ಉಡುಪಿ: ರೈಲ್ವೆ ನಿಲ್ದಾಣದಲ್ಲಿ ಸ್ವಚ್ಛ ಭಾರತ್ ಅಭಿಯಾನ
Update: 2019-06-22 21:50 IST
ಉಡುಪಿ, ಜೂ.22: ಇಂದ್ರಾಳಿಯಲ್ಲಿರುವ ಉಡುಪಿ ರೈಲು ನಿಲ್ದಾಣದಲ್ಲಿ ಇಂದು ಕಾರವಾರದಲ್ಲಿರುವ ಕೊಂಕಣ ರೈಲ್ವೆಯ ಪ್ರಾದೇಶಿಕ ರೈಲ್ವೆ ಮ್ಯಾನೇಜರ್ ಆದ ಬಿ.ಬಿ.ನಿಕ್ಕಂ ಅವರ ನೇತೃತ್ವದಲ್ಲಿ ಸ್ವಚ್ಛ ಭಾರತ್ ಅಭಿಯಾನವನ್ನು ನಡೆಸಲಾಯಿತು.
ಪ್ರತಿ ತಿಂಗಳ ನಾಲ್ಕನೇ ಶನಿವಾರದಂದು ಕೊಂಕಣ ರೈಲ್ವೆಯ ನಿಲ್ದಾಣಗಳಲ್ಲಿ ಸ್ವಚ್ಛ ಭಾರತ್ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತದೆ. ಅದರ ಅಂಗವಾಗಿ ಇಂದು ಉಡುಪಿ ನಿಲ್ದಾಣದಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು.
ಉಡುಪಿಯ ಉಪ ಮುಖ್ಯ ವೈದ್ಯಕೀಯ ಅಧಿಕಾರಿ ಡಾ.ಸ್ಟೀವನ್ ಜೋರ್ಜ್ ಅವರು ಉಡುಪಿ ನಿಲ್ದಾಣದ ಸ್ವಚ್ಛತೆಯ ಮೇಲ್ವಿಚಾರಣೆಯನ್ನು ನಡೆಸುತ್ತಾರೆ. ಇಂದಿನ ಸ್ವಚ್ಛತಾ ಅಭಿಯಾನದಲ್ಲಿ ಕೊಂಕಣ ರೈಲ್ವೆಯ ಉಡುಪಿ ವಿಭಾಗದ ಎಲ್ಲಾ ಅಧಿಕಾರಿಗಳು, ಮೇಲ್ವಿಚಾರಕರು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.
ಉಡುಪಿ ರೈಲು ನಿಲ್ದಾಣದ ಪ್ಲಾಟ್‌ಫಾರಂ, ರೈಲ್ವೆ ಹಳಿ, ನಿಲ್ದಾಣದ ಕಟ್ಟಡ, ನಿಲ್ದಾಣದ ಆವರಣ, ಸ್ಟೇಶನ್ ಸಂಪರ್ಕಿಸುವ ರಸ್ತೆಗಳನ್ನು ಸ್ವಚ್ಛಗೊಳಿಸಲಾಯಿತು.