ದಲಿತನಿಗೆ ತ್ಯಾಜ್ಯ ಎರಚಿದ ಪ್ರಕರಣ: ಆರೋಪಿ ಜಾಮೀನು ಅರ್ಜಿ ವಜಾ

Update: 2019-06-22 16:12 GMT

ಕುಂದಾಪುರ, ಜೂ.22: ವಡೇರಹೋಬಳಿ ಗ್ರಾಮದ ಎ.ಕೆ.ಜಿ ರಸ್ತೆಯಲ್ಲಿ ದಲಿತ ಯುವಕ ಮೇಲೆ ತ್ಯಾಜ್ಯ ಎರಚಿದ ಪ್ರಕರಣದ ಆರೋಪಿ ಸದಾನಂದ ಹವಾಲ್ದಾರ ಎಂಬಾತನ ಜಾಮೀನು ಅರ್ಜಿಯನ್ನು ಕುಂದಾಪುರ ಜಿಲ್ಲಾ ಮತ್ತು ಹೆಚ್ಚುವರಿ ಸತ್ರ ನ್ಯಾಯಾಲಯ ಇಂದು ತಿರಸ್ಕರಿಸಿದೆ.

ವಡೇರಹೋಬಳಿ ಎ.ಕೆ.ಜಿ ರಸ್ತೆಯ ಪರೀಕ್ಷಿತ್ ಕುಮಾರ್ ಜಿ.ಆರ್. (22) ಎಂಬವರು ಪರಿಶಿಷ್ಟ ಜಾತಿಗೆ ಸೇರಿದವರೆಂದು ತಿಳಿದು ಉದ್ದೇಶ ಪೂರ್ವಕವಾಗಿ ಸ್ಥಳೀಯ ನಿವಾಸಿಗಳಾದ ಸದಾನಂದ, ನಾಗರತ್ನ, ಹರ್ಷಿತಾ ಎಂಬವರು ಮನೆಗೆ ಹೋಗುವ ಕಾಲು ದಾರಿಗೆ ಮಲಮೂತ್ರ, ಅನ್ನ ಸಾರು, ಬಿಸಿ ನೀರು, ಮನೆಯ ಎಲ್ಲಾ ತರದ ಇತರ ತ್ಯಾಜ್ಯಗಳನ್ನು ಹಾಕುವುದಲ್ಲದೆ, ಪರೀಕ್ಷಿತ್ ಕುಮಾರ್ ಅವರ ಮೈಗೂ ಎರಚಿ ದೌರ್ಜನ್ಯ ಎಸಗಿರುವುದಾಗಿ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಬಗ್ಗೆ ತನಿಖೆ ನಡೆಸಿದ್ದ ಡಿವೈಎಸ್ಪಿದಿನೇಶ್ ಕುಮಾರ್ ಬಿ.ಪಿ. ಜೂ.19 ರಂದು ಆರೋಪಿ ಸದಾನಂದನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ದ್ದರು. ಆರೋಪಿ ಪರ ವಕೀಲರು ಸಲ್ಲಿಸಿದ ಜಾಮೀನು ಅರ್ಜಿಯ ವಿಚಾ ರಣೆ ನಡೆಸಿದ ಜಿಲ್ಲಾ ಮತ್ತು ಹೆಚ್ಚುವರಿ ಸತ್ರ ನ್ಯಾಯಾಧೀಶ ಪ್ರಕಾಶ ಖಂಡೇರಿ ಅರ್ಜಿಯನ್ನು ವಜಾಗೊಳಿಸಿ ಆದೇಶ ನೀಡಿದರು.

ಪ್ರಾಸಿಕ್ಯೂಶನ್ ಪರವಾಗಿ ಜಿಲ್ಲಾ ಸರಕಾರಿ ಅಭಿಯೋಜಕ ಬೇಳೂರು ಪ್ರಕಾಶ್ಚಂದ್ರ ಶೆಟ್ಟಿ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News