×
Ad

ಅಪೌಷ್ಟಿಕ ಮಕ್ಕಳು: ಈ ರಾಜ್ಯಕ್ಕೆ ಅಗ್ರಸ್ಥಾನದ (ಕು)ಖ್ಯಾತಿ

Update: 2019-06-23 09:46 IST

ಹೊಸದಿಲ್ಲಿ: ಮುಝಫ್ಫಪುರದಲ್ಲಿ ಮಕ್ಕಳ ಸಾವಿನಿಂದಾಗಿ ದೇಶದ ಗಮನ ಸೆಳೆದಿರುವ ಬಿಹಾರದಲ್ಲಿ ದೇಶದಲ್ಲೇ ಅತಿಹೆಚ್ಚು ಸಂಖ್ಯೆಯ ಅಪೌಷ್ಟಿಕ ಮಕ್ಕಳಿದ್ದಾರೆ ಎನ್ನುವ ಅಂಶ ಇದೀಗ ಬಹಿರಂಗವಾಗಿದೆ. ನೆರೆಯ ರಾಜ್ಯವಾದ ಜಾರ್ಖಂಡ್ ಅಪೌಷ್ಟಿಕ ಮಕ್ಕಳ ಪ್ರಮಾಣ (ಶೇಕಡ 48) ಅತ್ಯಧಿಕ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಇತ್ತೀಚಿನ ಅಂಕಿ ಅಂಶಗಳ ಪ್ರಕಾರ, ಬಿಹಾರದ ಒಟ್ಟು ಮಕ್ಕಳ ಪೈಕಿ ಶೇ. 44ರಷ್ಟು ಕಡಿಮೆ ತೂಕದ ಮಕ್ಕಳು. ದೇಶದಲ್ಲಿ ಸರಾಸರಿ ಶೇಕಡ 35ರಷ್ಟು ಕಡಿಮೆ ತೂಕದ ಮಕ್ಕಳಿದ್ದಾರೆ.

ಕುಬ್ಜ (ಬೆಳವಣಿಗೆ ಕುಂಠಿತ) ಮಕ್ಕಳು ಬಿಹಾರದಲ್ಲೇ ಅತ್ಯಧಿಕ (ಶೇ. 48). ದೇಶದಲ್ಲಿ ಶೇಕಡ 38ರಷ್ಟು ಇಂಥ ಮಕ್ಕಳಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಮಕ್ಕಳ ಬೆಳವಣಿಗೆ ಕುಂಠಿತವಾಗಲು ಅಪೌಷ್ಟಿಕತೆ, ಪದೇ ಪದೇ ಸೋಂಕು ಮತ್ತು ಅಸಮರ್ಪಕ ಬೌದ್ಧಿಕ-ಸಾಮಾಜಿಕ ಉತ್ತೇಜಕಗಳ ಕೊರತೆ ಕಾರಣ. ಅಂಕಿ ಅಂಶಗಳ ಪೈಕಿ ಬಿಹಾರದ ಶೇಕಡ 21ರಷ್ಟು ಮಕ್ಕಳು ತೀರಾ ಕಡಿಮೆ ತೂಕ ಹೊಂದಿದ್ದಾರೆ. ಯುನಿಸೆಫ್ ಪ್ರಕಾರ, ಈ ವರ್ಗದ ಮಕ್ಕಳಲ್ಲಿ ಅವರ ಎತ್ತರಕ್ಕೆ ಹೋಲಿಸಿದರೆ ತೂಕ ತೀರಾ ಕಡಿಮೆ ಇರುತ್ತದೆ ಹಾಗೂ 5 ವರ್ಷದೊಳಗಿನ ಇಂಥ ಮಕ್ಕಳು ಮೃತಪಡುವ ಸಾಧ್ಯತೆ ಅಧಿಕವಾಗಿರುತ್ತದೆ.

ಸಾಮಾನ್ಯವಾಗಿ ಇದಕ್ಕೆ ಆಹಾರದ ಕೊರತೆ ಅಥವಾ ಗಂಭೀರ ಕಾಯಿಲೆ ಕಾರಣ. ವಿಶ್ವದ 24 ಅಭಿವೃದ್ಧಿಶೀಲ ದೇಶಗಳಲ್ಲಿ ಇಂಥ ಮಕ್ಕಳು ಶೇಕಡ 10ಕ್ಕಿಂತ ಹೆಚ್ಚಾಗಿದ್ದಾರೆ. ಈ ಗಂಭೀರ ಸಮಸ್ಯೆಗೆ ತುರ್ತು ಸ್ಪಂದನೆಯ ಅಗತ್ಯವಿದೆ ಎನ್ನುವುದನ್ನು ಇದು ಸೂಚಿಸುತ್ತದೆ. ಸರ್ಕಾರ ಅಪೌಷ್ಟಿಕತೆಯನ್ನು ತಡೆಯಲು ಹಲವು ಯೋಜನೆಗಳನ್ನು ಹಾಕಿಕೊಂಡಿದ್ದರೂ, ಮಹತ್ವದ ಸುಧಾರಣೆಯಾಗಿಲ್ಲ ಎನ್ನುವುದನ್ನು ಅಂಕಿ ಅಂಶ ತೋರಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News