಮ ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಗ್ರಾಮಾಂತರ ಪೊಲೀಸ್ ಇನ್‌ಸ್ಪೆಕ್ಟರ್ ಜಗದೀಶ್ ಆರ್. ನೇತೃತ್ವದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಬಿ.ಕೆ.ಮೂರ್ತಿ ಜತೆ ಕಾರ್ಯಾಚರಣೆ ನಡೆಸಿದ್ದಾರೆ. ನದಿಯಿಂದ ತೆಗೆದು ಅಲ್ಲಲ್ಲಿ ರಾಶಿ ಹಾಕಿದ್ದ 55 ಸಾವಿರ ರೂ. ಮೌಲ್ಯದ 15 ಲೋಡು ಮರಳು ಕೂಡಾ ವಶಪಡಿಸಿಕೊಳ್ಳಲಾಗಿದೆ.

ಸ್ವಾಧೀನಪಡಿಸಿಕೊಂಡ ಮರಳು, ಜೆಸಿಬಿ ಹಾಗೂ ಟಿಪ್ಪರ್‌ಗಳನ್ನು ಮುಂದಿನ ಕ್ರಮಕ್ಕಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಹಸ್ತಾಂತರಿಸಲಾಗಿದೆ.

ಗ್ರಾಮಾಂತರ ಠಾಣೆ ಅಪರಾಧ ವಿಭಾಗದ ಪಿಎಸ್ಸೈ ಕುಮಾರೇಶ್ವರನ್, ಪ್ರೊಬೆಷನರಿ ಪಿಎಸ್ಸೈ ಸುದೀಪ್, ಸಿಬ್ಬಂದಿ ಭರಣಿ ದೀಕ್ಷಿತ್, ಪ್ರಶಾಂತ್ ಮತ್ತು ಜೀವನ್ ನಾಯ್ಕಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News